ಇಂದು ಸಂಸತ್ತಲ್ಲಿ ಮೋದಿ ಭಾಷಣ: ಬಿಜೆಪಿ ಸಂಸದರ ಹಾಜರಿ ಕಡ್ಡಾಯ

KannadaprabhaNewsNetwork | Updated : Feb 05 2024, 07:37 AM IST

ಸಾರಾಂಶ

ರಾಷ್ಟ್ರಪತಿಗಳ ಭಾಷಣಕ್ಕೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಉತ್ತರ ನೀಡಲಿದ್ದು, ದಿನೇ ದಿನೇ ಒಡಕು ಮೂಡುತ್ತಿರುವ ಇಂಡಿಯಾಗೆ ಮೋದಿ ಚಾಟಿ ಬೀಸುವ ಸಾಧ್ಯತೆ ಇದೆ. ಜೊತೆಗೆ ರಾಮ ಮಂದಿರ, ಸರ್ಕಾರದ ಸಾಧನೆ ಬಗ್ಗೆ ಮೋದಿ ಮಾತು ಆಡಲಿದ್ದಾರೆ ಎನ್ನಲಾಗಿದೆ.

ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಸಭೆಯಲ್ಲಿ ಮಾತನಾಡಲಿದ್ದಾರೆ.

ಈ ಹಿನ್ನೆಲೆಯಲ್ಲಿ ಸೋಮವಾರ ಎಲ್ಲಾ ಬಿಜೆಪಿ ಸಂಸದರು ಕಡ್ಡಾಯವಾಗಿ ಸಂಸತ್ತಿಗೆ ಹಾಜರಾಗಬೇಕೆಂದು ಬಿಜೆಪಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. 

ಸದ್ಯ ಮೋದಿ ಯಾವ್ಯಾವ ಅಂಶಗಳ ಬಗ್ಗೆ ಮಾತನಾಡಲಿದ್ದಾರೆ ಎಂಬುದರ ಕುರಿತು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರದ ಅಧಿವೇಶನದ ಆರಂಭದಲ್ಲಿ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. 

ಈ ವೇಳೆ ಮೋದಿ ಸರ್ಕಾರದ 10 ವರ್ಷಗಳ ಸಾಧನೆಯನ್ನು ಶ್ಲಾಘಿಸಿದ್ದರು. ಇದೀಗ ಪ್ರಧಾನಿ ಮೋದಿ ಅವರು ರಾಷ್ಟ್ರಪತಿಗಳ ಭಾಷಣಕ್ಕೆ ಉತ್ತರಿಸಲಿದ್ದಾರೆ. 

ಈ ವೇಳೆ ಅವರು ದೇಶದ ಮುಂದೆ ಸರ್ಕಾರದ ಸಾಧನೆಗಳನ್ನು ಪ್ರಸ್ತುತಪಡಿಸುವ ಸಾಧ್ಯತೆಯಿದೆ ಹಾಗೂ ಚುನಾವಣೆಯ ಕಾರ್ಯಸೂಚಿಯನ್ನು ನಿಗದಿಪಡಿಸುತ್ತಾರೆ. 

ಇದರೊಂದಿಗೆ ಮುಂಬರುವ ಚುನಾವಣೋತ್ತರ ಸರ್ಕಾರದ ಅವಧಿಯಲ್ಲಿ ಮಾಡಬೇಕಿರುವ ಕೆಲಸಗಳನ್ನು ಪಟ್ಟಿ ಮಾಡುವ ಸಾಧ್ಯತೆಯಿದೆ.

ಅಲ್ಲದೇ ಆರ್ಥಿಕ ಪ್ರಗತಿ, ರಾಮ ಮಂದಿರ ಉದ್ಘಾಟನೆ ಸೇರಿದಂತೆ ಅನೇಕ ವಿಷಯಗಳ ವಿಶ್ಲೇಷಣೆ ಮತ್ತು ವಿಪಕ್ಷಗಳ ವಿರುದ್ಧವೂ ಕಿಡಿಕಾರುವ ಸಾಧ್ಯತೆಗಳಿದೆ ಎನ್ನಲಾಗಿದೆ. 

ಇಂಡಿಯಾಗೆ ಮೋದಿ ತಪರಾಕಿ?
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ಅಧಿಕಾರಕ್ಕೇರಲು ಹುಟ್ಟಿಕೊಂಡಿರುವ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದಲ್ಲಿ ಇತ್ತೀಚೆಗೆ ಭಾರೀ ಬಿರುಕು ಮೂಡಿದ್ದು, ಒಂದೊಂದೇ ಪಕ್ಷಗಳು ಮೈತ್ರಿಯಿಂದ ಹಿಂದೆ ಸರಿಯುತ್ತಿವೆ.

ಪರಸ್ಪರ ಭಾರೀ ವಾಗ್ದಾಳಿ ನಡೆಸಿಕೊಳ್ಳುತ್ತಿವೆ. ಹೀಗಾಗಿ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಸಂಸತ್ತಿನಲ್ಲೇ ವಿಪಕ್ಷಗಳ ಕಾಲೆಳೆದು ಭಾರೀ ಟೀಕಾ ಪ್ರಹಾರ ನಡೆಸಲಿದ್ದಾರೆ ಎನ್ನಲಾಗಿದೆ.

Share this article