;Resize=(412,232))
ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತ ಶನಿವಾರದ ವೇಳೆಗೆ ದುರ್ಬಲಗೊಂಡಿದೆ. ಹೀಗಾಗಿ ಚಂಡಮಾರುತದ ಭೀತಿ ದೂರವಾಗಿದೆ. ಆದರೆ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದಲ್ಲಿ ಚುಮುಚುಮು ಚಳಿಯ ವಾತಾವರಣ ಮತ್ತು ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.
ರಾಮನಾಥಪುರಂ ಜಿಲ್ಲೆಯ ತಿರುವಡನೈ, ಪುದುಕೊಟ್ಟೈ ಜಿಲ್ಲೆಯ ಐನ್ಕುಡಿ, ತಂಜಾವೂರು ಜಿಲ್ಲೆಯ ಗ್ರ್ಯಾಂಡ್ ಅನಿಕಟ್‌ನಲ್ಲಿ ಕಳೆದೊಂದು ದಿನದಲ್ಲಿ 1 ಸೆಂ.ಮೀ. ಮಳೆಯಾಗಿದೆ. ಇತ್ತ ಬೆಂಗಳೂರಿನಲ್ಲಿ ಶುಕ್ರವಾರವೇ ಮೋಡಕವಿದ ವಾತಾವರಣವಿದ್ದು, ವರುಣಾಗಮನದ ಸೂಚನೆಗಳು ಸಿಕ್ಕಿವೆ. ಆಂಧ್ರದಲ್ಲೂ ಶನಿವಾರ ಮಳೆಯ ಸಿಂಚನವಾಗಿದ್ದು, ಭಾನುವಾರವೂ ಇದು ಮುಂದುವರೆಯಲಿದೆ. ಹಲವೆಡೆ ತಾಪಮಾನ ಶೂನ್ಯಕ್ಕಿಂತ ಕೆಳಗಿಳಿದಿದೆ.
ಬಂಗಾಳಕೊಲ್ಲಿಯ ನೈಋತ್ಯ ಭಾಗ ಮತ್ತು ಅದಕ್ಕೆ ಹೊಂದಿಕೊಂಡ ಹಿಂದೂ ಮಹಾಸಾಗರ ಪ್ರದೇಶಗಳಲ್ಲಿ ಅಬ್ಧಿಯ ಪರಿಸ್ಥಿತಿ ಅತಿ ಪ್ರಕ್ಷುಬ್ಧವಾಗುವ ಸಾಧ್ಯತೆಯಿದ್ದು, ತಮಿಳುನಾಡಿನ ಕೆಲ ಕಡೆಗಳಲ್ಲಿ ಗಾಳಿ ಗಂಟೆಗೆ 35-45 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಆದಕಾರಣ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಈಗಾಗಲೇ ನೀರಿಗಿಳಿದಿರುವವರಿಗೆ ಬಂಗಾಳಕೊಲ್ಲಿಯ ಆಗ್ನೇಯ ಮತ್ತು ನೈಋತ್ಯ ಭಾಗ, ತಮಿಳುನಾಡು-ಪುದುಚೇರಿ ಕರಾವಳಿಯ, ಮನ್ನಾರ್ ಕೊಲ್ಲಿ ಮತ್ತು ಕೊಮೊರಿನ್ ಪ್ರದೇಶಕ್ಕೆ ಹೋಗದಂತೆ ನಿರ್ದೇಶಿಸಲಾಗಿದೆ. ಜನರಿಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಲಾಗಿದೆ.