ದುಬೈ: ದ್ವೀಪ ರಾಷ್ಟ್ರ ಕತಾರ್‌ನ ಮಾಜಿ ದೊರೆ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ತಮ್ಮ 74ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.
ಇಂಧನ ಸಮೃದ್ಧ ಕತಾರ್ ರೂಪಿಸಿದ ಮಹಾತ್ವಾಕಾಂಕ್ಷಿ ರೂವಾರಿ ಎನ್ನಿಸಿಕೊಂಡಿದ್ದ ಶೇಖ್ 2013ರ ಜೂನ್‌ನಲ್ಲಿ ತಮ್ಮ ಆಡಳಿತವನ್ನು ಮಗನಿಗೆ ಹಸ್ತಾಂತರಿಸಿದ್ದರು.
ಮೋದಿ ಶೋಕ:ಶೇಖ್ ಹಮದ್ ಅವರ ನಿಧನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
ತಿರುಮಲ ದೇವಸ್ಥಾನದ ದಾರೀಲಿ ಚಿರತೆ ಪ್ರತ್ಯಕ್ಷ: ಭಕ್ತಾದಿಗಳು ಗಾಬರಿ
ತಿರುಮಲ: ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗುವ ಅಲಿಪಿರಿ ಮಾರ್ಗದಲ್ಲಿ ಶುಕ್ರವಾರ ಸಂಜೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಭಕ್ತಾದಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ದಿನನಿತ್ಯ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಸಾಗುವ ಮಾರ್ಗದಲ್ಲಿ ಕಾಡುಪ್ರಾಣಿ ಕಾಣಿಸಿಕೊಂಡಿರುವ ವಿಡಿಯೋ ಕೂಡ ವೈರಲ್ ಆಗುತ್ತಿದ್ದು, ಭಯದ ವಾತಾವರಣೆ ಸೃಷ್ಟಿಯಾಗಿದೆ.ಘಟನೆಯ ಮಾಹಿತಿ ಸಿಗುತ್ತಿದ್ದಂತೆ ದೇಗುಲ ಆಡಳಿತ ಮಂಡಳಿಯಾದ ಟಿಟಿಡಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದು, ಗುಂಪಿನಲ್ಲಿ ಸಾಗುವಂತೆ ಜನರಿಗೆ ಸೂಚಿಸಿದ್ದಾರೆ. ಅತ್ತ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಭಕ್ತರಿಗೆ ಯಾವುದೇ ತೊಂದರೆ ಆಗದಂತೆ, ಪೊದೆಗಳ ತೆರವು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಆಗಬಹುದಾದ ದುರ್ಘಟನೆಯನ್ನು ತಪ್ಪಿಸುವ ಉದ್ದೇಶದಿಂದ, ಚಿರತೆ ಕಾಣಿಸಿಕೊಂಡ ಸ್ಥಳಕ್ಕೆ ಹನುಮಾನ್(ವನ್ಯಜೀವಿಗಳ ಮೇಲ್ವಿಚಾರಣೆ, ನೆರವು ಮತ್ತು ಶುಶ್ರೂಷೆಗಾಗಿ ಪೋಷಣೆ ಮಾಡುವ ಘಟಕ) ತಂಡವನ್ನು ರವಾನಿಸಲೂ ಆದೇಶಿಸಿದ್ದಾರೆ.
ಆಂಧ್ರ ಡಿಸಿಎಂ ಕಲ್ಯಾಣ್‌ಗೆ ಮುಂಬೈನಲ್ಲಿ ಭುಜ ಸರ್ಜರಿ
ಮುಂಬೈ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಬಲಭುಜದ ಸ್ನಾಯುವಿಗೆ ಪೆಟ್ಟಾಗಿದ್ದ ಹಿನ್ನೆಲೆಯಲ್ಲಿ ಅವರು ಕೋಲಿಲಾಬೇನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದರು.ಶಸ್ತ್ರಚಿಕಿತ್ಸೆ ಬಳಿಕ ಆಂಧ್ರ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರು ಕಲ್ಯಾಣ್‌ರನ್ನು ಭೇಟಿಯಾಗಿ ಆರೋಗ್ಯದ ಬಗ್ಗೆ ವಿಚಾರಿಸಿದರು. ಈ ಬಗ್ಗೆ ನಾಯ್ಡು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ‘ಡಿಸಿಎಂ ಪವನ್ ಕಲ್ಯಾಣ್ ಅವರು ಬೇಗ ಗುಣಮುಖರಾಗಲಿ. ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ಬರೆದಿದ್ದಾರೆ.
ವಿಯೆಟ್ನಾಂ ಸ್ಪೀಡ್‌ಬೋಟ್ ದುರಂತ: ಬದುಕುಳಿದ 16 ಭಾರತೀಯರು ತವರಿಗೆ
15 ಮೃತದೇಹಗಳೂ ರವಾನೆ
ಹನೋಯ್: ಶನಿವಾರ ವಿಯೆಟ್ನಾಂನ ಫು ಕ್ವೋಕ್ ದ್ವೀಪದ ಬಳಿ ಸಂಭವಿಸಿದ ದೋಣಿ ದುರಂತದಲ್ಲಿ ರಕ್ಷಿಸಲ್ಪಟ್ಟಿದ್ದ 16 ಭಾರತೀಯರು ತಾಯ್ನಾಡಿಗೆ ಮರಳಿದ್ದಾರೆ. ಇನ್ನೊಬ್ಬರು ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಹನೋಯ್‌ನಲ್ಲಿರುವ ಭಾರತೀಯ ದೂತಾವಾಸ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.32 ಭಾರತೀಯ ಪ್ರವಾಸಿಗರು ಮತ್ತು 4 ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ಸ್ಪೀಡ್‌ಬೋಟ್ ಕರಾವಳಿಗೆ 400 ಮೀ. ದೂರದಲ್ಲಿದ್ದಾಗ ಮಗುಚಿದ ಪರಿಣಾಮ 15 ಮಂದಿ ಮೃತಪಟ್ಟಿದ್ದರು. ಉಳಿದ 17 ಪ್ರವಾಸಿಗರು ಮತ್ತು ನಾಲ್ವರು ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು. ದುರ್ಘಟನೆಯ ಕಾರಣ ಪತ್ತೆಗೆ ತನಿಖೆ ನಡೆಯುತ್ತಿದೆ.
15 ಶವಗಳೂ ವಾಪಸ್:
ಮೃತ 15 ಜನರಲ್ಲಿ 10 ಮಂದಿ ತಮಿಳುನಾಡಿನವರು, ಆಂಧ್ರದವರು ಮೂವರು ಮತ್ತು ಕೇರಳದವರಿಬ್ಬರಿದ್ದರು. ಅವರೆಲ್ಲರ ಶವಗಳನ್ನು ಹೋ ಚಿ ಮಿನ್ಹ್ ಸಿಟಿಗೆ ಕಳಿಸಲಾಗಿದ್ದು, ಅಲ್ಲಿ ಔಪಚಾರಿಕತೆಗಳು ಪೂರ್ಣಗೊಂಡ ಬಳಿಕ ಭಾರತಕ್ಕೆ ರವಾನಿಸಲಾಗಿದೆ.