ಇಂದು ಕೇರಳ ಸಿಎಂ ಅಗಿ ಸತೀಶನ್ ಶಪಥ

KannadaprabhaNewsNetwork |  
Published : May 18, 2026, 01:45 AM IST
ಶಪಥ | Kannada Prabha

ಸಾರಾಂಶ

ದಶಕದ ಬಳಿಕ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಜಯಶೀಲ ಆಗಿರುವ ಕಾಂಗ್ರೆಸ್‌ ನೇತೃತ್ವದ ಎಲ್‌ಡಿಎಫ್‌ ಕೂಟ ಸೋಮವಾರ ಸರ್ಕಾರ ರಚಿಸಲಿದ್ದು, ಹಿರಿಯ ನಾಯಕ ವಿ.ಡಿ. ಸತೀಶನ್‌ ಮುಖ್ಯಮಂತ್ರಿಯಾಗಿ ಶಪಥ ಸ್ವೀಕರಿಸಲಿದ್ದಾರೆ.

ದಶಕದ ಬಳಿಕ ಮತ್ತೆ ಕಾಂಗ್ರೆಸ್‌ ರಾಜ್ಯಭಾರ

ರಾಗಾ, ಖರ್ಗೆ, ಪ್ರಿಯಾಂಕಾ, ಸಿದ್ದು ಸೇರಿ ಹಲವರು ಭಾಗಿತಿರುವನಂತಪುರಂ: ದಶಕದ ಬಳಿಕ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಜಯಶೀಲ ಆಗಿರುವ ಕಾಂಗ್ರೆಸ್‌ ನೇತೃತ್ವದ ಎಲ್‌ಡಿಎಫ್‌ ಕೂಟ ಸೋಮವಾರ ಸರ್ಕಾರ ರಚಿಸಲಿದ್ದು, ಹಿರಿಯ ನಾಯಕ ವಿ.ಡಿ. ಸತೀಶನ್‌ ಮುಖ್ಯಮಂತ್ರಿಯಾಗಿ ಶಪಥ ಸ್ವೀಕರಿಸಲಿದ್ದಾರೆ.ನಾನಾ ಕಸರತ್ತಿನ ಬಳಿಕ ಫಲಿತಾಂಶ ಬಂದ 2 ವಾರಗಳ ನಂತರ ಕೇರಳದಲ್ಲಿ ಸರ್ಕಾರ ರಚನೆಯಾಗುತ್ತಿದೆ. ಸತೀಶನ್‌ ಜತೆಗೆ ಇತರ 20 ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಲ್ಲಿನ ಸೆಂಟ್ರಲ್‌ ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ.

ರಾಗಾ, ಖರ್ಗೆ, ಸಿದ್ದರಾಮಯ್ಯ ಸೇರಿ ಹಲವರು ಭಾಗಿ: ಪ್ರಮಾಣ ವಚನ ಕಾರ್ಯಕ್ರಮಕ್ಕೆ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಹೈಕಮಾಂಡ್‌ನ ಹಲವು ನಾಯಕರು ಭಾಗಿಯಾಗಲಿದ್ದಾರೆ. ಜತೆಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ, ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಸೇರಿದಂತೆ ಕಾಂಗ್ರೆಸ್‌ ಆಡಳಿತದಲ್ಲಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಹಾಗೂ ತಮಿಳುನಾಡು ಸಿಎಂ ವಿಜಯ್‌ಗೂ ಆಹ್ವಾನ ಹೋಗಿದೆ.

==

ಹಸುಗಳ ಬರ್ತ್ ಸರ್ಟಿಫಿಕೇಟ್‌ ಕೇಳಿದ ಬಂಗಾಳ ಬಿಜೆಪಿ ಶಾಸಕಿ!

