ಮಾಜಿ ಮಂತ್ರಿ ವಿರುದ್ಧದ ಅಕ್ರಮ ಆಸ್ತಿ ಕೇಸ್‌

====

ಕನ್ನಡಪ್ರಭ ವಾರ್ತೆ ಬೆಂಗಳೂರು

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಗೆ ಅಭಿಯೋಜನಾ (ಪ್ರಾಸಿಕ್ಯೂಷನ್‌) ಮಂಜೂರಾತಿ ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಕಡತವನ್ನು ಹಿಂದಕ್ಕೆ ಕಳುಹಿಸಿರುವ ರಾಜ್ಯಪಾಲರು, ಕಡತ ಮತ್ತು ದಾಖಲೆಗಳನ್ನು ಭಾಷಾಂತರ ಮಾಡಿ ಮರುಸಲ್ಲಿಕೆ ಮಾಡುವಂತೆ ಸೂಚಿಸಿದ್ದಾರೆ.

ಐಎಂಎ ವಂಚನೆ ಪ್ರಕರಣದ ತನಿಖೆ ಸಂಬಂಧ 2018ರಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.)ವು ಜಮೀರ್‌ ಅಹಮದ್‌ ಖಾನ್‌ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಪತ್ತೆಯಾದ ಮಾಹಿತಿ ಆಧರಿಸಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಬಗ್ಗೆ ಸಂಪಾದನೆ ನಡೆಸುವಂತೆ ಎಸಿಬಿಗೆ ಸೂಚಿಸಿತ್ತು. ಎಸಿಬಿ ರದ್ದಾದ ಬಳಿಕ ಪ್ರಕರಣವನ್ನು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು.


ಈ ತನಿಖೆಯಲ್ಲಿ ಜಮೀರ್‌ ಅಹಮದ್ ಖಾನ್‌ ಅವರು ತಮ್ಮ ಆದಾಯಕ್ಕಿಂತ ಅಂದಾಜು 25 ಕೋಟಿ ರು. ಮೌಲ್ಯದ ಹೆಚ್ಚುವರಿ ಆಸ್ತಿ ಹೊಂದಿರುವ ಕುರಿತು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯ ಕ್ರಿಮಿನಲ್‌ ಮೊಕದ್ದಮೆ ಆರೋಪದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ ಆಗಬೇಕಿದ್ದು, ಅದಕ್ಕೆ ಅಗತ್ಯವಿರುವ ಅಭಿಯೋಜನಾ ಮಂಜೂರಾತಿ ನೀಡುವಂತೆ ಲೋಕಾಯುಕ್ತ ಪೊಲೀಸರು ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

ಈ ಪ್ರಸ್ತಾವನೆಯ ಕಡತ ಮತ್ತು ದಾಖಲೆಗಳು ಬಹುತೇಕ ಕನ್ನಡ ಭಾಷೆಯಲ್ಲಿವೆ. ಆ ಕಡತ ಮತ್ತು ದಾಖಲೆಗಳನ್ನು ಇಂಗ್ಲಿಷ್‌ ಭಾಷೆಗೆ ಭಾಷಾಂತರ ಮಾಡಿ ಲೋಕಭವನಕ್ಕೆ ಮರು ಸಲ್ಲಿಕೆ ಮಾಡುವಂತೆ ರಾಜ್ಯಪಾಲರು ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿ ಕಡತವನ್ನು ಹಿಂದಕ್ಕೆ ಕಳುಹಿಸಿದ್ದಾರೆ.