ಅಂಬಿಕಾಪುರ (ಛತ್ತೀಸ್‌ಗಢ) : ಕಾಂಗ್ರೆಸ್ ಪಕ್ಷ ಜನರ ಸಂಪತ್ತನ್ನು ಕಿತ್ತುಕೊಂಡು ಅದನ್ನು ಆಯ್ದ ಜನರಿಗೆ ಹಂಚುತ್ತದೆ ಎಂದು ಸತತ ಮೂರು ದಿನ ವಾಗ್ದಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ ಅಮೆರಿಕದ ಮಾದರಿಯಲ್ಲಿ ಭಾರತದಲ್ಲೂ ಪಿತ್ರಾರ್ಜಿತ ಆಸ್ತಿ ತೆರಿಗೆ ಜಾರಿ ಕುರಿತ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಸಲಹೆ ಬಗ್ಗೆ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ನ ಈ ಹೊಸ ಸಲಹೆ ಜನರ ಆಸ್ತಿ ಮತ್ತು ಹಕ್ಕು ಕಸಿದುಕೊಳ್ಳುವ ಆ ಪಕ್ಷದ ಅಪಾಯಕಾರಿ ಉದ್ದೇಶವನ್ನು ಮುನ್ನೆಲೆಗೆ ತಂದಿದೆ ಎಂದು ಮೋದಿ ಕಿಡಿಕಾರಿದ್ದಾರೆ.ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ಬುಧವಾರ ಬಿಜೆಪಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಕಾಂಗ್ರೆಸ್‌ನ ಅಪಾಯಕಾರಿ ಉದ್ದೇಶಗಳು ಒಂದೊಂದಾಗಿ ಮುನ್ನೆಲೆಗೆ ಬರುತ್ತಿದೆ.
ಇದೀಗ ಅವರು ನಾವು ಪಿತ್ರಾರ್ಜಿತ ತೆರಿಗೆ ಜಾರಿ ಮಾಡುತ್ತೀವಿ ಎನ್ನುತ್ತಿದ್ದಾರೆ’ ಎಂದು ದೂರಿದರು.‘ಶಾಹಿ ಪರಿವಾರ (ಗಾಂಧಿ ಕುಟುಂಬದ)ದ ಶೆಹಜಾದಾ (ರಾಹುಲ್ ಗಾಂಧಿ)ನ ಸಲಹೆಗಾರರು (ಸ್ಯಾಮ್ ಪಿತ್ರೋಡಾ) ಮಧ್ಯಮವರ್ಗದ ಮೇಲೆ ಮತ್ತು ಬೆವರು ಸುರಿಸಿ ದುಡಿಯುವವರ ಮೇಲೆ ಇನ್ನಷ್ಟು ತೆರಿಗೆ ಹಾಕಬೇಕು ಎಂದು ಸಲಹೆ ನೀಡಿದ್ದರು. ಆದರೆ ಕಾಂಗ್ರೆಸ್ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜನರು ತಮ್ಮ ಪೋಷಕರಿಂದ ಪಡೆದ ಪಿತ್ರಾರ್ಜಿತ ಆಸ್ತಿಯ ಮೇಲೂ ತೆರಿಗೆ ಹಾಕುತ್ತೀವಿ ಎಂದಿದೆ.
ಇದೀಗ ಅವರ ಪಂಜಾ (ಕಾಂಗ್ರೆಸ್ ಪಕ್ಷದ ಹಸ್ತದ ಚಿಹ್ನೆ) ನಿಮ್ಮ ಮಕ್ಕಳ ಕೈಯಿಂದ ಆಸ್ತಿಯನ್ನೂ ಕಿತ್ತುಕೊಳ್ಳಲಿದೆ. ಲೂಟ್ ಆಫ್ ಕಾಂಗ್ರೆಸ್ ಜಿಂದಗೀ ಕೆ ಸಾತ್ ಭೀ, ಜಿಂದಗೀ ಕೆ ಬಾದ್ ಭೀ (ಕಾಂಗ್ರೆಸ್‌ನ ಲೂಟಿ ಜೀವ ಇದ್ದಾಗಲೂ, ಜೀವ ಹೋದ ಬಳಿಕವೂ) ಎಂಬುದೇ ಕಾಂಗ್ರೆಸ್‌ನ ಮಂತ್ರ’ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.‘ನೀವು ಬದುಕಿರುವವರೆಗೂ ಕಾಂಗ್ರೆಸ್ ನಿಮ್ಮ ಮೇಲೆ ಹೆಚ್ಚೆಚ್ಚು ತೆರಿಗೆ ಹಾಕಲಿದೆ; ನಿಮ್ಮ ನಿಧನದ ಬಳಿಕ ನಿಮ್ಮ ಮೇಲೆ ಪಿತ್ರಾರ್ಜಿತ ತೆರಿಗೆಯ ಹೊರೆ ಹೊರಿಸಲಿದೆ. ಅವರು (ಕಾಂಗ್ರೆಸ್) ನಿಮ್ಮ ಆಸ್ತಿ ಮತ್ತು ನಿಮ್ಮ ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳಲು ಬಯಸುತ್ತಿದ್ದಾರೆ.