ಕೋಲ್ಕತಾ: ಪಶ್ಚಿಮ ಬಂಗಾಳದ ನೂತನ ಬಿಜೆಪಿ ಶಾಸಕಿ ರೇಖಾ ಪಾತ್ರ ಶನಿವಾರ ಹಸುಗಳನ್ನು ತುಂಬಿದ್ದ ವಾಹನವನ್ನು ತಡೆದು, ಅವುಗಳ ಬರ್ತ್‌ ಸರ್ಟಿಫಿಕೇಟ್‌ ಕೇಳಿದ ಪ್ರಸಂಗ ನಡೆದಿದೆ. ಇದು ಟಿಎಂಸಿ ಟೀಕೆಗೆ ಕಾರಣವಾಗಿದೆ.ಹಸುಗಳನ್ನು ವ್ಯಕ್ತಿಯೊಬ್ಬರು ವಾಹನದಲ್ಲಿ ಸಾಗಿಸುತ್ತಿದ್ದಾಗ ತಡೆದ ರೇಖಾ, ‘ಈ ಹಸುಗಳು ವಧೆಗೆ ಅರ್ಹವಾಗಿವೆ ಎಂದು ಸಾಬೀತುಪಡಿಸಲು ಜನನ ಪ್ರಮಾಣಪತ್ರ ತೋರಿಸಿ. ಏಕೆಂದರೆ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜಾನುವಾರುಗಳನ್ನು ವಧೆ ಮಾಡುವಂತಿಲ್ಲ ಎಂದು ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ’ ಎಂದು ಪ್ರತಿಪಾದಿಸಿದರು. ಬಳಿಕ ಅವನ್ನು ವಾಹನದಿಂದ ಕೆಳಗಿಳಿಸಿ, ರಸ್ತೆಬದಿಯ ಮರದ ಕೆಳಗೆ ಕಟ್ಟಿ, ಹುಲ್ಲು ಮತ್ತು ನೀರಿನ ವ್ಯವಸ್ಥೆ ಮಾಡಿದರು.

ಇದು ಈಗ ತೃಣಮೂಲ ಕಾಂಗ್ರೆಸ್‌ ಟೀಕೆಗೆ ಕಾರಣವಾಗಿದೆ. ‘ಬಿಜೆಪಿ ಆಡಳಿತದ ಯಾವ ರಾಜ್ಯಗಳಲ್ಲಿ ಹಸುಗಳಿಗೆ ಜಜನ ಪ್ರಮಾಣ ಪತ್ರ ನೀಡಲಾಗುತ್ತಿದೆ?’ ಎಂದು ಪ್ರಶ್ನಿಸಿದೆ.

==

ನೀಟ್‌ ಸೋರಿಕೆ ವಿಚಾರದಲ್ಲಿ ಮೋದಿ ಕ್ಷಮೆ ಕೇಳಲಿ: ರಾಹುಲ್‌

ನವದೆಹಲಿ: ‘ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವಧಿಯಲ್ಲಿ ಪದೇ ಪದೇ ಪ್ರಶ್ನೆ ಪತ್ರಿಕೆ ಸೋರಿಕೆಯಾದರೂ ಅವರನ್ನು ಪ್ರಧಾನಿ ನರೇಂದ್ರ ಮೋದಿ ವಜಾಗೊಳಿಸುತ್ತಿಲ್ಲ ಏಕೆ? ತಪ್ಪು ಮರುಕಳಿಸಿದರೂ ಮೋದಿ ಮೌನವಾಗಿರೋದೇಕೆ? ಅವರು ವಿದ್ಯಾರ್ಥಿಗಳಲ್ಲಿ ಕ್ಷಮೆ ಯಾಚಿಸಬೇಕು’ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ.ಟ್ವೀಟ್‌ ಮಾಡಿರುವ ರಾಹುಲ್‌, ‘2024ರಲ್ಲಿ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪರೀಕ್ಷೆ ರದ್ದಾಯಿತು. ಆದರೆ ಸಚಿವರು ರಾಜೀನಾಮೆ ನೀಡಲಿಲ್ಲ. 2026ರಲ್ಲಿಯೂ ಪತ್ರಿಕೆ ಸೋರಿಕೆಯಾಗಿ ಪರೀಕ್ಷೆ ರದ್ದಾಯಿತು. ಹೀಗಿದ್ದರೂ ಸಚಿವರು ಇದು ವರೆಗೂ ರಾಜೀನಾಮೆ ನೀಡಿಲ್ಲ. ಮೋದಿಯವರೇ ಜನರು ನಿಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ಉತ್ತರಿಸಿ. ಪದೇ ಯಾಕೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿದೆ? ನೀವು ಯಾಕೆ ಮೌನವಾಗಿದ್ದೀರಿ? ಈ ವಿಚಾರದಲ್ಲಿ ಸಚಿವರು ವಿಫಲರಾದರೂ ಯಾಕೆ ವಜಾಗೊಳಿಸುತ್ತಿಲ್ಲ?’ ಎಂದು ಪ್ರಶ್ನಿಸಿದ್ದಾರೆ.

