ಚುನಾವಣಾ ಬಾಂಡ್‌ ಮಾಹಿತಿ ಬಹಿರಂಗ: ಜೂ.30ರವರೆಗೆ ಸಮಯ ಕೇಳಿದ ಎಸ್‌ಬಿಐ

KannadaprabhaNewsNetwork | Updated : Mar 05 2024, 11:15 AM IST

ಸಾರಾಂಶ

ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿ ನೀಡಲು ತನಗೆ ವಿಧಿಸಲಾಗಿರುವ ಮಾ.6ರ ಗಡುವನ್ನು ಜೂ.30 ರವರೆಗೆ ವಿಸ್ತರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ನವದೆಹಲಿ: ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿ ನೀಡಲು ತನಗೆ ವಿಧಿಸಲಾಗಿರುವ ಮಾ.6ರ ಗಡುವನ್ನು ಜೂ.30 ರವರೆಗೆ ವಿಸ್ತರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಕಳೆದ ತಿಂಗಳು ಐತಿಹಾಸಿಕ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಎಸ್‌ಬಿಐ ಮೂಲಕ ನಡೆಯುತ್ತಿದ್ದ ಚುನಾವಣಾ ಬಾಂಡ್‌ಗಳ ರಹಸ್ಯ ದೇಣಿಗೆ ಯೋಜನೆಯನ್ನು ಮಾಹಿತಿ ಹಕ್ಕು ಉಲ್ಲಂಘನೆ ಕಾರಣ ನೀಡಿ ರದ್ದುಗೊಳಿಸಿತ್ತು ಮತ್ತು ಮಾ.6 ರೊಳಗೆ ಎಲ್ಲ ಖರೀದಿದಾರರ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ಎಸ್‌ಬಿಐಗೆ ತಿಳಿಸಿತ್ತು.

ಆದರೆ, ಈಗ ಎಸ್‌ಬಿಐ ಜೂ.30ರ ಸಮಯ ಕೇಳಿದೆ. ಅರ್ಥಾತ್‌ ಅಷ್ಟೊತ್ತಿಗೆ ಲೋಕಸಭೆ ಚುನಾವಣೆ ಮುಗಿದಿರುತ್ತದೆ. ಹೀಗಾಗಿ ಚುನಾವಣೆ ಆರಂಭವಾಗುವುದರ ಒಳಗೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ ಮೂಲಕ ಹಣ ನೀಡಿರುವ ದೇಣಿಗೆದಾರರ ಹೆಸರು ಬಹಿರಂಗ ಮಾಡಲು ಹಿಂದೇಟು ಹಾಕುವ ಯತ್ನ ನಡೆದಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ.

Share this article