;Resize=(412,232))
ನವದೆಹಲಿ: ಕರ್ನಾಟಕದ ಹೆಮ್ಮೆಯ ಕ್ರೀಡಾಪಟು, ಭಾರತದ ದಿಗ್ಗಜ ರೋಹನ್ ಬೋಪಣ್ಣ ವೃತ್ತಿಪರ ಟೆನಿಸ್‌ಗೆ ವಿದಾಯ ಘೋಷಿಸಿದ್ದಾರೆ. ಶನಿವಾರ ಸಾಮಾಜಿಕ ತಾಣಗಳಲ್ಲಿ ರೋಹನ್ ತಮ್ಮ 22 ವರ್ಷಗಳ ವೃತ್ತಿಬದುಕನ್ನು ಅಂತ್ಯಗೊಳಿಸುತ್ತಿರುವುದಾಗಿ ಪೋಸ್ಟ್ ಹಾಕಿ, ನಿವೃತ್ತಿ ವಿಚಾರ ಬಹಿರಂಗಗೊಳಿಸಿದ್ದಾರೆ.
45 ವರ್ಷದ ರೋಹನ್ ಕಳೆದ ವಾರ ಪ್ಯಾರಿಸ್ ಮಾಸ್ಟರ್ಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಕಜಕ್‌ಸ್ತಾನದ ಅಲೆಕ್ಸಾಂಡರ್ ಬಬ್ಲಿಕ್ ಜೊತೆ ಕಣಕ್ಕಿಳಿದಿದ್ದರು. ಮೊದಲ ಸುತ್ತಿನಲ್ಲೇ ರೋಹನ್ ಜೋಡಿಗೆ ಸೋಲು ಎದುರಾಗಿತ್ತು. ಇದು ಅವರು ಆಡಿದ ಕೊನೆಯ ಪಂದ್ಯ.
ಸಾಮಾಜಿಕ ತಾಣದಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ರೋಹನ್, ‘ಇದು ಗುಡ್‌ಬೈ, ಆದರೆ ಖಂಡಿತ ಕೊನೆಯಲ್ಲ’ ಎಂದಿದ್ದಾರೆ. ‘ನಿಮ್ಮ ಜೀವನಕ್ಕೊಂದು ಅರ್ಥ ನೀಡಿದ ವಿಚಾರಕ್ಕೆ ಹೇಗೆ ವಿದಾಯ ಹೇಳಲು ಸಾಧ್ಯ? 20 ವರ್ಷಗಳ ಅವಿಸ್ಮರಣೀಯ ಪ್ರಯಾಣದ ಬಳಿಕ ಕೊನೆಗೂ ಆ ಸಮಯ ಬಂದಿದೆ’ ಎಂದು ನಿವೃತ್ತಿಯನ್ನು ಅಧಿಕೃತಗೊಳಿಸಿದ್ದಾರೆ.
‘ಕೊಡಗಿನ ಸಣ್ಣ ಪಟ್ಟಣವೊಂದರಲ್ಲಿ ಟೆನಿಸ್ ಪ್ರಯಾಣ ಆರಂಭಿಸಿದ ನಾನು, ಮರದ ತುಂಡುಗಳನ್ನು ಕತ್ತರಿಸಿ ನನ್ನ ಸರ್ವ್ ಬಲಿಷ್ಠಗೊಳಿಸಿಕೊಂಡೆ. ಕಾಫಿ ತೋಟಗಳಲ್ಲಿ ಓಡಿ ಶಕ್ತಿ ವೃದ್ಧಿಸಿಕೊಂಡೆ. ಬಿರುಕು ಬಿಟ್ಟಿದ್ದ ಅಂಕಣಗಳಲ್ಲಿ ನಿಂತು ಕಂಡ ಕನಸುಗಳನ್ನು ವಿಶ್ವ ಶ್ರೇಷ್ಠ ಕ್ರೀಡಾಂಗಣಗಳಲ್ಲಿ ನನಸಾಗಿಸಿಕೊಂಡೆ. ಅವೆಲ್ಲವೂ ಅಮೋಘ’ ಎಂದು ಬೋಪಣ್ಣ ಬರೆದಿದ್ದಾರೆ.
ರೋಹನ್, ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಭಾರತ ಪರ ಆಡುವುದನ್ನು ನಿಲ್ಲಿಸಿದ್ದರು. 2023ರಲ್ಲೇ ಡೇವಿಸ್ ಕಪ್‌ನಿಂದ ನಿವೃತ್ತಿ ಪಡೆದಿದ್ದರು.
