ನವಸಾರಿ (ಗುಜರಾತ್): ಜಿಲ್ಲೆಯ ವನ್ಸಿ ಬೋರ್ಸಿಯಲ್ಲಿ ನಡೆದ ‘ಲಖ್‌ಪತಿ ದೀದಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2,500 ಮಹಿಳಾ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ ವಿಶಿಷ್ಟ ಪ್ರಸಂಗ ನಡೆಯಿತು.
ಮಹಿಳಾ ದಿನದ ಅಂಗವಾಗಿ ಇಡೀ ಕಾರ್ಯಕ್ರಮದ ಭದ್ರತೆ ಜವಾಬ್ದಾರಿಯನ್ನು ಮಹಿಳಾ ಸಿಬ್ಬಂದಿ ವಹಿಸಿಕೊಂಡಿದ್ದು, ಪುರುಷರನ್ನು ವಾಹನ ನಿಲುಗಡೆ ಹಾಗೂ ಸಂಚಾರ ನಿರ್ವಹಣೆಗೆ ನಿಯೋಜಿಸಲಾಗಿತ್ತು.
ರಾಜ್ಯ ಗೃಹ ಸಚಿವ ಹರ್ಷ್ ಸಂಘ್ವಿ ಮಾತನಾಡಿ, ‘ಇದು ಇಡೀ ದೇಶದ ಪೊಲೀಸ್ ಹಾಗೂ ಕಾನೂನು ಸುವ್ಯವಸ್ಥೆಯ ಮೈಲುಗಲ್ಲಾಗಿದೆ’ ಎಂದು ಶ್ಲಾಘಿಸಿದರು.
ಭದ್ರತಾ ತಂಡದ ಮೇಲ್ವಿಚಾರಕಿಯಾಗಿದ್ದ ಡಿಜಿಪಿ ನಿಪುಣಾ ತೊರ್ವಾನೆ ಮಾತನಾಡಿ, ‘ಇದು ಉನ್ನತ ಮಟ್ಟದ ಕಾರ್ಯಕ್ರಮವಾಗಿರುವುದರಿಂದ ಭದ್ರತೆಗಾಗಿ ಮುನ್ನಚ್ಚರಿಕೆ ತೆಗೆದುಕೊಳ್ಳಲಾಗಿದೆ. ಎಲ್ಲಾ ಶ್ರೇಣಿಯ ಸಿಬ್ಬಂದಿ 3 ದಿನದಿಂದ ಪೂರ್ವಾಭ್ಯಾಸ ನಡೆಸಿದ್ದಾರೆ’ ಎಂದರು.
ಮೋದಿ ಟ್ವೀಟರ್ ಖಾತೆ ನಿರ್ವಹಿಸಿದ 6 ಸ್ತ್ರೀಯರು
ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟರ್ ಸೇರಿದಂತೆ ತಮ್ಮ ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಹೊಣೆಯನ್ನು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗೈದ 6 ಸ್ತ್ರೀಯರಿಗೆ ವಹಿಸಿದ್ದರು. ಈ ಅವಕಾಶವನ್ನು ಬಳಸಿಕೊಂಡ ಮಹಿಳೆಯರು ತಮ್ಮ ಅನುಭವಗಳು, ನಡೆದುಬಂದ ಹಾದಿ, ಎದುರಿಸಿದ ಸವಾಲು ಇತ್ಯಾದಿಗಳ ಕುರಿತು ಪೋಸ್ಟ್ ಮಾಡುವ ಮೂಲಕ ಭಾರತದ ನಾರಿ ಶಕ್ತಿಯ ಬಲವನ್ನು ಎತ್ತಿಹಿಡಿದರು.
