ಇಂದಿನಿಂದ ಪ್ರಧಾನಿ ಕಚೇರಿಗೆ ಹೊಸ ವಿ‍ಳಾಸ

KannadaprabhaNewsNetwork |  
Published : Feb 14, 2026, 02:00 AM ISTUpdated : Feb 14, 2026, 04:42 AM IST
pm modi pmo seva teerth

ಸಾರಾಂಶ

ಬ್ರಿಟಿಷರ ಕಾಲದ ಸೌಥ್‌ ಬ್ಲಾಕ್‌ ಕಟ್ಟಡದಿಂದ ರಾಷ್ಟ್ರಪತಿ ಭವನ ಸಮೀಪದ ಕಟ್ಟಡಕ್ಕೆ ವರ್ಗಾವಣೆಗೊಂಡಿರುವ ತಮ್ಮ ಅಧಿಕೃತ ಕಚೇರಿ ಸೇವಾ ತೀರ್ಥವನ್ನು ಪ್ರಧಾನಿ ಮೋದಿ ಶುಕ್ರವಾರ ಅಧಿಕೃತವಾಗಿ ಉದ್ಘಾಟಿಸಿದರು.

 ನವದೆಹಲಿ: ಬ್ರಿಟಿಷರ ಕಾಲದ ಸೌಥ್‌ ಬ್ಲಾಕ್‌ ಕಟ್ಟಡದಿಂದ ರಾಷ್ಟ್ರಪತಿ ಭವನ ಸಮೀಪದ ಕಟ್ಟಡಕ್ಕೆ ವರ್ಗಾವಣೆಗೊಂಡಿರುವ ತಮ್ಮ ಅಧಿಕೃತ ಕಚೇರಿ ಸೇವಾ ತೀರ್ಥವನ್ನು ಪ್ರಧಾನಿ ಮೋದಿ ಶುಕ್ರವಾರ ಅಧಿಕೃತವಾಗಿ ಉದ್ಘಾಟಿಸಿದರು.

1931ರಲ್ಲಿ ಇದೇ ದಿನ ನವದೆಹಲಿಯನ್ನು ಭಾರತದ ಆಧುನಿಕ ರಾಜಧಾನಿ ಎಂದು ಘೋಷಿಸಲಾಗಿತ್ತು. ಇದರ 95ನೇ ವರ್ಷಾಚರಣೆ ಸಂದರ್ಭದಲ್ಲೇ ಇದೀಗ ಪ್ರಧಾನಿ ಕಚೇರಿ ಸ್ಥಳಾಂತರಿಸಲಾಗಿದೆ. ಕೇಂದ್ರ ಸಚಿವರಾದ ಮನೋಹರ್‌ ಲಾಲ್‌ ಮತ್ತು ಜಿತೇಂದ್ರ ಸಿಂಗ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಸೇರಿ ಪ್ರಧಾನಿ ಕಾರ್ಯಾಲಯದ ಪ್ರಮುಖ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ಸೇವಾ ತೀರ್ಥ ಕಟ್ಟಡ ಸಂಕೀರ್ಣಕ್ಕೆ ಆಗಮಿಸಿದ ಮೋದಿ ಪಿಎಂಒ ಕಚೇರಿ, ರಾಷ್ಟ್ರೀಯ ಭದ್ರತಾ ಸಮಿತಿ ಕಾರ್ಯಾಲಯ ಮತ್ತು ಕ್ಯಾಬಿನೆಟ್‌ ಕಾರ್ಯಾಲಯ ಉದ್ಘಾಟಿಸಿದರು. ಬಳಿಕ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಗಣೇಶನ ಮೂರ್ತಿಗೆ ಹೂವಿನ ಮೂರ್ತಿ ಹಾಕಿದ ಪ್ರಧಾನಿ, ಮಹಿಳಾ ಕಲ್ಯಾಣ, ರೈತರು, ಯುವಕರು ಮತ್ತು ಸಂಕಷ್ಟದಲ್ಲಿರುವವರ ಪರವಾದ ನಾಲ್ಕು ಪ್ರಮುಖ ನಿರ್ಧಾರಗಳಿಗೆ ಸಹಿಹಾಕಿದರು.

