ಮುಂಬರುವ ವಿಧಾನಸಭಾ ಚುನಾವಣೆ ಒಗ್ಗಟ್ಟಿಂದ ಎದುರಿಸಲು ಎನ್‌ಡಿಎ ಮೈತ್ರಿಕೂಟ ತೀರ್ಮಾನ

KannadaprabhaNewsNetwork | Updated : Feb 21 2025, 04:39 AM IST

ಸಾರಾಂಶ

ಮುಂಬರುವ ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ತೀರ್ಮಾನ ಮಾಡಿದೆ.

ನವದೆಹಲಿ: ಮುಂಬರುವ ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ತೀರ್ಮಾನ ಮಾಡಿದೆ.

ದೆಹಲಿ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬೆನ್ನಲ್ಲೇ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಸಂಪೂರ್ಣ ಶಕ್ತಿಯೊಂದಿಗೆ ಚುನಾವಣೆ ಎದುರಿಸಲು ಎಲ್ಲ ನಾಯಕರು ಈ ತೀರ್ಮಾನ ಕೈಗೊಂಡರು.

ಮಹಾರಾಷ್ಟ್ರ ಮತ್ತು ದೆಹಲಿ ಚುನಾವಣೆ ರೀತಿಯಲ್ಲೇ ಮುಂಬರುವ ಎಲ್ಲಾ ರಾಜ್ಯಗಳ ಚುನಾವಣೆಯನ್ನು ಎನ್‌ಡಿಎ ಒಕ್ಕೂಟ ಗೆಲ್ಲಲಿದೆ ಎಂದು ಭರವಸೆ ನೀಡಿದರು, ಆಗ ಪ್ರಧಾನಿ ಮೋದಿ ಅವರು ನಾವು ಭಾರತವನ್ನು ಒಂದಾಗಿ ಅಭಿವೃದ್ಧಿಪಡಿಸುವ ಗುರಿ ಸಾಧಿಸಲಿದ್ದೇವೆ ಎಂದು ತಿಳಿಸಿದ್ದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವ್ಡೆ ತಿಳಿಸಿದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಆಂಧ್ರ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಸೇರಿ ಹಲವು ಎನ್‌ಡಿಎ ಒಕ್ಕೂಟದ ಮುಖಂಡರು, ಬಿಜೆಪಿ ನಾಯಕರು, ಕೇಂದ್ರ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಹಿಮಾಲಯಕ್ಕೆ ಹೊರಟಿದ್ದೀರಾ?: ಕಲ್ಯಾಣ್‌ ಜತೆ ಮೋದಿ ಹಾಸ್ಯ

ನವದೆಹಲಿ: ದೆಹಲಿ ಸಿಎಂ ಶಪಥ ಕಾರ್ಯಕ್ರಮಕ್ಕೆ ಆಗಮಿಸಿದ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರ ವೇಷಭೂಷಣವನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಅವರು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇತ್ತೀಚೆಗೆ ಪ್ರಯಾಗರಾಜ್‌ ಸೇರಿ ವಿವಿಧ ಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಂಡಿರುವ ಕಲ್ಯಾಣ್‌ ದೀಕ್ಷೆಯ ಭಾಗವಾಗಿ ಸಾಧಾರಣ ಧಾರ್ಮಿಕ ಉಡುಗೆ ಧರಿಸಿ, ಮೇಲೊಂದು ಶಲ್ಯ ಹೊದ್ದುಕೊಂಡಿದ್ದರು. ಇದನ್ನು ಕಂಡ ಮೋದಿ, ‘ಎಲ್ಲವನ್ನೂ ಬಿಟ್ಟು ಹಿಮಾಲಯಕ್ಕೆ (ತಪಸ್ಸಿಗೆ) ಹೊರಟಿದ್ದೀರಾ?’ ಎಂದು ತಮಾಷೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪವನ್‌, ‘ಸದ್ಯಕ್ಕಂತೂ ಎಲ್ಲೂ ಹೋಗುವುದಿಲ್ಲ. ಮಾಡಬೇಕಾದ ಕೆಲಸ ಸಾಕಷ್ಟಿದೆ. ಹಿಮಾಲಯ ಕಾಯುತ್ತಿರುತ್ತದೆ’ ಎಂದು ಹಾಸ್ಯ ಮಾಡಿದರು.

ಬಳಿಕ ಈ ಬಗ್ಗೆ ಮಾತಾಡಿದ ಕಲ್ಯಾಣ್‌, ‘ಪ್ರಧಾನಿ ಯಾವಾಗಲೂ ನಮ್ಮೊಂದಿಗೆ ಹಾಸ್ಯಮಯವಾಗಿ ಸಂಭಾಷಿಸುತ್ತಾರೆ’ ಎಂದರು.

Share this article