ಭೋಜಶಾಲಾ ಸಮೀಪ ನಮಾಜ್‌ಗೆ ಅವಕಾಶ: ಸುಪ್ರೀಂ ಸೂಚನೆ

KannadaprabhaNewsNetwork |  
Published : Jul 15, 2026, 02:00 AM IST
ಭೋಜಶಾಲಾ  | Kannada Prabha

ಸಾರಾಂಶ

ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ವಿವಾದಿತ ಭೋಜಶಾಲಾ ದೇಗುಲ ಸಂಕೀರ್ಣದ ಸಮೀಪದಲ್ಲಿಯೇ ಮುಸ್ಲಿಮರಿಗೂ ಶುಕ್ರವಾರದ ನಮಾಜ್‌ಗೆ ಪ್ರತ್ಯೇಕ ಸ್ಥಳವಕಾಶ ಕಲ್ಪಿಸುವಂತೆ ಸುಪ್ರಿಂ ಕೋರ್ಟ್‌ ಸೂಚಿಸಿದೆ.

ಶುಕ್ರವಾರ ಮಧ್ಯಾಹ್ನ 1 ರಿಂದ 3 ಗಂಟೆ ತನಕ ಅವಕಾಶ

ಹಿಂದೂ, ಮುಸ್ಲಿಂ ಎರಡೂ ಕಡೆಯವರು ತಾಳ್ಮೆಯಿಂದಿರಿ: ಪೀಠಪಿಟಿಐ ನವದೆಹಲಿ

ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ವಿವಾದಿತ ಭೋಜಶಾಲಾ ದೇಗುಲ ಸಂಕೀರ್ಣದ ಸಮೀಪದಲ್ಲಿಯೇ ಮುಸ್ಲಿಮರಿಗೂ ಶುಕ್ರವಾರದ ನಮಾಜ್‌ಗೆ ಪ್ರತ್ಯೇಕ ಸ್ಥಳವಕಾಶ ಕಲ್ಪಿಸುವಂತೆ ಸುಪ್ರಿಂ ಕೋರ್ಟ್‌ ಸೂಚಿಸಿದೆ. ಭೋಜಶಾಲಾ ಸಂಕೀರ್ಣ ಸರಸ್ವತಿ ದೇಗುಲಕ್ಕೆ ಸೇರಿದ್ದು ಎಂದು ಮಧ್ಯಪ್ರದೇಶ ಹೈಕೋರ್ಟ್‌ ಕಳೆದ ಮೇ 15 ರಂದು ನೀಡಿದ್ದ ತೀರ್ಪಿನ ವಿರುದ್ಧ ಮುಸ್ಲಿಂ ಸಮುದಾಯ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಇದರ ವಿಚಾರಣೆ ನಡೆಸಿದ ಸಿಜೆಐ ನ್ಯಾ। ಸೂರ್ಯಕಾಂತ್ ಅವರ ನೇತೃತ್ವದ ತ್ರಿಸದಸ್ಯ ಪೀಠ, ಶುಕ್ರವಾರ ಮಧ್ಯಾಹ್ನ 1 ರಿಂದ 3 ಗಂಟೆ ತನಕ ಮುಸ್ಲಿಮರಿಗೆ ನಮಾಜ್‌ ಮಾಡಲು ಭೋಜಶಾಲಾ ಪಕ್ಕದಲ್ಲಿ ಪ್ರತ್ಯೇಕ ಸ್ಥಳವಕಾಶ ನೀಡುವಂತೆ ಸೂಚಿಸಿದೆ. ಜತೆಗೆ ದಿನನಿತ್ಯ ಆಧಾರದ ಮೇಲೆ ಪ್ರಕರಣ ಆಲಿಸಲು ಮತ್ತು ಸಮಸ್ಯೆ ಪರಿಹರಿಸಲು ಸಿದ್ಧ ಎಂದಿದೆ.

ತಾಳ್ಮೆಯಿಂದ ಇರಿ:‘ಭೋಜಶಾಲಾ ಸೂಕ್ಷ್ಮ ವಿಷಯವಾಗಿರುವುದರಿಂದ ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರು ತಾಳ್ಮೆಯಿಂದಿರಬೇಕು. ಬಳಸುವ ಪ್ರತಿಯೊಂದು ಅಭಿವ್ಯಕ್ತಿ ಬಗ್ಗೆಯೂ ಜಾಗರೂಕರಾಗಿರಬೇಕು. ಇವು ಬಹಳ ಸೂಕ್ಷ್ಮ ವಿಚಾರಗಳು. ನ್ಯಾಯಾಲಯದಲ್ಲಿ ಏನು ಹೇಳಲಾಗುತ್ತದೆಯೋ ಅದು ಅನಗತ್ಯವಾಗಿ ವಿವಾದಗಳನ್ನು ಸೃಷ್ಟಿಸಬಹುದು. ತಪ್ಪು ಅಭಿಪ್ರಾಯವನ್ನು ರವಾನಿಸಬಹುದು. ಮಧ್ಯಂತರ ವ್ಯವಸ್ಥೆಗೆ ಸಂಬಂಧಿಸಿದ ಇಂತಹ ವಿಚಾರಗಳು ನಮ್ಮ ಮುಂದೆ ಬರುತ್ತಿರುವುದು ಇದೇ ಮೊದಲು. ಹೈಕೋರ್ಟ್‌ ಆದೇಶ ಮತ್ತು ರಾಜ್ಯ ಸರ್ಕಾರದ ಅಸಹಾಯಕತೆಯನ್ನು ನ್ಯಾಯಾಲಯ ಗಮನಿಸಿದೆ. ಪ್ರಸ್ತುತ ಯಾವ ವ್ಯವಸ್ಥೆಗಳು ಜಾರಿಯಲ್ಲಿದೆವೋ ಅದರ ಕುರಿತು 10-15 ದಿನಗಳೊಳಗೆ ಪೀಠದ ಮುಂದೆ ಪಟ್ಟಿ ಮಾಡಬೇಕು’ ಎಂದಿತು.ಇನ್ನು, ‘ನಮ್ಮ ಅನುಮತಿಯಿಲ್ಲದೆ ಸ್ಥಳದಲ್ಲಿ ಯಾವುದೇ ರಚನಾತ್ಮಕ ಬದಲಾವಣೆ ಕೈಗೊಳ್ಳಬಾರದ’ ಎಂದು ಅದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶಿಸಿತು.