2003ರಲ್ಲಿ ವೃತ್ತಿಪರ ಟೆನಿಸಿಗರಾದ ರೋಹನ್, ಭಾರತದ ಅತ್ಯುತ್ತಮ ಡಬಲ್ಸ್ ಆಟಗಾರರಾಗಿ ಬೆಳೆದರು. 2017ರಲ್ಲಿ ಕೆನಡಾದ ಗೇಬ್ರಿಯಾಲಾ ದಬ್ರೌಸ್ಕಿ ಜೊತೆ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಚಾಂಪಿಯನ್ ಆಗುವ ಮೂಲಕ ಚೊಚ್ಚಲ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆದ್ದ ಬೋಪಣ್ಣ, 2024ರ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆ ಪ್ರಶಸ್ತಿ ಜಯಿಸಿದರು. ಇದಲ್ಲದೇ ಅನೇಕ ಟ್ರೋಫಿ, ಪದಕಗಳನ್ನು ರೋಹನ್ ತಮ್ಮದಾಗಿಸಿಕೊಂಡಿದ್ದಾರೆ. =
* 2 ಬಾರಿ ಗ್ರ್ಯಾನ್ ಸ್ಲಾಂ ಪ್ರಶಸ್ತಿ ವಿಜೇತ (2017ರಲ್ಲಿ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್, 2024ರಲ್ಲಿ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್‌ನಲ್ಲಿ ಚಾಂಪಿಯನ್)
* 6 ಎಟಿಪಿ ಮಾಸ್ಟರ್ಸ್ 1000, 26 ಎಟಿಪಿ ವಿಶ್ವ ಟೂರ್ ಪ್ರಶಸ್ತಿ ವಿಜೇತ
* 2003ರಿಂದ 2023ರ ವರೆಗೂ ಭಾರತ ಪರ ಡೇವಿಸ್ ಕಪ್‌ನಲ್ಲಿ ಕಣಕ್ಕೆ
* 2012, 2016, 2024ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವಿಕೆ (2016ರ ಒಲಿಂಪಿಕ್ಸ್ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಜೊತೆ 4ನೇ ಸ್ಥಾನ)
* ಏಷ್ಯನ್ ಗೇಮ್ಸ್‌ನಲ್ಲಿ 2 ಚಿನ್ನದ ಪದಕ ವಿಜೇತ (2018ರಲ್ಲಿ ದಿವಿಜ್ ಶರಣ್ ಜೊತೆ ಪುರುಷರ ಡಬಲ್ಸ್, 2023ರಲ್ಲಿ ಋತುಜಾ ಭೋಸ್ಲೆ ಜೊತೆ ಮಿಶ್ರ ಡಬಲ್ಸ್‌ನಲ್ಲಿ ಚಿನ್ನ)
* ಕರ್ನಾಟಕ ಸರ್ಕಾರದಿಂದ ಏಕಲವ್ಯ, ಭಾರತ ಸರ್ಕಾರದಿಂದ ಅರ್ಜುನ, ಪದ್ಮಶ್ರೀ ಪ್ರಶಸ್ತಿಗಳಿಗೆ ಭಾಜನ
* ಪುರುಷರ ಡಬಲ್ಸ್‌ನಲ್ಲಿ ವಿಶ್ವ ನಂ.1 ಸ್ಥಾನಕ್ಕೇರಿದ ಅತಿಹಿರಿಯ. 2024ರ ಜನವರಿಯಲ್ಲಿ ತಮ್ಮ 43ನೇ ವರ್ಷದಲ್ಲಿ ರೋಹನ್ ಅಗ್ರಸ್ಥಾನಕ್ಕೇರಿದ್ದರು
* ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆದ್ದ ಅತಿಹಿರಿಯ. 2024ರಲ್ಲಿ ತಮ್ಮ 43ನೇ ವಯಸ್ಸಿನಲ್ಲಿ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿ ಗೆಲುವು
* ಎಟಿಪಿ ಮಾಸ್ಟರ್ಸ್ 1000 ಟೂರ್ನಿಯಲ್ಲಿ ಚಾಂಪಿಯನ್ ಆದ ಅತಿಹಿರಿಯ. 2024ರಲ್ಲಿ ತಮ್ಮ 44ನೇ ವಯಸ್ಸಲ್ಲಿ ಮಯಾಮಿ ಓಪನ್‌ನಲ್ಲಿ ಜಯ
* ಎಟಿಪಿ 500 ಟೂರ್ನಿಯ ಫೈನಲ್ ಪ್ರವೇಶಿಸಿದ ಅತಿಹಿರಿಯ. 2025ರಲ್ಲಿ, 45 ವರ್ಷ 6 ತಿಂಗಳ ವಯಸ್ಸಲ್ಲಿ ಜಪಾನ್ ಓಪನ್ ಫೈನಲ್‌ನಲ್ಲಿ ಆಟ