ಅಂತೆಯೇ, ಎಲ್ಲರನ್ನು ಒಳಗೊಂಡ ಮತ್ತು ಸಶಕ್ತ ರಾಷ್ಟ್ರವಾಗುವ ಕಡೆಗಿನ ದೇಶದ ನಡಿಗೆಯ ಕಡೆ ಬೆಳಕು ಚೆಲ್ಲಿದರು.6ನೇ ವಯಸ್ಸಿನಲ್ಲೇ ಚೆಸ್ ಆಡಲು ಆರಂಭಿಸಿ ಗ್ರಾಂಡ್‌ಮಾಸ್ಟರ್ ಪಟ್ಟ ಗಿಟ್ಟಿಸಿಕೊಂಡ ಆರ್. ವೈಶಾಲಿ, ತಮ್ಮ ಗ್ರಾಮದ ನೂರಾರು ಮಹಿಳೆಯರಿಗೆ ಜೀವನೋಪಾಯ ಕಲ್ಪಿಸಿದ ಬಿಹಾರದ ಅನಿತಾ ದೇವಿ ಎಂದ ರೈತ ಉದ್ಯಮಿ, ಇಸ್ರೋ ವಿಜ್ಞಾನಿ ಶಿಲ್ಪಿ ಸೋನಿ ಹಾಗೂ ಅಣು ವಿಜ್ಞಾನಿ ಎಲಿನಾ ಮಿಶ್ರಾ, ಅಂಜಲಿ ಅಗರ್ವಾಲ್ ಎಂಬ ಸಮಾಜ ಸೇವಕಿ, ಫ್ರಾಂಟಿಯರ್ ಮಾರ್ಕೆಟ್ಸ್‌ನ ಸಿಇಒ ಅಜಾಯಿತಾ ಶಾ ಅವರೇ ಈ ಗೌರವ ಪಡೆದವರು.
ಈ ಮೊದಲು 2020ರಲ್ಲಿಯೂ ಪ್ರಧಾನಿ ಮೋದಿ ಅವರು ಮಾ.8ರಂದು ತನ್ನ ಖಾತೆಯ ನಿರ್ವಹಣೆಯ ಜವಾಬ್ದಾರಿಯನ್ನು 7 ಮಹಿಳೆಯರಿಗೆ ನೀಡಿದ್ದರು.ಅನುಭವ ಹಂಚಿಕೊಂಡ ಸಾಧಕಿಯರು:ಚೆಸ್ ಗ್ರಾಂಡ್ ಮಾಸ್ಟರ್ ಆರ್. ವೈಶಾಲಿ ಅವರು ತಮ್ಮ ಹೆತ್ತವರು ಮತ್ತು ಒಡಹುಟ್ಟಿದವರ ಸಹಕಾರವನ್ನು ಸ್ಮರಿಸುತ್ತಾ, ‘ಚೆಸ್ ಆಡುವುದು ನನ್ನ ಪಾಲಿಗೆ ಕಲಿಕೆ, ರೋಮಾಂಚನಕಾರಿ ಹಾಗೂ ಲಾಭದಾಯಕ ಪ್ರಯಾಣವಾಗಿದೆ.
ನಾನು ಮಹಿಳೆಯರಿಗೆ, ವಿಶೇಷವಾಗಿ ಯುವತಿಯರಿಗೆ ಹೇಳಬಯಸುವುದೇನೆಂದರೆ, ಎಲ್ಲಾ ತೊಡಕುಗಳನ್ನು ದಾಟಿ ನಿಮ್ಮ ಕನಸುಗಳನ್ನು ಹಿಂಬಾಲಿಸಿ. ಉತ್ಸಾಹವು ನಿಮ್ಮ ಯಶಸ್ಸಿಗೆ ಬಲ ತುಂಬುತ್ತದೆ’ ಎಂದು ಪ್ರಧಾನಿಯವರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದರು.
