ಅಂಬಾನಿ ಮದುವೆಗೆ ಪ್ರಿಯಾಂಕಾ ಗಾಂಧಿ ಹೋಗಿಲ್ಲ: ಕಾಂಗ್ರೆಸ್

KannadaprabhaNewsNetwork |  
Published : Aug 07, 2024, 01:03 AM IST
ಪ್ರಿಯಾಂಕಾ ವಾದ್ರಾ | Kannada Prabha

ಸಾರಾಂಶ

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇತ್ತೀಚೆಗೆ ನಡೆದ ಉದ್ಯಮಿ ಮುಕೇಶ್‌ ಅಂಬಾನಿ ಮಗ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ಮದುವೆಗೆ ಹಾಜರಾಗಿದ್ದರು ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಮಾಡಿದ ಆರೋಪವನ್ನು ಕಾಂಗ್ರೆಸ್‌ ತಳ್ಳಿಹಾಕಿದೆ.

ನವದೆಹಲಿ: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇತ್ತೀಚೆಗೆ ನಡೆದ ಉದ್ಯಮಿ ಮುಕೇಶ್‌ ಅಂಬಾನಿ ಮಗ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ಮದುವೆಗೆ ಹಾಜರಾಗಿದ್ದರು ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಮಾಡಿದ ಆರೋಪವನ್ನು ಕಾಂಗ್ರೆಸ್‌ ತಳ್ಳಿಹಾಕಿದೆ. ಕಾಂಗ್ರೆಸ್‌ ನಾಯಕ ಕೆ.ಸಿ.ವೇಣುಗೋಪಾಲ್‌ ಟ್ವೀಟ್‌ ಮಾಡಿದ್ದು, ‘ಪ್ರಿಯಾಂಕಾ ಗಾಂಧಿ ಅವರು ಅಂಬಾನಿ ಮದುವೆಗೆ ಹೋಗಿದ್ದರು ಎಂದು ನಿಶಿಕಾಂತ್ ದುಬೆ ಲೋಕಸಭೆಯಲ್ಲಿ ಹಸಿ ಸುಳ್ಳು ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಮದುವೆಗೆ ಹಾಜರಾಗಿಲ್ಲ, ಅಂದು ಅವರು ದೇಶದಲ್ಲಿ ಇರಲಿಲ್ಲ, ಇದು ನಿಮ್ಮ ಗೃಹ ಸಚಿವರಿಗೆ ತಿಳಿದಿರಬೇಕು. ಅವರು ಇಂತಹ ವಿಷಯಗಳನ್ನು ಟ್ರ್ಯಾಕ್‌ ಮಾಡುವಲ್ಲಿ ನಿಸ್ಸಿಮರು’ ಎಂದು ಪೋಸ್ಟ್‌ ಮಾಡಿದ್ದಾರೆ.

==

ವರ್ಷದಲ್ಲಿ 30 ಲಕ್ಷ ಜನರಿಗೆ ನಾಯಿ ಕಡಿತ, 286 ಸಾವು: ಸಂಸತ್‌ ಸದಸ್ಯರ ಕಳವಳ

ನವದೆಹಲಿ: ಇತ್ತೀಚೆಗೆ ದೇಶದಲ್ಲಿ ನಾಯಿ ಕಚ್ಚುವಿಕೆ ಪ್ರಕರಣಗಳು ಹೆಚ್ಚುತ್ತಿವೆ. ಭಾರತದಲ್ಲಿ 30.5 ಲಕ್ಷ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅದರಲ್ಲಿ 286 ಜನರು ಸಾವನ್ನಪ್ಪಿದ್ದಾರೆ. ಗಾಜಿಯಾಬಾದ್‌ನಲ್ಲಿ ಈ ವರ್ಷ 35000 ಮಂದಿ ನಾಯಿಗಳಿಂದ ಕಚ್ಚಿಸಿಕೊಂಡಿದ್ದಾರೆ ಎಂದು ಗಾಜಿಯಾಬಾದ್‌ ಸಂಸದ ಅತುಲ್‌ ಗರ್ಗ್‌ ಮಂಗಳವಾರ ಲೋಕಸಭೆಯ ಗಮನ ಸೆಳೆದರು. ಅಲ್ಲದೆ ಈ ಘಟನೆಗಳಿಂದ ಮಕ್ಕಳು ಮುಕ್ತವಾಗಿ ಆಟವಾಡಲು ಸಾಧ್ಯವಾಗುತ್ತಿಲ್ಲ. ಹಿರಿಯ ನಾಗರಿಕರು ಒಂಟಿಯಾಗಿ ತಿರುಗಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಸೂಕ್ಷ್ಮ ವಿಷಯವನ್ನು ನಿಭಾಯಿಸಲು ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿದರು.

