40000 ಬೋಗಿಗಳಿಗೆ ವಂದೇ ಭಾರತ್‌ನ ಹೈಟೆಕ್‌ ಸ್ಪರ್ಶ

KannadaprabhaNewsNetwork |  
Published : Feb 02, 2024, 01:02 AM ISTUpdated : Feb 02, 2024, 01:07 PM IST
ರೈಲು | Kannada Prabha

ಸಾರಾಂಶ

ಕಳೆದೊಂದು ದಶಕದ ಅವಧಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಭಾರೀ ಹಣ ವೆಚ್ಚ ಮಾಡಿ ಹಲವು ಯೋಜನೆಗಳನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲೂ ಈ ಕ್ಷೇತ್ರಕ್ಕೆ ಹೆಚ್ಚಿನ ಹಣ ವೆಚ್ಚ ಮಾಡುವ ಮಾತುಗಳನ್ನು ಮಾಡಿದೆ

ಕಳೆದೊಂದು ದಶಕದ ಅವಧಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಭಾರೀ ಹಣ ವೆಚ್ಚ ಮಾಡಿ ಹಲವು ಯೋಜನೆಗಳನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲೂ ಈ ಕ್ಷೇತ್ರಕ್ಕೆ ಹೆಚ್ಚಿನ ಹಣ ವೆಚ್ಚ ಮಾಡುವ ಮಾತುಗಳನ್ನು ಮಾಡಿದೆ. 

ರೈಲ್ವೆ, ವಿಮಾನಯಾನ, ಮೆಟ್ರೋ ರೈಲು ವ್ಯವಸ್ಥೆ ಆಧುನೀಕರಣಕ್ಕೆ ಹಲವು ಯೋಜನೆಗಳನ್ನು ಘೋಷಿಸಿರುವ ಕೇಂದ್ರ ಸರ್ಕಾರ, ಮುಂಬರುವ ದಿನಗಳಲ್ಲಿ ಸಾಮಾನ್ಯ ರೈಲುಗಳ 40000 ಬೋಗಿಗಳನ್ನು ವಂದೇ ಭಾರತ್‌ ರೈಲಿನ ಬೋಗಿಗಳ ಗುಣಮಟ್ಟಕ್ಕೆ ಬದಲಾಯಿಸುವ ಮೂಲಕ ಪ್ರಯಾಣಿಕರ ಅನುಕೂಲ, ಸುರಕ್ಷತೆಗೆ ಇನ್ನಷ್ಟು ಆಧ್ಯತೆ ನೀಡುವ ಮಾತುಗಳನ್ನು ಆಡಿದೆ.

3 ರೈಲ್ವೆ ಕಾರಿಡಾರ್‌ಗಳ ನಿರ್ಮಾಣ: ಮುಂಬರುವ ವರ್ಷಗಳಲ್ಲಿ ಮೂರು ಪ್ರಮುಖ ಆರ್ಥಿಕ ರೈಲ್ವೆ ಕಾರಿಡಾರ್‌ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. 

ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಯಡಿ ರೂಪಿಸಲಾಗಿರುವ ಈ ಆರ್ಥಿಕ ರೈಲ್ವೆ ಕಾರಿಡಾರ್‌ ಯೋಜನೆಗಳು ಬಹುಮಾದರಿ ಸಂಪರ್ಕಕ್ಕೆ ಅನುಕೂಲ ಮಾಡಿಕೊಡಲಿದೆ. 

ಜೊತೆಗೆ ಸರಕು ಸಾಗಣೆ ವ್ಯವಸ್ಥೆಯ ಕಾರ್ಯಕ್ಷಮತೆ ಹೆಚ್ಚಿಸುವ ಜೊತೆಗೆ ವೆಚ್ಚವನ್ನೂ ಕಡಿತ ಮಾಡಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.ಹೆಚ್ಚು ಸಂಚಾರ ದಟ್ಟಣೆಯ ಕಾರಿಡಾರ್‌ ನಿರ್ಮಾಣದ ಬಳಿಕ ಪ್ರಯಾಣಿಕ ರೈಲುಗಳ ಸುಗಮ ಸಂಚಾರಕ್ಕೆ ಅನುವಾಗಲಿದೆ. 

