ಉಪೇಂದ್ರ ಭೇಟಿಯಾಗಿ ರಾಜಕೀಯಬಗ್ಗೆ ಚರ್ಚೆ ನಡೆಸಿದ ರವಿ ಕೃಷ್ಣಾ ರೆಡ್ಡಿ

KannadaprabhaNewsNetwork |  
Published : May 18, 2026, 02:00 AM IST
Ravindra Kalashetra 2 | Kannada Prabha

ಸಾರಾಂಶ

ತಮಿಳುನಾಡಿನಲ್ಲಿ ನಟ ಜೋಸೆಫ್‌ ವಿಜಯ್‌ ಅವರ ಟಿವಿಕೆ ಪಕ್ಷವು ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೇರಿದ ಬಳಿಕ ರಾಜ್ಯದಲ್ಲಿಯೂ ಪರ್ಯಾಯ ರಾಜಕಾರಣದ ಬೆಳವಣಿಗೆಗಳು ಬಿರುಸುಗೊಂಡಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಮಿಳುನಾಡಿನಲ್ಲಿ ನಟ ಜೋಸೆಫ್‌ ವಿಜಯ್‌ ಅವರ ಟಿವಿಕೆ ಪಕ್ಷವು ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೇರಿದ ಬಳಿಕ ರಾಜ್ಯದಲ್ಲಿಯೂ ಪರ್ಯಾಯ ರಾಜಕಾರಣದ ಬೆಳವಣಿಗೆಗಳು ಬಿರುಸುಗೊಂಡಿವೆ.

ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್‌) ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಸಮಾನ ಮನಸ್ಕರ ತಂಡವು ಪ್ರಜಾಕೀಯ ಪಕ್ಷದ ನಟ ಉಪೇಂದ್ರ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರವಿಕೃಷ್ಣಾ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ. ರಾಜ್ಯದ ಪರಮಭ್ರಷ್ಟ ರಾಜಕೀಯ ಪಕ್ಷಗಳನ್ನು ಮತ್ತು ರಾಜಕಾರಣಿಗಳನ್ನು ಹೊರತುಪಡಿಸಿ ಜೆಸಿಬಿ ಯೇತರ ರಾಜಕೀಯ ಪಕ್ಷಗಳನ್ನು ಮತ್ತು ಪ್ರಾಮಾಣಿಕ ರಾಜಕಾರಣಿಗಳನ್ನು ಒಂದೆಡೆ ಸೇರಿಸಬೇಕು. ಸಾಧ್ಯವಾದರೆ ಜೊತೆಯಾಗಿ ಚುನಾವಣೆಗಳನ್ನು ಎದುರಿಸಿ ಜೆಸಿಬಿ ಪಕ್ಷಗಳಿಗೆ ಪರ್ಯಾಯ ನೀಡಬೇಕು ಎಂದು ಮಹಿಮಾ ಪಟೇಲರ ಜೊತೆಗೂಡಿ ನಾವು 2022ರಿಂದಲೂ ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯದ ರಾಜಕಾರಣ ತಲುಪಿರುವ ಅಧೋಗತಿ ಮತ್ತು ದುರಾಡಳಿತದ ಪರಮಾವಧಿಯನ್ನು ನೋಡಿದ ಯಾರಿಗೆ ಆಗಲಿ ಇದನ್ನು ಸರಿಪಡಿಸಲು ಕೆಲವೇ ವ್ಯಕ್ತಿಗಳಿಂದ ಸಾಧ್ಯವಿಲ್ಲ ಎನ್ನುವುದು ಮನವರಿಕೆ ಆಗಿರುತ್ತದೆ. ಹಾಗಾಗಿಯೇ ಎಷ್ಟೆಲ್ಲಾ ವ್ಯಕ್ತಿ ಮತ್ತು ಶಕ್ತಿಗಳನ್ನು ಜೊತೆಗೂಡಿಸಲು ಸಾಧ್ಯವೋ ಅದೆಲ್ಲವನ್ನೂ ಮಾಡಬೇಕು ಎನ್ನುವ ಸದಾಶಯದಲ್ಲಿ ನಾವು ಮತ್ತು ಮಹಿಮಾ ಪಟೇಲರು ಇದನ್ನು ಕಳೆದ ಐದಾರು ವರ್ಷಗಳಿಂದ ಮಾಡುತ್ತಲೇ ಬರುತ್ತಿದ್ದೇವೆ ಎಂದಿದ್ದಾರೆ.