==

ಜ್ಞಾನವಾಪಿ ವಿವಾದ: ಸಂಧಾನಕ್ಕೆ ಹಿಂದು, ಮುಸ್ಲಿಂ ಗುಂಪುಗಳ ನಕಾರ

ಕೋರ್ಟಲ್ಲೇ ವಿವಾದ ಇತ್ಯರ್ಥಕ್ಕೆ ಮನವಿ

ಪಿಟಿಐ ವಾರಾಣಸಿ

ಕಾಶಿ ವಿಶ್ವನಾಥ ಮಂದಿರದ ಆವರಣದಲ್ಲಿರುವ ಜ್ಞಾನವಾಪಿ ಮಸೀದಿ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಗೊಳಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ಸಲಹೆಯನ್ನು ಹಿಂದೂ, ಮುಸ್ಲಿಂ ಸಮುದಾಯದವರು ತಿರಸ್ಕರಿಸಿದ್ದಾರೆ. ನ್ಯಾಯಾಲಯಗಳೇ ಈ ವಿಷಯವನ್ನು ನಿರ್ಧರಿಸಬೇಕು ಎಂದು ಎರಡೂ ಕಡೆಯವರು ಕೋರಿದ್ದಾರೆ.ಸುಪ್ರೀಂ ಕೋರ್ಟ್‌ ಪ್ರಕರಣಗಳ ಇತ್ಯರ್ಥಕ್ಕಾಗಿ ಆ.21-23ರ ತನಕ ವಿಶೇಷ ಲೋಕ ಅದಾಲತ್‌ ಆಯೋಜಿಸಿದೆ. ಅದಕ್ಕೂ ಮುಂಚಿತವಾಗಿ ‘ರಾಷ್ಟ್ರಾದ್ಯಂತ ಮಧ್ಯಸ್ಥಿಕೆ ತೀರ್ಪು ಮತ್ತು ವಿವಾದಗಳ ಸಾಮರಸ್ಯಕ್ಕಾಗಿ ಸುಪ್ರೀಂ ಕೋರ್ಟ್‌ ಕ್ರಮ’ ಎಂಬ ಕಾರ್ಯಕ್ರಮವನ್ನು ಕೋರ್ಟ್‌ಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಅದರಂತೆ ಮಂಗಳವಾರ ಎರಡೂ ಕಡೆಯವರು ವಾರಾಣಸಿ ನ್ಯಾಯಾಲಯದಲ್ಲಿರುವ ಮಧ್ಯಸ್ಥಿಕೆ ಕೇಂದ್ರದ ಮುಂದೆ ಹಾಜರಾದರು.

ಈ ವೇಳೆ ಮುಸ್ಲಿಂ ಸಮುದಾಯದವರು, ‘ಇದೇ ರೀತಿಯ ಹಲವಾರು ವಿಷಯಗಳು ಸುಪ್ರೀಂ ಕೋರ್ಟ್‌ ಮುಂದೆ ಬಾಕಿ ಉಳಿದಿವೆ. ನ್ಯಾಯಾಲಯದ ತೀರ್ಪನ್ನು ಪಾಲಿಸುತ್ತೇವೆ. ಆದರೆ ಮಧ್ಯಸ್ಥಿಕೆಯನ್ನು ಸ್ವೀಕರಿಸಲು ಸಿದ್ಧವಿಲ್ಲ’ ಎಂದರು. ಇತ್ತ ಹಿಂದೂ ಸಮುದಾಯವರು ‘ಮುಸ್ಲಿಂ ಕಡೆಯವರು ಜ್ಞಾನವಾಪಿಯಲ್ಲಿ ಅತಿಕ್ರಮಣಕಾರರು. ಜ್ಯೋತಿರ್ಲಿಂಗ ಸ್ಥಳದಲ್ಲಿ ಭವ್ಯ ಕಾಶಿ ವಿಶ್ವನಾಥ ದೇಗುಲ ನಿರ್ಮಿಸಲು ಸಾಧ್ಯವಾಗುವಂತೆ ಆವರಣ ಖಾಲಿ ಮಾಡಬೇಕು’ ಎಂದು ಕೋರಿದರು ಹಾಗೂ ಮಧ್ಯಸ್ಥಿಕೆಗೆ ನಿರಾಕರಿಸಿದರು,

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೇಶದ ಮೊದಲ ಸರ್ಕಾರಿಎಐ ವಿವಿ ಬೆಂಗಳೂರಿನಲ್ಲಿ- ಎಐ ಟೆಕ್‌ ಜಾಗತಿಕ ಕೇಂದ್ರವಾಗಲಿದೆ ಕರ್ನಾಟಕ- ಗೂಗಲ್‌ ಕಂಪನಿ ಕಾರ್ಯಕ್ರಮದಲ್ಲಿ ಸಿಎಂ ಡಿಕೆಶಿ
ಜಮೀರ್‌ ಪ್ರಾಸಿಕ್ಯೂಷನ್‌ಕಡತ ಲೋಕಾಗೆ ವಾಪಸ್‌