ರೈಲು ಪ್ರಯಾಣ ಏಕೆ?
- ಒಡಿಶಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಷ್ಟ್ರಪತಿಗಳು ಆಗಮಿಸಿದಾಗ ಪ್ರತಿಕೂಲ ಹವಾಮಾನ ಸೃಷ್ಟಿ. ಹೀಗಾಗಿ ರೈಲು ಪ್ರಯಾಣ ಆಯ್ಕೆ
- ಭುವನೇಶ್ವರದಿಂದ ಬೆಹ್ರಾಂಪುರ ನಡುವಣ 170 ಕಿ.ಮೀ. ದೂರವನ್ನು ಎರಡು ತಾಸಿನಲ್ಲಿ ಕ್ರಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಇದ್ದ ರೈಲು- ಈ ಹಿಂದೆ ರಾಮನಾಥ ಕೋವಿಂದ್ ಹಾಗೂ ಅಬ್ದುಲ್ ಕಲಾಂ ಅವರು ಕೂಡ ರಾಷ್ಟ್ರಪತಿ ಸ್ಪೆಷಲ್ ರೈಲಿನಲ್ಲಿ ಒಮ್ಮೆ ಪ್ರಯಾಣ ಮಾಡಿದ್ದರು
ಭುವನೇಶ್ವರ: ಒಡಿಶಾ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ‘ರಾಷ್ಟ್ರಪತಿಗಳ ವಿಶೇಷ’ ರೈಲಿನಲ್ಲಿ ಒಡಿಶಾದ ಭುವನೇಶ್ವರದಿಂದ ಬೆಹ್ರಾಂಪುರಕ್ಕೆ ಪ್ರಯಾಣ ಕೈಗೊಂಡರು. ಈ ವೇಳೆ ಅವರೊಂದಿಗೆ ರಾಜ್ಯಪಾಲ ಹರಿಬಾಬು ಕಂಭಾಪತಿ ಮತ್ತು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಮತ್ತಿತರರು ಇದ್ದರು. ರಾಷ್ಟ್ರಪತಿಗಳು ರೈಲಿನಲ್ಲಿ ಪ್ರಯಾಣಿಸುವುದು ಬಹಳ ಅಪರೂಪದ ಪ್ರಕರಣವಾದ ಕಾರಣ, ಇದಕ್ಕೆ ಭಾರೀ ಸಿದ್ಧತೆ ನಡೆಸಲಾಗಿತ್ತು. ಹಿಂದೊಂದು, ಮುಂದೊಂದು ರೈಲಿನ ಮೂಲಕ ಬೆಂಗಾವಲು ಭದ್ರತೆ ಒದಗಿಸಲಾಗಿತ್ತು. ರಾಷ್ಟ್ರಪತಿಗಳಿಗೆ ನೀಡಲಾದ ಈ ಪರಿ ಭದ್ರತೆಯನ್ನು ಜನತೆ ಕೂಡ ಬಹಳ ಕುತೂಹಲದಿಂದ ಬೆಳವಣಿಗೆ ಗಮನಿಸಿದರು.
ಭುವನೇಶ್ವರದಲ್ಲಿ ರಾಷ್ಟ್ರಪತಿಗಳು ರೈಲು ಏರಲು ಅನುಕೂಲವಾಗುವಂತೆ ಪ್ಲಾಟ್‌ಫಾರ್ಮ್‌ವರೆಗೂ ಕಾರು ಓಡಿಸಲಾಯಿತು. ರಾಷ್ಟ್ರಪತಿಗಳನ್ನು ಸ್ವಾಗತಿಸಲು ಬೋಗಿಯವರೆಗೆ ಕೆಂಪುಹಾಸು ಹಾಸಲಾಗಿತ್ತು. ಮುರ್ಮು ಅವರು ರೈಲನ್ನು ಏರಲು ವಿಶೇಷ ಮೆಟ್ಟಿಲು, ರೇಲಿಂಗ್ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಮುರ್ಮು ಪ್ರಯಾಣ ಹಿನ್ನೆಲೆಯಲ್ಲಿ ಎರಡೂ ರೈಲು ನಿಲ್ದಾಣಗಳಲ್ಲಿ ಕಂಡುಕೇಳರಿಯ ಭದ್ರತೆ ಒದಗಿಸಲಾಗಿತ್ತು. ಜೊತೆಗೆ ರೈಲಿನೊಳಗೂ ರೈಲ್ವೆ ಪೊಲೀಸರು, ರೈಲೈ ರಕ್ಷಣಾ ಪಡೆ, ಕೆಲವು ಕೇಂದ್ರೀಯ ಭದ್ರತಾ ಸಿಬ್ಬಂದಿ ಕೂಡ ಉಪಸ್ಥಿತರಿದ್ದರು.