ಈ ಹಿಂದೆ ಪಿಎಂಒ, ಕ್ಯಾಬಿನೆಟ್‌ ಕಾರ್ಯಾಲಯ ಮತ್ತು ರಾಷ್ಟ್ರೀಯ ಭದ್ರತಾ ಸಮಿತಿ ಕಾರ್ಯಾಲಯ ಬೇರೆ ಬೇರೆ ಕಡೆ ಇದ್ದವು. ಇದರಿಂದ ಸರ್ಕಾರದ ಉನ್ನತಮಟ್ಟದಲ್ಲಿ ಸಂವಹನಕ್ಕೆ ಸಮಸ್ಯೆಯಾಗುತ್ತಿತ್ತು.

ಇನ್ನು ಸೇವಾ ತೀರ್ಥ ಕಚೇರಿ ಜತೆಗೆ ಮೋದಿ ಅವರು ಆರೋಗ್ಯ, ಹಣಕಾಸು ಸೇರಿ ಪ್ರಮುಖ ಸಚಿವಾಲಯಗಳಿರುವ ಕರ್ತವ್ಯ ಭವನ-1, ಕರ್ತವ್ಯ ಭವನ-2 ಕಟ್ಟಡವನ್ನೂ ಉದ್ಘಾಟಿಸಿದರು.

4 ಪ್ರಮುಖ ನಿರ್ಧಾರಗಳ ಕಡತಗಳಿಗೆ ಮೋದಿ ಸಹಿ

ಹೊಸ ಕಚೇರಿಗೆ ಕಾಲಿಡುತ್ತಿದ್ದಂತೆ ಪ್ರಧಾನಿ ಮೋದಿ ಅವರು ನಾಲ್ಕು ಹೊಸ ನಿರ್ಧಾರಗಳಿರುವ ಕಡತಗಳಿಗೆ ಸಹಿಹಾಕಿದರು. ಅವು,

ಪಿಎಂ ರಾಹತ್‌ ಸ್ಕೀಂ:

ಈ ಯೋಜನೆಯಡಿ ಅಪಘಾತದಲ್ಲಿ ಸಂತ್ರಸ್ತರಾದವರು 1.5 ಲಕ್ಷ ರು. ವರೆಗೆ ನಗದು ರಹಿತ ಚಿಕಿತ್ಸೆ ಪಡೆಯಲಿದ್ದಾರೆ. ತುರ್ತು ಚಿಕಿತ್ಸೆ ಸಿಗದೆ ಆಗುವ ಸಾವು ತಡೆಯಲು ಈ ಯೋಜನೆ ಜಾರಿ ತರಲಾಗಿದೆ.

6 ಕೋಟಿ ಲಕ್‌ಪತಿ ದೀದಿಗಳು:

ಮಾರ್ಚ್‌ 2027ರ ಗುರಿಗೂ ಮೊದಲೇ ಅಂದರೆ ಲಕ್‌ಪತಿ ದೀದಿ ಯೋಜನೆ ಜಾರಿಗೆ ಬಂದ ಎರಡು ವರ್ಷಕ್ಕೂ ಮೊದಲೇ ಲಕ್‌ಪತಿ ದೀದಿಗಳ ಸಂಖ್ಯೆ 3 ಕೋಟಿ ದಾಟಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೀಗ 2029ರ ಮಾರ್ಚ್‌ ವೇಳೆಗೆ ಲಕ್‌ಪತಿ ದೀದಿಗಳ ಸಂಖ್ಯೆ 6 ಕೋಟಿಗೇರಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಮೋದಿ ನಿಗದಿಪಡಿಸಿದರು.

ಕೃಷಿ ಮೂಲ ಸೌಕರ್ಯ ನಿಧಿ ಹೆಚ್ಚಳ:

ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೃಷಿ ಮೂಲಸೌಕರ್ಯ ನಿಧಿಯನ್ನು 2 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಈ ಮೂಲಕ ಒಟ್ಟಾರೆ ಕೃಷಿ ಮೌಲ್ಯ ಸರಪಳಿ ಬಲಪಡಿಸುವ ಉದ್ದೇಶ ಹೊಂದಲಾಗಿದೆ.

