18ಕ್ಕಿಂತ ಕೆಳಗಿನ ಜಿರಳೆ ಹೋರಾಟಗಾರರ ಬಿಡುಗಡೆ ಮಾಡಿ: ಸುಪ್ರೀಂ ಆದೇಶ

KannadaprabhaNewsNetwork |  
Published : Jul 29, 2026, 01:45 AM IST
ಸುಪ್ರೀಂ | Kannada Prabha

ಸಾರಾಂಶ

ಇತ್ತೀಚೆಗೆ ಕಾಕ್ರೋಚ್‌ ಜನತಾ ಪಾರ್ಟಿಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ, 18 ವರ್ಷದೊಳಗಿನ ಹಾಗೂ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಸಂರಕ್ಷಿಸಿಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದೆ.

-ಕ್ರಿಮಿನಲ್‌ ಹಿನ್ನೆಲೆ ಇಲ್ಲದವರಿಗೆ ಮಾತ್ರ ಅನ್ವಯ

-ವಿದ್ಯಾರ್ಥಿಗಳ ಮೇಲೆ ಬಲವಂತದ ಕ್ರಮಕ್ಕೆ ತಡೆಪಿಟಿಐ ನವದೆಹಲಿ

ಇತ್ತೀಚೆಗೆ ಕಾಕ್ರೋಚ್‌ ಜನತಾ ಪಾರ್ಟಿಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ, 18 ವರ್ಷದೊಳಗಿನ ಹಾಗೂ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಸಂರಕ್ಷಿಸಿಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದೆ. ಪ್ರತಿಭಟನೆ ವೇಳೆ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ ಎಂದು ಆರೋಪಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಸೂರ್ಯಕಾಂತ್‌, ನ್ಯಾ. ಜೊಯ್‌ಮಲ್ಯ ಬಾಗ್ಚಿ ಹಾಗೂ ನ್ಯಾ. ವಿ.ಮೋಹನ ಅವರಿದ್ದ ಪೀಠ, ‘ಪ್ರತಿಭಟನೆಯಲ್ಲಿ ಭಾಗವಹಿಸಿದ್ದ, 18 ವರ್ಷದೊಳಗಿನ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕು. ವಿದ್ಯಾರ್ಥಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು. ಆದರೆ, ಈ ರಕ್ಷಣೆಯು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿತು.ಡಿಜಿಟಲ್‌ ಸಾಕ್ಷ್ಯ ಸಂರಕ್ಷಿಸಿಡಿ:‘ಪ್ರತಿಭಟನೆ ನಡೆದ ಎಲ್ಲಾ ರಾಜ್ಯಗಳು ಘಟನೆಯ ಸಿಸಿಟಿವಿ ದೃಶ್ಯಾವಳಿ, ಡ್ರೋನ್ ರೆಕಾರ್ಡಿಂಗ್‌, ಬಾಡಿ-ಕ್ಯಾಮೆರಾ ದೃಶ್ಯಾವಳಿ, ವೈರ್‌ಲೆಸ್ ಸಂವಹನ ದಾಖಲೆ, ಪಿಸಿಆರ್ ದಾಖಲೆಗಳು ಮತ್ತು ಇತರ ಡಿಜಿಟಲ್ ಸಾಕ್ಷ್ಯಗಳನ್ನು ಸಂರಕ್ಷಿಸಿಡಬೇಕು. ಆದರೆ ಅವನ್ನು ಸಾರ್ವಜನಿಕವಾಗಿ ಬಿತ್ತರಿಸಬಾರದು’ ಎಂದು ಕೋರ್ಟ್‌ ನಿರ್ದೇಶನ ನೀಡಿತು.

ರಾಜ್ಯಗಳ ಪ್ರತಿಕ್ರಿಯೆಗೆ ಆದೇಶ:

ಇದೇ ವೇಳೆ, ‘ದಾಖಲಾಗಿರುವ ಎಫ್‌ಐಆರ್‌ಗಳ ತನಿಖೆಯನ್ನು ದೆಹಲಿ ಸರ್ಕಾರ ಮುಂದುವರಿಸಬಹುದು. ಈ ಆರೋಪಗಳನ್ನು ನೋಡಿದರೆ ಮೇಲ್ನೋಟಕ್ಕೆ ನ್ಯಾಯಯುತ ಮತ್ತು ಸ್ವತಂತ್ರ ತನಿಖೆಯ ಅಗತ್ಯವಿದೆ ಎನಿಸುತ್ತದೆ. ಆದರೆ ತನಿಖೆಯಲ್ಲಿ ಗಾಯಗೊಂಡ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ಕುಟುಂಬಗಳ ಕಳವಳಗಳನ್ನೂ ಪರಿಗಣಿಸಬೇಕಾಗುತ್ತದೆ. ಈ ಸಂಬಂಧ ಎಸ್‌ಐಟಿ ರಚಿಸಲು ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ರಾಜ್ಯಗಳು ತಮ್ಮ ನಿಲುವನ್ನು ದಾಖಲಿಸಬೇಕು’ ಎಂದು ನಿರ್ದೇಶಿಸಿತು.