ಸಾಮಾನ್ಯ ಭಾರತೀಯ ತನ್ನ ಆಸ್ತಿಯನ್ನು ತನ್ನ ಮಕ್ಕಳಿಗೆ ನೀಡುವುದನ್ನು ಕಾಂಗ್ರೆಸ್ ತಿರಸ್ಕರಿಸುತ್ತಿದೆ. ಮೌಲ್ಯದಿಂದ ಹಿಡಿದು ಸಂಸ್ಮೃತಿಯವರೆಗೆ ನಮ್ಮ ದೇಶ ಗ್ರಾಹಕ ದೇಶವಲ್ಲ, ನಾವು ಸಂಪತ್ತಿನ ಸಂಗ್ರಹ, ಸಮೃದ್ಧಿ ಮತ್ತು ಉಳಿಸುವುದರಲ್ಲಿ ನಂಬಿಕೆ ಹೊಂದಿದ್ದೇವೆ. ಇಂದು ನಮ್ಮ ಪ್ರಕೃತಿ ಮತ್ತು ಪರಿಸರ ಉಳಿದಿರುವುದು ನಮ್ಮ ಈ ಮೌಲ್ಯಗಳೇ ಕಾರಣ. ನಮ್ಮ ವೃದ್ಧ ಪೋಷಕರು, ಅಜ್ಜ, ಅಜ್ಜಿಯಂದಿರು ತಮ್ಮ ಆಭರಣಗಳನ್ನು ತಮ್ಮ ಮೊಮ್ಮಕ್ಕಳು ಮುಂದೆ ತಮ್ಮ ಮದುವೆ ವೇಳೆ ಧರಿಸಲಿ ಎಂದು ಬಯಸಿ ಸುರಕ್ಷಿತವಾಗಿ ಇಟ್ಟುಕೊಂಡಿರುತ್ತಾರೆ.
ನಮ್ಮ ಜನರು ಶ್ರಮಿಕರು ಮತ್ತು ತಮ್ಮ ಅಗತ್ಯಕ್ಕೆ ತಕ್ಕಂತೆ ವೆಚ್ಚ ಮಾಡುತ್ತಾರೆ ಹಾಗೂ ಹಣ ಸಂಗ್ರಹದ ಪ್ರವೃತ್ತಿ ಹೊಂದಿದ್ದಾರೆ. ಆದರೆ ಕಾಂಗ್ರೆಸ್ ನಿಮ್ಮ ಆಸ್ತಿ ಮತ್ತು ನಿಮ್ಮ ಮಕ್ಕಳ ಹಕ್ಕು ಕಿತ್ತುಕೊಳ್ಳಲು ಮುಂದಾಗಿದೆ. ಇದನ್ನು ನೀವು ಒಪ್ಪುತ್ತೀರಾ?’ ಎಂದು ಪ್ರಧಾನಿ ಪ್ರಶ್ನಿಸಿದರು.ಇದೇ ವೇಳೆ, ‘ಕಾಂಗ್ರೆಸ್‌ನ ಕಣ್ಣು ಕೇವಲ ನಿಮ್ಮ ಮೀಸಲಿನ ಮೇಲೆ ಮಾತ್ರ ಇಲ್ಲ. ಅದು ನಿಮ್ಮ ಆದಾಯ, ನಿಮ್ಮ ಮನೆ, ಅಂಗಡಿ, ಜಮೀನಿನ ಮೇಲೂ ಕಣ್ಣು ಹಾಕಿದೆ. ಕಾಂಗ್ರೆಸ್‌ನ ಶೆಹಜಾದಾ (ರಾಹುಲ್) ದೇಶದ ಪ್ರತಿ ಮನೆ, ಕಪಾಟು ಮತ್ತು ಪ್ರತಿ ಕುಟುಂಬದ ಮೇಲೂ ಎಕ್ಸ್‌ರೇ ನಡೆಸುತ್ತೀವಿ ಎಂದು ಹೇಳಿದ್ದಾರೆ.
ನಮ್ಮ ತಾಯಂದಿರು ಮತ್ತು ಸೋದರಿಯರ ಸಣ್ಣ ಸಂಪತ್ತು ಮತ್ತು ಆಭರಣಗಳನ್ನೂ ಪರಿಶೀಲನೆ ಮಾಡುವುದಾಗಿ ಹೇಳುತ್ತಿದ್ದಾರೆ. ಸುರ್ಗುಜಾದಲ್ಲಿನ ನಮ್ಮ ಆದಿವಾಸಿಗಳು ಆದಿವಾಸಿ ಆಭರಣ ಮತ್ತು ಮಂಗಳಸೂತ್ರ ಧರಿಸುತ್ತಾರೆ. ಕಾಂಗ್ರೆಸ್ ಅದೆಲ್ಲವನ್ನೂ ನಿಮ್ಮಿಂದ ಕಿತ್ತುಕೊಂಡು ಅದನ್ನು ‘ಅವರೊಂದಿಗೆ’ ಸಮಾನವಾಗಿ ಹಂಚಿಕೊಳ್ಳಲಿದೆ. ಅವರು ನಿಮ್ಮಿಂದ ಇದನ್ನೆಲ್ಲಾ ಲೂಟಿ ಮಾಡಿ ಅದನ್ನು ಯಾರಿಗೆ ಹಂಚಲಿದ್ದಾರೆ ಎಂಬುದು ನಿಮಗೆ ಗೊತ್ತಿದೆಯೇ? ಆ ತಪ್ಪನ್ನು ಮಾಡಲು ನೀವು ನನಗೆ ಅವಕಾಶ ಮಾಡಿಕೊಡುತ್ತೀರಾ’ ಎಂದು ಮೋದಿ ಕಾರ್ಯಕ್ರಮದಲ್ಲಿ ಹಾಜರಿದ್ದ ಜನರನ್ನು ಪ್ರಶ್ನಿಸಿದರು.