ಪಿಟಿಐ ಲಖನೌಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿರುವಾಗಲೇ, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದಲ್ಲಿ ಸೋಮವಾರ ಒಂದೇ ದಿನ 10 ಲಕ್ಷ ಕೋಟಿ ರು. ವೆಚ್ಚದ ಬರೋಬ್ಬರಿ 14 ಸಾವಿರ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಭಾರತದ ಇತಿಹಾಸದಲ್ಲಿ ಯಾವುದೇ ರಾಜಕೀಯ ನಾಯಕರು ಒಂದೇ ದಿನ ಇಷ್ಟೊಂದು ಯೋಜನೆಗಳಿಗೆ ಚಾಲನೆ ನೀಡಿದ ನಿದರ್ಶನ ಇಲ್ಲ ಎಂದು ಹೇಳಲಾಗುತ್ತಿದೆ.
ಉತ್ಪಾದನೆ, ನವೀಕರಿಸಬಲ್ಲ ಇಂಧನ, ಆಹಾರ ಸಂಸ್ಕರಣೆ, ವಸತಿ ಹಾಗೂ ರಿಯಲ್ ಎಸ್ಟೇಟ್, ಆತಿಥ್ಯ, ಮನರಂಜನಾ ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳು ಇವಾಗಿವೆ.
ರೆಡ್ ಟೇಪ್ ಸಂಸ್ಕೃತಿ ಈಗ ಇಲ್ಲ: ಇದೇ ವೇಳೆ ಮಾತನಾಡಿದ ಪ್ರಧಾನಿ, ಏಳು ವರ್ಷಗಳ ‘ಡಬಲ್ ಎಂಜಿನ್’ ಸರ್ಕಾರದ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ ವ್ಯಾಪಾರ, ಅಭಿವೃದ್ಧಿ ಹಾಗೂ ನಂಬಿಕೆಯ ವಾತಾವರಣ ಸೃಷ್ಟಿಯಾಗಿದೆ.
ಹೂಡಿಕೆದಾರರಿಗೆ ‘ರೆಡ್ ಕಾರ್ಪೆಟ್’ ಹಾಕುವ ಮೂಲಕ ‘ರೆಡ್‌ಟೇಪ್’ ಸಂಸ್ಕೃತಿಯನ್ನು ಬದಲಿಸಲಾಗಿದೆ ಎಂದು ಹೇಳಿದರು.ಉತ್ತರಪ್ರದೇಶದಲ್ಲಿ ಈ ರೀತಿಯ ಹೂಡಿಕೆ ಹಾಗೂ ಉದ್ಯೋಗದ ವಾತಾವರಣವನ್ನು ಏಳೆಂಟು ವರ್ಷಗಳ ಹಿಂದೆ ಯಾರೊಬ್ಬರು ಯೋಚಿಸಲೂ ಆಗುತ್ತಿರಲಿಲ್ಲ.
ಅಪರಾಧ, ಗಲಭೆಗಳು ಆಗ ಸಾಮಾನ್ಯವಾಗಿದ್ದವು. ಉತ್ತರಪ್ರದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರೆ ಆಗ ಯಾರೂ ನಂಬುತ್ತಿರಲಿಲ್ಲ. ಆದರೆ ಕಳೆದ ಏಳು ವರ್ಷಗಳ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ ಅಪರಾಧಗಳು ತಗ್ಗಿವೆ.
ಉದ್ಯಮ ಸಂಸ್ಕೃತಿ ವಿಸ್ತರಣೆಯಾಗಿದೆ ಎಂದು ಹೇಳಿದರು.ಉದ್ದೇಶ ಇದ್ದರೆ ಅಭಿವೃದ್ಧಿಯಾಗುವುದನ್ನು ಯಾರಿಂದಲೂ ತಡೆಯಲು ಆಗುವುದಿಲ್ಲ ಎಂಬುದನ್ನು ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ತೋರಿಸಿದೆ.
ಉತ್ತರಪ್ರದೇಶದಿಂದ ರಫ್ತು ಡಬಲ್ ಆಗಿದೆ. ವಿದ್ಯುತ್ ಉತ್ಪಾದನೆ ಹಾಗೂ ಪೂರೈಕೆಯಲ್ಲಿ ರಾಜ್ಯ ಅತ್ಯುತ್ತಮ ಸಾಧನೆ ಮಾಡಿದೆ. ದೇಶದಲ್ಲೇ ಅತಿ ಹೆಚ್ಚು ಎಕ್ಸ್‌ಪ್ರೆಸ್ ವೇಗಳು ಇರುವ ರಾಜ್ಯ ಉತ್ತರಪ್ರದೇಶವಾಗಿದೆ ಎಂದರು.