ಮರಳಿದ 800 ವರ್ಷಗಳ ನಳಂದ ವಿವಿ ವೈಭವ

KannadaprabhaNewsNetwork |  
Published : Jun 20, 2024, 01:02 AM ISTUpdated : Jun 20, 2024, 10:21 AM IST
ನಳಂದಾ | Kannada Prabha

ಸಾರಾಂಶ

12ನೇ ಶತಮಾನದಲ್ಲಿ ಧ್ವಂಸವಾಗಿದ್ದ ನಳಂದ ವಿವಿಗೆ ಈಗ ಹೊಸ ಕ್ಯಾಂಪಸ್‌ ಬಂದಿದ್ದು, ಬಿಹಾರದಲ್ಲಿ ₹1769 ಕೋಟಿ ವೆಚ್ಚದಲ್ಲಿ ಕಟ್ಟಿದ ಕಟ್ಟಡ ಉದ್ಘಾಟಿಸಿದ ಮೋದಿ ಬಿಹಾರದ ರಾಜಧಾನಿ ಪಟನಾದಿಂದ 95 ಕಿ.ಮೀ. ದೂರದಲ್ಲಿ ಮರುಸ್ಥಾಪಿತ ನಳಂದಾ ವಿವಿಯಲ್ಲಿ ಸಂಚರಿಸಿ ಮಾಹಿತಿ ಸಂಗ್ರಹಿಸಿದರು.

  ರಾಜಗೀರ್ (ಬಿಹಾರ) :  ನಳಂದ ವಿಶ್ವವಿದ್ಯಾಲಯ.. ಭಾರತದ ಅತಿ ಹಳೆಯ ವಿಶ್ವವಿದ್ಯಾಲಯ ಎಂಬ ಖ್ಯಾತಿ ಪಡೆದಿರುವ,1600 ವರ್ಷಗಳಷ್ಟು ಪುರಾತನ ವಿಶ್ವವಿದ್ಯಾಲಯವನ್ನು 800 ವರ್ಷಗಳ ಹಿಂದೆ ದಾಳಿಕೋರರು ಧ್ವಂಸ ಮಾಡಿದ್ದರು.

 ಅದರ ಗತವೈಭವ ಇದೀಗ ಮರಳಿದೆ. ನಳಂದ ವಿವಿಯ 1749 ಕೋಟಿ ರು. ವೆಚ್ಚದ 455 ಎಕರೆ ಹೊಸ ಕ್ಯಾಂಪಸ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಾರ್ಪಣೆ ಮಾಡಿದ್ದಾರೆ.ಪಟನಾದ ಆಗ್ನೇಯಕ್ಕೆ ಸುಮಾರು 95 ಕಿಮೀ ದೂರದಲ್ಲಿರುವ ನಳಂದ ವಿಶ್ವವಿದ್ಯಾಲಯವು ಸುಮಾರು 1600 ವರ್ಷಗಳ ಹಿಂದೆ ಸ್ಥಾಪಿತವಾಗಿತ್ತು ಹಾಗೂ ವಿಶ್ವದ ಮೊದಲ ವಸತಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿತ್ತು. 

ಇದನ್ನು ಗುಪ್ತ ರಾಜವಂಶದ ಕುಮಾರಗುಪ್ತ-1 (ಕ್ರಿ.ಶ. 413-455) ಸ್ಥಾಪಿಸಿದ್ದ. ಆದರೆ 12ನೇ ಶತಮಾನದಲ್ಲಿ ಇದನ್ನು ದಾಳಿಕೋರರು ಧ್ವಂಸಗೊಳಿಸಿದ್ದರು. 2016ರ ಜುಲೈನಲ್ಲಿ ನಳಂದ ವಿವಿಯ ಅವಶೇಷಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿತ್ತು.ಆದರೆ ಇದಕ್ಕೂ 6 ವರ್ಷ ಮುನ್ನ ವಿವಿಯನ್ನು ಮರುಸ್ಥಾಪಿಸುವ ಸಲುವಾಗಿ 2010ರಲ್ಲಿ ನಳಂದ ವಿವಿ ಕಾಯ್ದೆಯ ಮೂಲಕ ವಿವಿಯನ್ನು ಸ್ಥಾಪಿಸಲಾಯಿತು. ಅದು 2014ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಈಗ ಅದರ ಕ್ಯಾಂಪಸ್‌ 455 ಎಕರೆ ಪ್ರದೇಶದಲ್ಲಿ 1749 ಕೋಟಿ ರು. ವೆಚ್ಚದಲ್ಲಿ ತಲೆ ಎತ್ತಿದೆ.

