ಇತ್ತೀಚೆಗೆ ಬಿಡುಗಡೆಯಾಗಿದ್ದ ತಮ್ಮ ‘ಅನ್ನಪೂರ್ಣಿ’ ಚಿತ್ರದಲ್ಲಿ ಶ್ರೀರಾಮನ ಅವಹೇಳನ ಹಾಗೂ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಲಾಗಿದೆ ಎಂಬ ಆರೋಪದ ಕುರಿತು ನಟಿ ನಯನತಾರಾ ಕ್ಷಮೆಯಾಚಿಸಿದ್ದಾರೆ.
ಚಿತ್ರದಲ್ಲಿ ‘ಶ್ರೀರಾಮ ಕಾಡಿನಲ್ಲಿ ಮಾಂಸ ತಿನ್ನುತ್ತಿದ್ದ’ ಎಂಬ ಡೈಲಾಗ್ ಇತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಗುರುವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ನಯನತಾರಾ ‘ಜೈ ಶ್ರೀ ರಾಮ್. ದೃಢತೆಯನ್ನು ಪ್ರೇರೇಪಿಸುವ ಉದ್ದೇಶದಿಂದ ಸಿನಿಮಾ ಮಾಡಲಾಗಿದೆಯೇ ಹೊರತು ಯಾರಿಗೂ ನೋವುಂಟು ಮಾಡುವ ಉದ್ದೇಶವಿರಲಿಲ್ಲ.
ಜೀವನದ ಪ್ರಯತ್ನಗಳ ಕುರಿತು ಸಕಾರಾತ್ಮಕ ಸಂದೇಶ ಹಂಚಿಕೊಳ್ಳುವ ನಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ ಅಜಾಗರೂಕತೆಯಿಂದ ನೋವುಂಟು ಮಾಡಿರಬಹುದು.
ನಮ್ಮಿಂದ ಯಾರ ಭಾವನೆಗೆ ಧಕ್ಕೆಯಾಗಿದೆಯೋ ಅವರಿಗೆ ನಾನು ನನ್ನ ಪ್ರಾಮಾಣಿಕ ಮತ್ತು ಹೃತ್ಪೂರ್ವಕ ಕ್ಷಮೆಯಾಚಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಚಿತ್ರದಲ್ಲಿ ಪೂಜಾರಿಯ ಮಗಳ ಪಾತ್ರ ನಿರ್ವಹಿಸಿರುವ ನಯನತಾರಾ, ತಾವು ಉತ್ತರಮ ಚೆಫ್ ಆಗಬೇಕೆಂದು ಬಿರಿಯಾನಿ ತಯಾರಿಸುತ್ತಾರೆ. ಅಲ್ಲದೇ ಇದಕ್ಕಾಗಿ ನಮಾಜ್ ಮಾಡಿದ್ದಾರೆ.
ಇನ್ನು ‘ಶ್ರೀರಾಮ ಮಾಂಸ ಸೇವಿಸುತ್ತಿದ್ದ’ ಎಂದೂ ಚಿತ್ರದಲ್ಲಿ ಸಂಭಾಷಣೆ ಇದೆ. ಇದೆಲ್ಲದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಿಂದ ತೆಗೆದು ಹಾಕಲಾಗಿದೆ.
ರಾಮನ ಚಿತ್ರವಿರುವ ಹೊಸ ನೋಟು ಬಿಡುಗಡೆ ಎಂಬುದು ಸುಳ್ಳುಸುದ್ಧಿ
ಮುಂಬೈ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 500 ರು. ಮುಖಬೆಲೆಯ ನೋಟಿನಲ್ಲಿ ಮಹಾತ್ಮ ಗಾಂಧೀಜಿಯವರ ಚಿತ್ರದ ಬದಲಾಗಿ ಶ್ರೀರಾಮನ ಚಿತ್ರವಿರುವ ಹೊಸ ನೋಟನ್ನು ಬಿಡುಗಡೆ ಮಾಡಲಿದೆ ಎಂದು ಜಾಲತಾಣಗಳಲ್ಲಿ ನಕಲಿ ಸುದ್ದಿಯೊಂದು ವೈರಲ್ ಆಗಿದೆ.
500 ರು. ನೋಟಿನಲ್ಲಿ ರಾಮನ ಚಿತ್ರವನ್ನು ಎಡಿಟ್ ಮಾಡಿರುವ ಪೋಟೋವೊಂದು ಹರಿದಾಡಿದೆ. ಹೀಗಾಗಿ ಮಂದಿರ ಉದ್ಘಾಟನೆ ದಿನದಂದು ಆರ್‌ಬಿಐ ಈ ಹೊಸ ನೋಟನ್ನು ಬಿಡುಗಡೆ ಮಾಡಲಿದೆ ಎಂದು ಹಲವರು ತಮ್ಮ ಜಾಲತಾಣ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ.
ಆದರೆ ಈ ಸುದ್ದಿ ಸುಳ್ಳು ಎಂದು ಗೊತ್ತಾಗಿದ್ದು, ಆರ್‌ಬಿಐ ಶ್ರೀರಾಮ ಚಿತ್ರವಿರುವ ಯಾವುದೇ ನೋಟುಗಳನ್ನು ಮುದ್ರಿಸುತ್ತಿಲ್ಲ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಮ ಮಂದಿರಕ್ಕೆ ನಟ ಪ್ರಭಾಸ್ 50 ಕೋಟಿ ರು. ದೇಣಿಗೆ ಸುದ್ದಿ ನಕಲಿ
ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಟ ಪ್ರಭಾಸ್ ಬರೋಬ್ಬರಿ 50 ಕೋಟಿ ರು. ದೇಣಿಗೆ ನೀಡಿದ್ದಾರೆ ಹಾಗೂ ಉದ್ಘಾಟನೆ ದಿನದಂದು ಅಯೋಧ್ಯೆಯಲ್ಲಿ ಭಕ್ತಾದಿಗಳಿಗೆ ಆಹಾರ ವಿತರಿಸಲಿದ್ದಾರೆ ಎಂಬ ಸುದ್ದಿಯೊಂದು ಜಾಲತಾಣಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ವೈರಲ್ ಆಗಿದೆ.
ಸುದ್ದಿ ಹರಿದಾಡಿದ ವೇಳೆ, ಅದಕ್ಕೆ ಪೂರಕ ಎಂಬಂತೆ ಆಂಧ್ರ ಪ್ರದೇಶ ಶಾಸಕ ಚಿರ್ಲಾ ಜಗ್ಗಿರೆಡ್ಡಿ ‘ಪ್ರಭಾಸ್ 50 ಕೋಟಿ ರು. ದೇಣಿಗೆ ಹಾಗೂ ಆಹಾರ ವಿತರಣೆ ಒಳ್ಳೆಯ ಕೆಲಸ’ ಎಂದು ನಟನನ್ನು ಹಾಡಿ ಹೊಗಳಿದ್ದರು.
ಆದರೆ ಇದು ಸುಳ್ಳುಸುದ್ದಿಯಾಗಿದೆ. ಪ್ರಭಾಸ್ ಯಾವುದೇ ದೇಣಿಗೆ ನೀಡಿಲ್ಲ’ ಎಂದು ಅವರ ತಂಡದವರು ತಿಳಿಸಿದ್ದಾರೆ.