ಆರ್‌ಬಿಐ ಹೊಸ ಗವರ್ನರ್‌ ಸಂಜಯ್‌ ಮಲ್ಹೋತ್ರಾ ಸಹಿ ಇರುವ ₹50 ಮುಖಬೆಲೆಯ ನೋಟು ಬಿಡುಗಡೆ

KannadaprabhaNewsNetwork |  
Published : Feb 13, 2025, 12:47 AM ISTUpdated : Feb 13, 2025, 04:21 AM IST
ಆರ್‌ಬಿಐ | Kannada Prabha

ಸಾರಾಂಶ

ಆರ್‌ಬಿಐನ ನೂತನ ಗವರ್ನರ್‌ ಸಂಜಯ್‌ ಮಲ್ಹೋತ್ರಾ ಅವರ ಸಹಿ ಇರುವ 50 ರು. ಮುಖಬೆಲೆಯ ನೋಟುಗಳನ್ನು ಶೀಘ್ರವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿದೆ.

ಮುಂಬೈ: ಆರ್‌ಬಿಐನ ನೂತನ ಗವರ್ನರ್‌ ಸಂಜಯ್‌ ಮಲ್ಹೋತ್ರಾ ಅವರ ಸಹಿ ಇರುವ 50 ರು. ಮುಖಬೆಲೆಯ ನೋಟುಗಳನ್ನು ಶೀಘ್ರವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿದೆ. 

ನಿರ್ಗಮಿತ ಅಧ್ಯಕ್ಷ ಶಕ್ತಿಕಾಂತ್‌ ದಾಸ್‌ ಅವರ ಅಧಿಕಾರಾವಧಿ ಕಳೆದ ವರ್ಷ ಡಿಸೆಂಬರ್‌ಗೆ ಅಂತ್ಯಗೊಂಡ ಬಳಿಕ ನೇಮಕರಾದ ಮಲ್ಹೋತ್ರಾ ಅವರ ಸಹಿಯನ್ನು ಹೊಸ 50 ರು. ಮುಖಬೆಲೆಯ ನೋಟುಗಳು ಹೊಂದಿರಲಿವೆ. ಸಹಿ ಹೊರತು ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ.

 ಮೊಮ್ಮಗನ ಪಡೆವ ನಟ ಚಿರಂಜೀವಿ ಬಯಕೆಗೆ ನೆಟ್ಟಿಗರ ಭಾರೀ ಟೀಕೆ

ಹೈದರಾಬಾದ್‌: ತಮ್ಮ ಪರಿವಾರದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ‘ಮೊಮ್ಮಗ’ ಬೇಕು ಎಂಬ ನಟ ಚಿರಂಜೀವಿಯವರ ಬಯಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ, ಸಿನಿಮಾ ಕಾರ್ಯಕ್ರಮವೊಂದರಲ್ಲಿ ಚಿರಂಜೀವಿ ತಮ್ಮ ಮೊಮ್ಮಗಳೊಂದಿಗಿರುವ ಚಿತ್ರ ತೋರಿಸಿದಾಗ, ‘ನಮ್ಮ ಮನೆ ಮಹಿಳೆಯರ ಹಾಸ್ಟೆಲ್‌ ಆಗಿದೆ’ ಎಂದು ತಮಾಷೆ ಮಾಡುತ್ತಾ, ‘ಈ ಬಾರಿಯಾದರೂ ರಾಮ್‌ ಚರಣ್‌ಗೆ ಗಂಡು ಮಗುವಾಗಿ, ನಮ್ಮ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಂತಾಗಲಿ. ಆದರೆ ಅವರಿಗೆ ಮುಂದಿನದ್ದೂ ಹೆಣ್ಣೇ ಆದೀತೆಂದು ನನಗೆ ಚಿಂತೆಯಾಗುತ್ತಿದೆ’ ಎಂದರು. 

 ಇದಕ್ಕೆ ಎಕ್ಸ್‌ನಲ್ಲಿ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಾ, ‘ಇದು ಗಂಡಿಗೇ ಆದ್ಯತೆ ನೀಡುವ ಮನಸ್ಥಿತಿ ತೋರಿಸುತ್ತದೆ’ ಎಂದಿದ್ದಾರೆ.

ಪತ್ನಿಯೊಂದಿಗೆ ಒಪ್ಪಿಗೆ ಇಲ್ಲದ ಅಸಹಜ ಸೆಕ್ಸ್‌ ಅಪರಾಧವಲ್ಲ: ಹೈಕೋರ್ಟ್

ರಾಯ್ಪುರ: ಪತ್ನಿಯೊಂದಿಗೆ ಒಪ್ಪಿಗೆ ಇಲ್ಲದ ಅಸಹಜ ಲೈಂಗಿಕ ಕ್ರಿಯೆಯು ಅತ್ಯಾಚಾರವಾಗುವುದಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್‌ ಹೇಳಿದೆ. 

2017ರಲ್ಲಿ ಪತಿಯಿಂದ ಅಸಹಜ ಲೈಂಗಿಕ ಕ್ರಿಯೆಯಿಂದಾಗಿ ಪತ್ನಿಯು ಮೃತಪಟ್ಟ ಪ್ರಕರಣದಲ್ಲಿ ತೀರ್ಪು ನೀಡಿದ ಪೀಠ, ದಂಪತಿಗಳ ಮಧ್ಯೆ ಸೆಕ್ಸ್‌ ಅತ್ಯಾಚಾರದ ಸ್ವರೂಪ ಪಡೆದುಕೊಳ್ಳುವುದಿಲ್ಲ. ಜೊತೆಗೆ ಒಪ್ಪಿಗೆ ಇಲ್ಲದ ಅಸಹಜವಾದ ಲೈಂಗಿಕ ಕ್ರಿಯೆಯು ಸಹ ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ. ಇಂಥಹ ಪ್ರಕರಣದಲ್ಲಿ ಪತ್ನಿಯ ಒಪ್ಪಿಗೆ ಎಂಬುದು ಪರಿಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ ಪತಿಯನ್ನು ದೋಷಿ ಎಂದು ಪರಿಗಣಿಸಲು ಮತ್ತು ಆತನಿಗೆ ಶಿಕ್ಷೆ ನೀಡಲು ಭಾರತದಲ್ಲಿ ಆಸ್ಪದವಿಲ್ಲ’ ಎಂದು ಹೇಳಿದೆ.

