ಕೋಲ್ಕತಾ: ಪಡಿತರ ಹಗರಣ ಸಂಬಂಧ ಟಿಎಂಸಿ ನಾಯಕ ಶಜಹಾನ್ ತನಿಖೆಗೆ ಹೋಗಿದ್ದ ವೇಳೆ ಸಂದೇಶ್‌ಖಾಲಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿ ಕಲ್ಕತಾ ಹೈಕೋರ್ಟ್ ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ.
ಬಂಗಾಳದ ಪೊಲೀಸ್ ಅಧಿಕಾರಿಗಳು ಪಕ್ಷಪಾತಿಗಳಾಗಿದ್ದಾರೆ. ತನಿಖಾ ಸಂಸ್ಥೆಗಳ ಮೇಲಿನ ಜನರ ವಿಶ್ವಾಸ ಉಳಿಯಲು ಈ ಪ್ರಕರಣದಲ್ಲಿ ನ್ಯಾಯಸಮ್ಮತ, ಪಾರದರ್ಶಕ ಮತ್ತು ಸಮಗ್ರ ತನಿಖೆಯ ಅವಶ್ಯಕತೆ ಇದೆ.
ಹೀಗಾಗಿ ಪ್ರಕರಣವನ್ನು ರಾಜ್ಯ ಪೊಲೀಸರ ಬದಲಾಗಿ ಸಿಬಿಐ ಮೂಲಕ ನಡೆಸಲು ಆದೇಶಿಸಲಾಗುತ್ತಿದೆ ಎಂದು ಕೋರ್ಟ್ ಹೇಳಿತು.ಮತ್ತೊಂದೆಡೆ ಹೈಕೋರ್ಟ್ ಆದೇಶ ಹೊರಬಿದ್ದ ಬೆನ್ನಲ್ಲೇ ಅದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಕಳೆದ ಜ.5ರಂದು ಶಜಹಾನ್ ವಿಚಾರಣೆಗೆ ತೆರಳಿದ್ದ ವೇಳೆ, ಆತನ ಬೆಂಬಲಿಗರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಶಜಹಾನ್‌ನನ್ನು ಹೈಕೋರ್ಟ್ ಎಚ್ಚರಿಕೆ ಬಳಿಕ ಪೊಲೀಸರು ಫೆ.29ರಂದು ಬಂಧಿಸಿದ್ದರು.