ಈ ವಿಶ್ವವಿದ್ಯಾಲಯವು ಭಾರತವನ್ನು ಹೊರತುಪಡಿಸಿ 17 ಇತರ ರಾಷ್ಟ್ರಗಳ ಪಾಲುದಾರಿಕೆ ಹೊಂದಿದೆ. ಅವು: ಆಸ್ಟ್ರೇಲಿಯಾ, ಬಾಂಗ್ಲಾದೇಶ, ಭೂತಾನ್, ಬ್ರೂನಿ, ಕಾಂಬೋಡಿಯಾ, ಚೀನಾ, ಇಂಡೋನೇಷಿಯಾ, ಲಾವೋಸ್, ಮಾರಿಷಸ್, ಮ್ಯಾನ್ಮಾರ್, ನ್ಯೂಜಿಲೆಂಡ್, ಪೋರ್ಚುಗಲ್, ಸಿಂಗಾಪುರ, ದಕ್ಷಿಣ ಕೊರಿಯಾ, ಶ್ರೀಲಂಕಾ, ಥಾಯ್ಲೆಂಡ್‌ ಮತ್ತು ವಿಯೆಟ್ನಾಂ. ಈ ದೇಶಗಳು ಭಾರತದ ಜತೆ ಪಾಲುದಾರಿಕೆಗೆ ಹಲವು ವರ್ಷಗಳ ಹಿಂದೆ ಸಹಿ ಹಾಕಿದ್ದವು.

ಕ್ಯಾಂಪಸ್‌ ಹೇಗಿದೆ?:

ಕ್ಯಾಂಪಸ್‌ನಲ್ಲಿ 40 ತರಗತಿ ಕೊಠಡಿಗಳೊಂದಿಗೆ ಎರಡು ಶೈಕ್ಷಣಿಕ ಬ್ಲಾಕ್‌ಗಳಿವೆ, ಒಟ್ಟು 1,900 ಆಸನ ಸಾಮರ್ಥ್ಯವಿದೆ. ಇದು ತಲಾ 300 ಆಸನಗಳ ಸಾಮರ್ಥ್ಯದ ಎರಡು ಸಭಾಂಗಣಗಳನ್ನು ಹೊಂದಿದೆ. ಸುಮಾರು 550 ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊಂದಿರುವ ಹಾಸ್ಟೆಲ್ ಇದೆ. ಇದು ಅಂತಾರಾಷ್ಟ್ರೀಯ ಕೇಂದ್ರ, 2000 ವ್ಯಕ್ತಿಗಳಿಗೆ ಅವಕಾಶ ಕಲ್ಪಿಸುವ ಆಂಫಿಥಿಯೇಟರ್, ಅಧ್ಯಾಪಕರ ಕ್ಲಬ್ ಮತ್ತು ಕ್ರೀಡಾ ಸಂಕೀರ್ಣ ಸೇರಿದಂತೆ ಹಲವಾರು ಇತರ ಸೌಲಭ್ಯಗಳನ್ನು ಹೊಂದಿದೆ.ಸೌರ ಸ್ಥಾವರ, ನೀರಿನ ಸಂಸ್ಕರಣಾ ಘಟಕಗಳು, ತ್ಯಾಜ್ಯ ನೀರು ಮರುಬಳಕೆ ಘಟಕ, 100 ಎಕರೆ ಜಲ ಮೂಲವನ್ನೂ ಹೊಂದಿದೆ.

------

ಭಾರತದ ಅತಿ ಪುರಾತನ ವಿವಿ1600 ವರ್ಷಗಳ ಹಿಂದೆ ನಳಂದಾ ವಿವಿ ಸ್ಥಾಪನೆ 800 ವರ್ಷದ ಹಿಂದೆ 

ದಾಳಿಕೋರರಿಂದ ಧ್ವಂಸ 

2014ರಲ್ಲಿ ನಳಂದ ವಿವಿ ಪುನಾರಂಭ 

2024ರಲ್ಲಿ ನೂತನ ಭವ್ಯ ಕ್ಯಾಂಪಸ್‌ ನಿರ್ಮಾಣ

455 ಎಕರೆ ಜಾಗದಲ್ಲಿ ನಳಂದಾ ವಿವಿ ನಿರ್ಮಾಣ

1749 ಕೋಟಿ ರು. ವೆಚ್ಚದಲ್ಲಿ ವಿವಿ ಮರುನಿರ್ಮಾಣ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