ಅಯೋಧ್ಯೆ ರಾಮಮಂದಿರ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ನಿಧನ

ಲಖನೌ: ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಮಹಂತ ಸತ್ಯೇಂದ್ರ ದಾಸ್‌ (85)ಅನಾರೋಗ್ಯದಿಂದ ಬುಧವಾರ ನಿಧನರಾದರು.

ಮೆದುಳು ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅವರು ಫೆಬ್ರವರಿ ತಿಂಗಳ ಆರಂಭದಲ್ಲಿ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ನಿಧನರಾದರು.ತಮ್ಮ 20ನೆಯ ವಯಸ್ಸಿನಲ್ಲಿಯೇ ಸನ್ಯಾಸ ತೆಗೆದುಕೊಂಡಿದ್ದ ದಾಸ್‌, 1992 ಡಿ.6ರಂದು ನಡೆದ ಬಾಬರಿ ಮಸೀದಿ ಧ್ವಂಸದ ಸಮಯದಲ್ಲಿ ಮಂದಿರದ ಪ್ರಧಾನ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಸರ್ಕಾರ ಅದನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಾಗ ಅವರನ್ನು ತಾತ್ಕಾಲಿಕ ದೇವಾಲಯದ ಪ್ರಧಾನ ಅರ್ಚಕರನ್ನಾಗಿ ನೇಮಿಸಲಾಗಿತ್ತು. ಅಲ್ಲದೇ ಬಾಬರಿ ಮಸೀದಿ ಧ್ವಂಸದ ಘಟನೆಗೆ ಕೂಡ ಸಾಕ್ಷಿಯಾಗಿದ್ದರು.

ದಾಸ್‌ ನಿಧನಕ್ಕೆ ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಸಂತಾಪ ಸೂಚಿಸಿದ್ದು, ‘ಇದು ಆಧ್ಯಾತ್ಮಿಕ ಜಗತ್ತಿಗೆ ತುಂಬಲಾಗದ ನಷ್ಟ’ ಎಂದಿದ್ದಾರೆ. ಇನ್ನು ರಾಮ ಮಂದಿರ ಟ್ರಸ್ಟ್‌ ಅಧ್ಯಕ್ಷ ಚಂಪತ್‌ ರಾಯ್‌ ಕೂಡ ಸಂತಾಪ ಸೂಚಿಸಿದ್ದು, ‘ದಾಸ್‌ ಮುಖ್ಯ ಅರ್ಚಕರಾದಾಗ ಕೇವಲ 100 ರು. ಸಂಭಾವನೆ ಪಡೆದಿದ್ದರು’ ಎಂದು ನೆನಪಿಸಿಕೊಂಡರು.

ಮುಂಬೈ, ಪುಣೆಯಲ್ಲಿ ಜಿಬಿಎಸ್‌ಗೆ 2 ಬಲಿ: ಸಾವಿನ ಸಂಖ್ಯೆ 9ಕ್ಕೆ

ಮುಂಬೈ/ಪುಣೆ: ಗುಯಿಲಿನ್-ಬರ್ರೆ ಸಿಂಡ್ರೋಮ್ (ಜಿಬಿಎಸ್)ನಿಂದಾಗಿ ಮುಂಬೈ ಮತ್ತು ಪುಣೆಯಲ್ಲಿ ಬುಧವಾರ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ, ಇದರೊಂದಿಗೆ ಮಹಾರಾಷ್ಟ್ರದಲ್ಲಿ ಈ ವ್ಯಾಧಿಗೆ ಬಲಿಯಾದವರ ಸಂಖ್ಯೆ 9ಕ್ಕೆ ಏರಿದೆ. ಮುಂಬೈನ ವಡಾಲಾ ಪ್ರದೇಶದ ನಿವಾಸಿಯೊಬ್ಬರಿಗೆ ಕೆಲದಿನಗಳ ಹಿಂದೆ ಜಿಬಿಎಸ್ ದೃಢಪಟ್ಟಿತ್ತು. ಜ್ವರ, ಅತಿಸಾರ, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಪರಿಸ್ಥಿತಿ ಉಲ್ಬಣವಾದ ಕಾರಣ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅವರು ಇದೀಗ ನಿಧರಾಗಿದ್ದು, ಇದು ಮುಂಬೈನಲ್ಲಿ ದಾಖಲಾದ ಮೊದಲ ಸಾವು. ಇನ್ನು ಪುಣೆಯಲ್ಲಿ 59 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

PREV

Recommended Stories

ಶುಲ್ಕ ಕೊಟ್ಟರೆ ಪುರೋಹಿತರಿಂದ ಗಯಾ ದಲ್ಲಿ ಈಗ ಇ-ಪಿಂಡದಾನ ಸೇವೆ ಆರಂಭ!
ಉದಯಗಿರಿ, ಹಿಮಗಿರಿ ಸ್ಟೆಲ್ತ್‌ ನೌಕೆ ನೌಕಾಪಡೆ ಬತ್ತಳಿಕೆಗೆ