ಪಾಕಿಸ್ತಾನದ ಪರ ಗೂಢಚರ್ಯೆ: ರಾಯಭಾರ ಕಚೇರಿ ಸಿಬ್ಬಂದಿ ಸೆರೆ

KannadaprabhaNewsNetwork | Updated : Feb 05 2024, 09:03 AM IST

ಸಾರಾಂಶ

ಮಾಸ್ಕೋದ ಭಾರತ ದೂತಾವಾಸ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಹಣಕ್ಕೆ ಭಾರತ ಸರ್ಕಾರದ ರಹಸ್ಯ ಮಾಹಿತಿಯ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಉ.ಪ್ರ.ದ ಭಯೋತ್ಪಾದನಾ ನಿಗ್ರಹ ದಳದಿಂದ ಬಂಧನ ಮಾಡಲಾಗಿದೆ.

ಲಖನೌ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಭಾರತದ ರಹಸ್ಯ ದಾಖಲೆಗಳನ್ನು ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ. 

ಬಂಧಿತನನ್ನು ಸತೇಂದ್ರ ಸೈವಾಲ್‌ ಎಂದು ಗುರುತಿಸಲಾಗಿದೆ. ಸೈವಾಲ್‌, ರಷ್ಯಾ ರಾಜಧಾನಿ ಮಾಸ್ಕೋದಲ್ಲಿರುವ ಭಾರತೀಯ ದೂತಾವಾಸ ಕಚೇರಿಯಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ಎಂಟಿಎಸ್ (ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌) ಆಗಿ 2021ರಿಂದ ಕೆಲಸ ಮಾಡುತ್ತಿದ್ದ.

 ಅಲ್ಲಿಂದಲೇ ಭಾರತ ಸರ್ಕಾರದ ರಕ್ಷಣಾ ಇಲಾಖೆ, ವಿದೇಶಾಂಗ ವ್ಯವಹಾರಗಳ ಇಲಾಖೆ ಹಾಗೂ ಭಾರತೀಯ ಸೇನೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಹಣಕ್ಕಾಗಿ ಪಾಕಿಸ್ತಾನದ ಐಎಸ್‌ಐಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಈತನ ಕೃತ್ಯದ ಬಗ್ಗೆ ರಹಸ್ಯ ಮೂಲಗಳಿಂದ 6 ತಿಂಗಳ ಹಿಂದೆಯೇ ಮಾಹಿತಿ ಪಡೆದಿದ್ದ ಯುಪಿ ಪೊಲೀಸರು ಆತನ ಮೇಲೆ ನಿಗಾ ಇಟ್ಟಿದ್ದರು. ಇತ್ತೀಚೆಗೆ ಆತ ರಜೆಯ ಮೇಲೆ ಭಾರತಕ್ಕೆ ಬಂದಾಗ ವಿಚಾರಣೆಗೆಂದು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ ಮೇರಠ್‌ ವಿಭಾಗದ ಪೊಲೀಸರು ಕರೆಸಿಕೊಂಡಿದ್ದರು. 

ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿಯು ಮೂಲತಃ ಉತ್ತರಪ್ರದೇಶದ ಶಾಮಹಿಯುದ್ದೀನ್‌ಪುರದ ನಿವಾಸಿಯಾಗಿದ್ದು, ಸಿಬ್ಬಂದಿ ನೇಮಕಾತಿ ಆಯೋಗ ನಡೆಸುವ ಎಂಟಿಎಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನೌಕರಿ ಗಿಟ್ಟಿಸಿ ರಷ್ಯಾದ ಮಾಸ್ಕೋದಲ್ಲಿರುವ ಭಾರತೀಯ ದೂತಾವಾಸ ಕಚೇರಿಯ ರಕ್ಷಣಾ ವಿಭಾಗಕ್ಕೆ ನಿಯೋಜನೆಗೊಂಡಿದ್ದನು.

Share this article