==

ತಿರುಮಲದಲ್ಲಿ ಪೆಟ್ರೋಲ್‌, ಡೀಸೆಲ್‌ ವಾಹನಕ್ಕೆ ಟೋಲ್‌: ಟಿಟಿಡಿ ಚಿಂತನೆ

ವಿದ್ಯುತ್‌ ವಾಹನಕ್ಕೆ ಶುಲ್ಕ ಇಲ್ಲ । ಚಾರ್ಜಿಂಗ್‌ ಕೇಂದ್ರ ಸ್ಥಾಪನೆ

ಎಲೆಕ್ಟ್ರಿಕ್‌ ವಾಹನ ಬಳಕೆ ಉತ್ತೇಜನಕ್ಕೆ ಈ ಕ್ರಮ

ತಿರುಮಲ: ಪರಿಸರ ಸಂರಕ್ಷಣೆ ಮತ್ತು ವಿದ್ಯುತ್‌ ವಾಹನಗಳನ್ನು ಉತ್ತೇಜಿಸುವ ಉದ್ದೇಶದಿಂದ ತಿರುಮಲ ಬೆಟ್ಟವನ್ನು ಪ್ರವೇಶಿಸುವ ಪೆಟ್ರೋಲ್‌ ಮತ್ತು ಡೀಸೆಲ್‌ ವಾಹನಗಳ ಮೇಲೆ ಭಾರಿ ಟೋಲ್ ವಿಧಿಸಲು ತಿರುಪತಿ ತಿಮ್ಮಪ್ಪನ ದೇವಸ್ಥಾನದ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತಿರುವ ಟಿಟಿಡಿ ಚಿಂತನೆ ನಡೆಸಿದೆ.

ಈ ಬಗ್ಗೆ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರವಿಚಂದ್ರ ಅವರು ಮಾತನಾಡಿ, ‘ಇಲ್ಲಿಗೆ ಪ್ರತಿದಿನ ಸುಮಾರು 8000 ವಾಹನಗಳು ಬರುತ್ತವೆ. ಆದ್ದರಿಂದ ವಿದ್ಯುತ್‌ ಚಾಲಿತ ವಾಹನಗಳನ್ನು ಹೊರತುಪಡಿಸಿ ಬೇರೆಲ್ಲವುಗಳಿಂದ ಭಾರಿ ಟೋಲ್‌ ವಸೂಲಿ ಮಾಡುವ ಯೋಜನೆಯಿದೆ. ಆದರೆ ಇದು ಸದ್ಯಕ್ಕೆ ಜಾರಿಗೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಜಾರಿಯಾಗಲಿದೆ’ ಎಂದರು.

ಇವಿಗೆ ಉತ್ತೇಜನ:ಇವಿಗಳ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅವುಗಳನ್ನು ಶುಲ್ಕದಿಂದ ಹೊರಗಿಡಲಾಗಿದೆ. ಜತೆಗೆ, ಅವುಗಳಿಗೆ ಅನುಕೂಲವಾಗುವಂತೆ ಆದಷ್ಟು ಬೇಗ ತಿರುಮಲದಲ್ಲಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದ ರವಿಚಂದ್ರ, ‘ಈ ಕ್ರಮಗಳ ಮೂಲಕ ಬೆಟ್ಟದ ಪರಿಸರ ಸಂರಕ್ಷಣೆಯ ಜತೆಗೆ ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ರಾಜ್ಯದ ಇಂಧನ ಭದ್ರತೆ ಕಾಪಾಡುವ ಉದ್ದೇಶವಿದೆ. ಜತೆಗೆ ಗಲಾಟೆ, ಮಾಲಿನ್ಯ ಮತ್ತು ದಟ್ಟಣೆಯನ್ನು ತಗ್ಗಿಸುವ ಗುರಿಯಿದೆ’ ಎಂದರು