ಸ್ಟಾರ್ಟಪ್‌ ಇಂಡಿಯಾ ಫಂಡ್‌ ಹೆಚ್ಚಳ:

ಡೀಪ್‌ ಟೆಕ್‌, ಆರಂಭಿಕ ಹಂತದ ಐಡಿಯಾಗಳು, ಅತ್ಯಾಧುನಿಕ ಉತ್ಪಾದನೆ ಮತ್ತು ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡಲು ದೇಶದಲ್ಲಿ ನಾವೀನ್ಯತೆ ಪೂರಕ ಪರಿಸರ ವ್ಯವಸ್ಥೆ ಬಲಪಡಿಸಲು 10 ಸಾವಿರ ಕೋಟಿ ರು. ಮೂಲನಿಧಿಯೊಂದಿಗೆ ಸ್ಟಾರ್ಟ್‌ಅಫ್‌ ಇಂಡಿಯಾ ಫಂಡ್‌ ಆಫ್‌ ಫಂಡ್‌ 2.0 ಸ್ಥಾಪಿಸಲು ನಿರ್ಧರಿಸಲಾಗಿದೆ.

ಸೇವಾ ತೀರ್ಥ, ಕರ್ತವ್ಯ ಭವನ ವಿಕಸಿತ ಭಾರತದ ಮೈಲುಗಲ್ಲು: ಮೋದಿ

ನವದೆಹಲಿ: ‘ಪ್ರಧಾನಿ ಕಚೇರಿಯಾದ ಸೇವಾತೀರ್ಥ ಮತ್ತು ಸಚಿವಾಲಯಗಳನ್ನೊಳಗೊಂಡ ನೂತನ ಕಟ್ಟಡವು ನಾಗರಿಕ ಕೇಂದ್ರಿತ ಆಡಳಿತ ಮತ್ತು ರಾಷ್ಟ್ರೀಯ ಪ್ರಗತಿಗೆ ಸರ್ಕಾರದ ಬದ್ಧತೆಯ ಪ್ರತೀಕವಾಗಿದ್ದು, ವಿಕಸಿತ ಭಾರತದ ಕಡೆಗಿನ ಪಯಣದಲ್ಲಿ ಮಹತ್ವದ ಮೈಲುಗಲ್ಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಸೇವಾ ತೀರ್ಥ ಮತ್ತು 2 ಸಚಿವಾಲಯಗಳಾದ ಕರ್ತವ್ಯಭವನ 1 ಮತ್ತು 2ನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಇಷ್ಟು ವರ್ಷಗಳ ಕಾಲ ರಕ್ಷಣೆ, ಗೃಹ, ಹಣಕಾಸು ಸಚಿವಾಲಯಗಳಿದ್ದ ಉತ್ತರ ಮತ್ತು ದಕ್ಷಿಣ ಬ್ಲಾಕ್‌ಗಳು ಬ್ರಿಟಿಷ್ ಸಾಮ್ರಾಜ್ಯದ ಆದರ್ಶಗಳನ್ನು ಸಾಕಾರಗೊಳಿಸಲು ನಿರ್ಮಿಸಲಾಗಿತ್ತು. ಆದರೆ ಇದೀಗ ದೇಶವಾಸಿಗಳ ಆಕಾಂಕ್ಷೆಗಳನ್ನು ನನಸಾಗಿಸಲು ಸೇವಾ ತೀರ್ಥ ಮತ್ತು ಕರ್ತವ್ಯ ಭವನವನ್ನು ನಿರ್ಮಿಸಲಾಗಿದೆ. ಇಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರಗಳು ಆಡಳಿತಗಾರನ ಇಚ್ಛೆಯನ್ನು ಪ್ರತಿಬಿಂಬಿಸುವ ಬದಲು 140 ಕೋಟಿ ಜನರ ಮಹತ್ವಾಕಾಂಕ್ಷೆಯನ್ನು ಮುನ್ನಡೆಸಲು ಅಡಿಪಾಯವಾಗಿರಲಿದೆ’ ಎಂದು ಸಂತಸ ವ್ಯಕ್ತಪಡಿಸಿದ ಮೋದಿ, ಎರಡೂ ಕಟ್ಟಡಗಳನ್ನು ಭಾರತೀಯರಿಗೆ ಅರ್ಪಿಸುವುದಾಗಿ ಹೇಳಿದರು.