ಉಪೇಂದ್ರ ಜೊತೆಗೆ ಎರಡು ತಾಸು ಚರ್ಚೆ:

ಈ ನಿಟ್ಟಿನಲ್ಲಿಯೇ ಕೆಲವು ಸಮಾನಮನಸ್ಕ ಮತ್ತು ಪರಸ್ಪರ ಪರಿಚಿತ ಮಿತ್ರರೊಡಗೂಡಿ ಉಪೇಂದ್ರ ಅವರನ್ನು ಭೇಟಿ ಆಗಿದ್ದೆವು. ಎರಡು ಗಂಟೆಗೂ ಮಿಕ್ಕಿದ ಈ ಭೇಟಿಯಲ್ಲಿ ಹಲವಾರು ವಿಷಯಗಳು ಮುಕ್ತವಾಗಿ ಚರ್ಚೆಯಾದವು. ಹಲವು ವಿಚಾರಗಳಲ್ಲಿ ಉಪೇಂದ್ರರೂ ಸ್ಪಷ್ಟವಾಗಿದ್ದಾರೆ. ನಾವೂ ಒಂದಷ್ಟು ವಿಷಯಗಳಲ್ಲಿ ಸ್ಪಷ್ಟವಾಗಿದ್ದೇವೆ. ಹಾಗಾಗಿ ನಮ್ಮ ತರಹದ ಜನರು ಯಾವುದಾದರೂ ಸಾಮಾನ್ಯ ವೇದಿಕೆಗೆ ಬರಲು ಸಾಧ್ಯವೇ ಎಂದು ಶೋಧನೆ ಆಗುತ್ತಿದೆ. ಆಗಬಹುದು ಎನ್ನುವ ಸದಾಶಯ ನಮ್ಮದು ಎಂದು ಹೇಳಿದ್ದಾರೆ.

ಮುಂದೆ ಹಲವರೊಂದಿಗೆ ಸಭೆ:

ಇದೇ ರೀತಿಯ ಭೇಟಿ ಮತ್ತು ಮಾತುಕತೆಗಳನ್ನು ಮಹಿಮಾ ಪಟೇಲರು ಇನ್ನೂ ಹಲವರ ಜೊತೆ ಮಾಡುತ್ತಿದ್ದಾರೆ. ನಾನು ಯಾರೆಲ್ಲರ ಜೊತೆ ಮಾತನಾಡಿದ್ದೇನೆ ಎಂದು ಈ ಹಿಂದೆ ಒಮ್ಮೆ ಬರೆದಿದ್ದೇನೆ. ಅವರೆಲ್ಲರ ಜೊತೆ ಬಹುಶಃ ಮುಂದಿನ ಒಂದೆರಡು ವಾರದಲ್ಲಿ ಒಂದು ಔಪಚಾರಿಕವಾದ ಅನೌಪಚಾರಿಕ ಸಭೆ ಆಗಬಹುದು. ಇದಿಷ್ಟು ರಾಜ್ಯದಲ್ಲಿ ಪರ್ಯಾಯ ರಾಜಕಾರಣದ ವಿಚಾರಕ್ಕೆ ನಮ್ಮ ಕಡೆಯಿಂದ ಆಗುತ್ತಿರುವ ಬೆಳವಣಿಗೆಗಳು ಎಂದು ತಿಳಿಸಿದ್ದಾರೆ.

ನಾವು ನಾಲ್ಕೆಜ್ಜೆ ಮುಂದೆ ಹೋದಾಗಲೂ ಇನ್ನೊಂದು ಬದಿಯವರು ಒಂದೆಜ್ಜೆಯೂ ಬಾರದಿದ್ದರೆ ನಾವು ಮತ್ತೊಂದು ರಚನಾತ್ಮಕ ಕಾರ್ಯಕ್ರಮ ಮತ್ತು ಹೋರಾಟದ ಮೂಲಕ ಮುನ್ನಡೆಯುವುದು ಅನಿವಾರ್ಯ ಮತ್ತು ಅಗತ್ಯ ಎನ್ನುವುದು ಎಲ್ಲರಿಗೂ ತಿಳಿದಿರಲಿ ಎಂದು ರವಿಕೃಷ್ಣಾ ರೆಡ್ಡಿ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

32ನೇ ಬಾರಿ ಎವರೆಸ್ಟ್‌ ಹತ್ತಿ ರೀತಾ ದಾಖಲೆ
ಇಂದು ಕೇರಳ ಸಿಎಂ ಅಗಿ ಸತೀಶನ್ ಶಪಥ