ಟೌನ್‌ಶಿಪ್‌ ನಿರ್ಮಾಣ:

ಜತೆಗೆ, ‘ಅಲಿಪಿರಿಯಲ್ಲಿ 500 ಎಕರೆ ವ್ಯಾಪ್ತಿಯಲ್ಲಿ ಹೊಸ ಟೌನ್‌ಶಿಪ್‌ ನಿರ್ಮಿಸಿ ಅದನ್ನು ನಿಶ್ಶಬ್ದ ಪ್ರದೇಶವೆಂದು ಘೋಷಿಸಲಾಗುವುದು’ ಎಂದೂ ಅವರು ತಿಳಿಸಿದರು.ಈಗಾಗಲೇ ತಿರುಪತಿ ಬೆಟ್ಟದ ಸುತ್ತ 150 ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು, ಅಲ್ಲಿ ಸಮೀಕ್ಷೆ ನಡೆಸಲಾಗಿದೆ. ಅಲ್ಲಿ ವಸತಿ, ಪಾರ್ಕಿಂಗ್, ಆಹಾರ ಕೇಂದ್ರ, ಪೂಜಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ತಿರುಮಲದಲ್ಲಿ ಲಭ್ಯವಿರುವ ಸೌಲಭ್ಯಗಳು ಅಲಿಪಿರಿಯಲ್ಲಿಯೂ ಲಭ್ಯವಿರುತ್ತವೆ ಎಂದು ರವಿಚಂದ್ರ ತಿಳಿಸಿದ್ದಾರೆ.

==

ಹೋರ್ಮುಜ್‌ ದಾಟಿ ಗುಜರಾತ್‌ ತಲುಪಿದ 20,000 ಟನ್ ಎಲ್‌ಪಿಜಿ ಹಡಗು

ಕಾಂಡ್ಲಾ (ಗುಜರಾತ್‌): ಮಧ್ಯಪ್ರಾಚ್ಯದಿಂದ ಸೃಷ್ಟಿಯಾಗಿರುವ ಹೋರ್ಮುಜ್ ಬಿಕ್ಕಟ್ಟಿನ ನಡುವೆಯೇ 20,000 ಟನ್‌ ಎಲ್‌ಪಿಜಿ ಹೊತ್ತಿದ್ದ ಹಡಗು ಹೋರ್ಮುಜ್‌ ದಾಟಿ ಯಶಸ್ವಿಯಾಗಿ ಗುಜರಾತಿನ ಕಾಂಡ್ಲಾ ದೀನ್‌ದಯಾಳ್ ಬಂದರನ್ನು ಭಾನುವಾರ ತಲುಪಿದೆ.ಕತಾರ್‌ನಿಂದ ಹೊರಟಿದ್ದ ಮಾರ್ಷಲ್‌ ದ್ವೀಪದ ಧ್ವಜವಿದ್ದ ಎಂವಿ ಎಸ್‌ವೈಎಂಐ ನೌಕೆಯು ಮೇ 13ರಂದು ಹೋರ್ಮುಜ್‌ ದಾತ್ತ್ತು. ಯುದ್ಧ ಆರಂಭವಾದ ಬಳಿಕ ಹೋರ್ಮುಜ್‌ ದಾಟಿ ಇದುವರೆಗೆ ಭಾರತಕ್ಕೆ 12 ಎಲ್‌ಪಿಜಿ ಟ್ಯಾಂಕರ್‌ಗಳು ಮತ್ತು 1 ಕಚ್ಚಾ ತೈಲ ಟ್ಯಾಂಕರ್‌ ಸೇರಿ ಭಾರತದ ಧ್ವಜ ಹೊತ್ತ 13 ಹಡಗುಗಳು ಬಂದಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

32ನೇ ಬಾರಿ ಎವರೆಸ್ಟ್‌ ಹತ್ತಿ ರೀತಾ ದಾಖಲೆ
ಕರ್ನಾಟಕ ಮೂಲಕ ಸಾಗುವ ರೈಲಿಗೆ ಬೆಂಕಿ