ಬ್ರಿಟಿಷ್‌ ಪರಂಪರೆಯಿಂದ ಮುಕ್ತಿ:ಈ ಹಿಂದಿನ ಕಟ್ಟಡಗಳ ಬಗ್ಗೆ ವಿವರಿಸಿದ ಮೋದಿ, ‘ಸ್ವಾತಂತ್ರ್ಯಾನಂತರ ದೇಶದ ಭವಿಷ್ಯವನ್ನು ರೂಪಿಸುವ ಮಹತ್ವದ ನಿರ್ಧಾರಗಳನ್ನು ಉತ್ತರ ಬ್ಲಾಕ್‌ ಮತ್ತು ದಕ್ಷಿಣ ಬ್ಲಾಕ್‌ ಕಟ್ಟಡಗಳಲ್ಲಿ ತೆಗೆದುಕೊಳ್ಳಲಾಯಿತು. ಆದರೆ ಇವುಗಳು ಬ್ರಿಟಿಷರ ಚಿಹ್ನೆಯಾಗಿ ನಿರ್ಮಿಸಲಾದ ಕಟ್ಟಡಗಳು ಎಂಬುದನ್ನು ಮರೆಯಬಾರದು. ಬ್ರಿಟಿಷರ ಇಚ್ಛೆಯಂತೆಯೇ ರಾಷ್ಟ್ರರಾಜಧಾನಿಯನ್ನು ಕೋಲ್ಕತಾದಿಂದ ರೈಸಿನಾ ಹಿಲ್‌ಗೆ ಸ್ಥಳಾಂತರಿಸಲಾಯಿತು’ ಎಂದರು. ಮುಂದುವರೆದು, ‘ಸ್ವಾತಂತ್ರ್ಯ ಸಿಕ್ಕಿದ ಬಳಿಕವೂ ಗುಲಾಮಿತನದ ಚಿಹ್ನೆಗಳನ್ನು ಉಳಿಸಿಕೊಂಡು ಬಂದಿರುವುದು ದುರದೃಷ್ಟಕರ. ದೇಶ ವಿಕಸಿತ ಭಾರತದತ್ತ ಸಾಗುತ್ತಿರುವ ಹೊತ್ತಿನಲ್ಲಿ ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತರಾಗಿ ಮುನ್ನಡೆಯುವುದು ಅಗತ್ಯ. ಹೆಸರು ಬದಲಾವಣೆ ಇದರ ಸಂಕೇತ’ ಎಂದು ಹೇಳಿದರು.

ಐತಿಹಾಸಿಕ ದಿನ:‘ವಿಜಯ ಏಕಾದಶಿಯನ್ನು ಶಾಸ್ತ್ರಗಳಲ್ಲಿ ಮಹತ್ವಪೂರ್ಣವೆಂದು ಪರಿಗಣಿಸಲಾಗಿದೆ. ಈ ದಿನ ಏನೇ ಮಾಡಿದರೂ ಜಯ ಖಚಿತವೆಂಬ ನಂಬಿಕೆಯಿದೆ. ಇಂತಹ ಐತಿಹಾಸಿಕ ದಿನದಂದು ಅಭಿವೃದ್ಧಿಹೊಂದಿದ ಭಾರತದ ಕನಸಿನೊಂದಿಗೆ ಹೊಸ ಕಟ್ಟಡಕ್ಕೆ ಕಾಲಿಡುತ್ತಿದ್ದೇವೆ’ ಎಂದು ಪ್ರಧಾನಿ ಮೋದಿಯವರು ಬಣ್ಣಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹಸೀನಾ ಸರ್ಕಾರ ಉರುಳಿಸಿದ ಜೆನ್‌ಝೀಗಳಿಗೆ ಹೀನಾಯ ಸೋಲು
ಸೇವಾ ತೀರ್ಥ ಕಟ್ಟಡಕ್ಕೆ ಬೇಲೂರು ಚೆನ್ನಕೇಶವ ದೇಗುಲ ಸ್ಫೂರ್ತಿ!