ಅವುಗಳ ವೇಗ ಹೆಚ್ಚಳ, ಸುರಕ್ಷತೆಗೂ ಕಾರಣವಾಗಲಿದೆ. ಒಟ್ಟಾರೆ ಈ ಮೂರು ಆರ್ಥಿಕ ರೈಲ್ವೆ ಕಾರಿಡಾರ್‌ಗಳ ನಿರ್ಮಾಣವು ದೇಶದ ಜಿಡಿಪಿ ಬೆಳವಣಿಗೆಗೆ ಕಾರಣವಾಗುವ ಜೊತೆಗೆ, ಸರಕು ಸಾಗಣೆ ವೆಚ್ಚವನ್ನೂ ಇಳಿಕೆ ಮಾಡಲಿದೆ ಎಂದು ಸರ್ಕಾರ ಹೇಳಿದೆ.

1. ಇಂಧನ, ಖನಿಜ ಮತ್ತು ಸಿಮೆಂಟ್‌ ಕಾರಿಡಾರ್‌.
2. ಬಂದರುಗಳನ್ನು ಸಂಪರ್ಕಿಸುವ ರೈಲ್ವೆ ಕಾರಿಡಾರ್.
3. ಹೆಚ್ಚು ಸಂಚಾರ ದಟ್ಟಣೆಯ ಕಾರಿಡಾರ್‌.

ವೈಮಾನಿಕ ವಲಯ: ಕಳೆದೊಂದು ದಶಕದ ಅವಧಿಯಲ್ಲಿ ದೇಶದ ವೈಮಾನಿಕ ವಲಯದ ಅಮೂಲಾಗ್ರ ಸುಧಾರಣೆಗೆ ಹಲವು ಕ್ರಮ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡು 149ಕ್ಕೆ ತಲುಪಿದೆ. 

ಉಡಾನ್‌ ಯೋಜನೆಯಡಿ ಎರಡು ಮತ್ತು ಮೂರನೇ ಸ್ತರದ ನಗರಗಳಿಗೆ ವಿಮಾನಯಾನ ಸೇವೆ ಒದಗಿಸುವ ಮೂಲಕ ಅವುಗಳ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲಾಗಿದೆ. 

ಈ ಯೋಜನೆ ಮೂಲಕ 577 ಹೊಸ ಮಾರ್ಗಗಳನ್ನು ರಚಿಸಲಾಗಿದ್ದು, ಅವುಗಳಲ್ಲಿ 1.3 ಕೋಟಿ ಪ್ರಯಾಣಿಕರು ಸಂಚಾರ ಕೈಗೊಂಡಿದ್ದಾರೆ. ಭಾರತದ ವೈಮಾನಿಕ ವಲಯದ ಕಂಪನಿಗಳು ಒಟ್ಟಾರೆ 1000ಕ್ಕೂ ಹೆಚ್ಚು ವಿಮಾನಗಳ ಖರೀದಿಗೆ ಆರ್ಡರ್‌ ಸಲ್ಲಿಸಿವೆ. 

ದೇಶದಲ್ಲಿರುವ ಹಾಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿ ಮತ್ತು ವಿಸ್ತರಣೆ ಹಾಗೂ ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಕಾರ್ಯ ಮುಂದುವರೆಯಲಿದೆ ಎಂದು ಸರ್ಕಾರ ಹೇಳಿದೆ.

ಮೆಟ್ರೋ, ನಮೋ ಭಾರತ್‌: ನಗರೀಕರಣದ ಗತಿ ತೀವ್ ಮತ್ತು ಹೆಚ್ಚುತ್ತಿರುವ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ನಗರಗಳಲ್ಲಿನ ಸಂಚಾರ ವ್ಯವಸ್ಥೆ ಸುಧಾರಿಸುವ ಮತ್ತು ಆಧುನೀಕರಣಗೊಳಿಸಲು ಸರ್ಕಾರ ಬದ್ಧವಾಗಿದೆ. 

ಈ ನಿಟ್ಟಿನಲ್ಲಿ ಮೆಟ್ರೋ ರೈಲು ಮತ್ತು ನಮೋ ಭಾರತ್‌ ರೈಲು ಸೇವೆಗಳು ಜನರ ಬೇಡಿಕೆಯನ್ನು ಪೂರೈಸಬಲ್ಲ ಸಾರ್ಥ್ಯ ಹೊಂದಿವೆ. ಹೀಗಾಗಿ ಮೆಟ್ರೋ ಮತ್ತು ನಮೋ ಭಾರತ್‌ ರೈಲು ಸೇವೆಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು ಮತ್ತು ಸಂಚಾರ ಕೇಂದ್ರೀಕೃತ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