ತಮ್ಮ ಗ್ರಾಮದ ನೂರಾರು ಮಹಿಳೆಯರಿಗೆ ಜೀವನೋಪಾಯ ಕಲ್ಪಿಸಿದ ಬಿಹಾರದ ಅನಿತಾ ದೇವಿ ಎಂದ ರೈತ ಉದ್ಯಮಿ, ‘ನನ್ನೊಂದಿಗೆ ಕೆಲಸ ಮಾಡುತ್ತಿರುವ ಮಹಿಳೆಯರು ಹಣದೊಂದಿಗೆ ಆತ್ಮವಿಶ್ವಾಸ ಹಾಗೂ ಆತ್ಮಗೌರವವನ್ನು ಸಂಪಾದಿಸುತ್ತಿದ್ದಾರೆ. ಆರ್ಥಿಕ ಸ್ವಾತಂತ್ರ್ಯವು ಮಹಿಳೆಯ ಸಾಮಾಜಿಕ ಸ್ಥಾನಕ್ಕೆ ಬಲ ತುಂಬುತ್ತದೆ’ ಎಂದರು.
ಇಸ್ರೋ ವಿಜ್ಞಾನಿ ಶಿಲ್ಪಿ ಸೋನಿ ಹಾಗೂ ಅಣು ವಿಜ್ಞಾನಿ ಎಲಿನಾ ಮಿಶ್ರಾ, ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಮಹತ್ವವನ್ನು ತಿಳಿಸಿದರು. ಜೊತೆಗೆ, ಅಣು ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ವೃತ್ತಿ ಕಟ್ಟಿಕೊಳ್ಳುವಂತೆ ಪ್ರೋತ್ಸಾಹಿಸಿದರು.ಅಂಜಲಿ ಅಗರ್ವಾಲ್ ಎಂಬ ಸಮಾಜ ಸೇವಕಿ ‘ಸುಗಮ್ಯ ಭಾರತ’ ಯೋಜನೆಯಡಿ ಎಲ್ಲರ ಒಳಗೊಳ್ಳುವಿಕೆಯನ್ನು ಬೆಂಬಲಿಸಿದರು.
ಜೊತೆಗೆ, ಮಹಿಳೆಯರು ಸೇರಿದಂತೆ ಎಲ್ಲರೂ ಘನತೆ ಹಾಗೂ ಸ್ವಾತಂತ್ರ್ಯದೊಂದಿಗೆ ಜೀವನ ಸಾಗಿಸುವಂತಾಗಲಿ ಎಂದು ಹಾರೈಸಿದರು.ಫ್ರಾಂಟಿಯರ್ ಮಾರ್ಕೆಟ್ಸ್‌ನ ಸಿಇಒ ಅಜಾಯಿತಾ ಶಾ, ‘ಆರ್ಥಿಕವಾಗಿ ಸಶಕ್ತಳಾದ ಮಹಿಳೆ ವಿಶ್ವಾಸದಿಂದ ನಿರ್ಧಾರ ತೆಗೆದುಕೊಳ್ಳುವವಳು, ಸ್ವತಂತ್ರ ಚಿಂತಕಿ, ತನ್ನ ಭವಿಷ್ಯದ ಶಿಲ್ಪಿ ಹಾಗೂ ಆಧುನಿಕ ಭಾರತದ ನಿರ್ಮಾಪಕಿಯಾಗಿರುತ್ತಾಳೆ’ ಎನ್ನುತ್ತಾ, ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಉದ್ಯಮಶೀಲತೆಯ ಸಂದೇಶ ನೀಡಿದರು.ಇಂತಹ ಅಮೂಲ್ಯ ಸಂದೇಶಗಳನ್ನು ನೀಡಿದ ಮಹಿಳೆಯರಿಗೆ ಧನ್ಯವಾದ ಅರ್ಪಿಸಿದ ಮೋದಿ, ‘ಈ ಎಲ್ಲಾ ಮಹಿಳೆಯರು ವಿವಿಧ ಕ್ಷೇತ್ರದವರಾದರೂ, ಭಾರತದ ನಾರಿ ಶಕ್ತಿಯ ಪರಾಕ್ರಮದ ಪ್ರತೀಕ’ ಎಂದು ಶ್ಲಾಘಿಸಿದರು.