==

ವಯನಾಡು ಭೂಕುಸಿತ: ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ನೆರವು

ವಯನಾಡು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ರಿಲಯನ್ಸ್‌ ಫೌಂಡೇಷನ್‌ ನೆರವಿಗೆ ಮುಂದಾಗಿದೆ. ಫೌಂಡೇಷನ್‌ನಿಂದ ಸಂತ್ರಸ್ತರಿಗೆ ಆಹಾರ ಪದಾರ್ಥಗಳು, ಹಣ್ಣುಗಳು, ಹಾಲು, ಪಡಿತರ, ಅಡುಗೆ ಪಾತ್ರೆಗಳು, ಕುಡಿಯುವ ನೀರು, ಮೂಲಭೂತ ನೈರ್ಮಲ್ಯ ವಸ್ತುಗಳು, ಟೆಂಟ್‌ಗಳು, ಹಾಸಿಗೆಗಳು, ಸೋಲಾರ್ ಚಾಲಿತ ಸಾಧನಗಳು ಮತ್ತು ಟಾರ್ಚ್‌ಗಳಂತಹ ವಸ್ತುಗಳನ್ನು ಒದಗಿಸುತ್ತಿದೆ. ಮಕ್ಕಳಿಗೆ ಬೇಕಾದ ಶಿಕ್ಷಣ ಸಾಮಾಗ್ರಿಗಳನ್ನು ವಿತರಿಸಿದೆ. ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಮಾತನಾಡಿ, ‘ವಯನಾಡಿನ ದುರಂತ ನಮಗೆ ಅತೀವ ದುಃಖವನ್ನು ಉಂಟು ಮಾಡಿದೆ. ಈ ದುರಂತದಿಂದ ಸಂತ್ರಸ್ತರಾದ ಪ್ರತಿಯೊಂದು ಕುಟುಂಬಕ್ಕೂ ನಮ್ಮ ಫೌಂಡೇಷನ್‌ ನೆರವಿಗೆ ನಿಲ್ಲಲಿದೆ’ ಎಂದು ತಿಳಿಸಿದ್ದಾರೆ.

==

ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರೆಟ್‌ ಅಭ್ಯರ್ಥಿಯಾಗಿ ಕಮಲಾ ಸ್ಪರ್ಧೆ ಅಧಿಕೃತ

ವಾಷಿಂಗ್ಟನ್‌: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಕಮಲಾ, ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಚುನಾವಣೆಯಲ್ಲಿ ಎದುರಿಸಲಿದ್ದಾರೆ. ಜೋ ಬೈಡನ್‌ ಚುನಾವಣಾ ರೇಸ್‌ನಿಂದ ಸರಿದ ಬಳಿಕ ಸಹಜವಾಗಿಯೇ ಉಪಾಧ್ಯಕ್ಷೆ ಕಮಲಾ ಹೆಸರು ಮುಂಚೂಣಿಗೆ ಬಂದಿತ್ತು. ಅದರ ಬೆನ್ನಲ್ಲೇ ಪಕ್ಷದ ನೊಂದಾಯಿತ ಸದಸ್ಯರು ಚಲಾಯಿಸಿದ ಮತಗಳಲ್ಲಿ ಶೇ.99ರಷ್ಟು ಪಡೆಯುವ ಮೂಲಕ ಇದೀಗ ಕಮಲಾ ಸ್ಪರ್ಧೆ ಅಧಿಕೃತವಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಪಕ್ಷವೊಂದರ ಅಭ್ಯರ್ಥಿಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹಿರಿಮೆಯೂ ಕಮಲಾಗೆ ಒಲಿದಿದೆ. ಇದೇ ವೇಳೆ ಕಮಲಾ ಹ್ಯಾರಿಸ್‌ ತಮ್ಮ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಮಿನ್ನೇಸೋಟ ಗವರ್ನರ್ ಟಿಮ್ ವಾಜ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