==

ದಿಲ್ಲಿ ಡಿಸಿಪಿ ಸೂಚನೆ ಮೇರೆಗೆ ಪೆಲೆಟ್‌ ಗನ್‌ ಬಳಕೆ

- ಪೊಲೀಸ್‌ ಕಡತದಿಂದ ಮಾಹಿತಿ ಬಹಿರಂಗ

- 2 ಸುತ್ತು ಪ್ಲಾಸ್ಟಿಕ್‌ ಪೆಲೆಟ್‌ ಬಳಕೆ ಎಂದು ಉಲ್ಲೇಖ

ನವದೆಹಲಿ: ಜು.20ರಂದು ನಡೆದ ಸಂಸತ್‌ ಚಲೋ ಮೆರವಣಿಗೆ ಮೇಲೆ ಪ್ರತಿಭಟನಾಕಾರರ ಮೇಲೆ ಪೆಲೆಟ್‌ ಗನ್‌ ಬಳಸಲು ಕ್ಷಿಪ್ರ ಕಾರ್ಯಪಡೆಗೆ (ಆರ್‌ಎಎಫ್‌) ಡಿಸಿಪಿ ರ್‍ಯಾಂಕ್‌ನ ದೆಹಲಿ ಪೊಲೀಸ್‌ ಅಧಿಕಾರಿಯೊಬ್ಬರು ಸೂಚಿಸಿದ್ದರು ಎಂಬುದು ಪೊಲೀಸ್‌ ಕಡತಗಳಲ್ಲಿ ಬಹಿರಂಗವಾಗಿದೆ.

ಆರ್‌ಎಎಫ್‌ನ ಡೆಪ್ಯುಟಿ ಕಮಾಂಡೆಂಟ್ ಶ್ರೇಣಿಯ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯ ಆಧಾರದಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಜು.22ರಂದು ದಾಖಲಿಸಲಾಗಿರುವ ಕಡತದಲ್ಲಿ ಈ ಬಗ್ಗೆ ಮಾಹಿತಿಯಿದೆ.ಪೆಲೆಟ್‌ ಗನ್‌ಗಳನ್ನು ಸಾಮಾನ್ಯವಾಗಿ ಉಗ್ರರು, ಸಮಾಜಘಾತಕರ ವಿರುದ್ಧ ಬಳಸಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳ ಮೇಲೆ ಬಳಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ತಾವು ಪೆಲೆಟ್‌ ಗನ್‌ ಬಳಸಿಲ್ಲ ಎಂದು ದಿಲ್ಲಿ ಪೊಲೀಸರು ಸ್ಪಷ್ಟನೆ ನೀಡಿದ್ದರು. ಆದರೆ ಇದೀಗ ಪೊಲೀಸ್‌ ಕಡತಗಳು ದಿಲ್ಲಿ ಪೊಲೀಸರತ್ತ ಬೊಟ್ಟು ಮಾಡಿವೆ.

ದೆಹಲಿ ಪೊಲೀಸ್‌ ಇಲಾಖೆಯ ಡಿಸಿಪಿ ಒಬ್ಬರ ನಿರ್ದೇಶನದಂತೆ, ನೀಲಿ ಸಮವಸ್ತ್ರ ಧರಿಸಿದ್ದ ಆರ್‌ಎಎಫ್‌ ಸಿಬ್ಬಂದಿ 15 ಸುತ್ತು ವಿದ್ಯುತ್‌ ಚಾಲಿತ, 55 ಸುತ್ತು ವಿದ್ಯುತ್‌ ಚಾಲಿತವಲ್ಲದ ಶೆಲ್‌ಗಳನ್ನು ಹಾರಿಸಿದ್ದಾರೆ. ಜತೆಗೆ 5 ಸುತ್ತು ಅಶ್ರುವಾಯು ಗ್ರೆನೇಡ್‌, 2 ಸುತ್ತು ಗಲಭೆ ನಿಯಂತ್ರಣ ಗುಂಡುಗಳು ಹಾಗೂ 2 ಸುತ್ತು ಪ್ಲಾಸ್ಟಿಕ್‌ ಪೆಲೆಟ್‌ಗಳನ್ನು ಬಳಸಲಾಗಿತ್ತು. ಆದರೆ ಇವುಗಳ ಬಳಕೆ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಆಗಿರಲಿಲ್ಲ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಸಿಆರ್‌ಪಿಎಫ್‌ ಅಥವಾ ಆರ್‌ಎಎಫ್‌ ಕಡೆಯಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಹಾಗೂ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಕೆಲ ವಿದ್ಯಾರ್ಥಿಗಳ ಮೇಲೆ ಪೆಲೆಟ್‌ ಗನ್‌ ಬಳಕೆಯಾದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದರು.

==

ಕೇಸು ರದ್ದಾಗದಿದ್ರೆ ಬೀದಿಗೆ: ಕೇಂದ್ರ ಸರ್ಕಾರಕ್ಕೆ ಮತ್ತೆ ಸಿಜೆಪಿ ಎಚ್ಚರಿಕೆ

- ಹಿಂಸಾಕೋರರನ್ನು ಬಿಡಲ್ಲ: ಕೇಂದ್ರದ ತಿರುಗೇಟು

ನವದೆಹಲಿ: ಪ್ರತಿಭಟನಾಕಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲ್ಲ ಎಂಬ ಭರವಸೆ ಯಿಂದ ಕೇಂದ್ರ ಹಿಂದೆ ಸರಿದಿದೆ. ಸುಪ್ರೀಂ ಕೋರ್‌್ಟಆದೇಶ ಪಾಲಿಸಿ ಮಂಗಳವಾರ ರಾತ್ರಿ ಒಳಗೆ ಕೇಸು ಹಿಂಪಡೆಯಿರಿ. ಇಲ್ಲದಿದ್ದರೆ ಜಿರಳೆ ಜನತಾ ಪಕ್ಷ (ಸಿಜೆಪಿ) ಪುನಃ ಆಂದೋಲ ನವನ್ನು ಪುನರಾರಂಭಿಸುತ್ತದೆ ಎಂದು ಪಕ್ಷದ ವಕ್ತಾರ ಸೌರವ್‌ ದಾಸ್‌ ಹೇಳಿದ್ದಾರೆ.

ಆದರೆ ಬೆದರಿಕೆ ಹಾಕುತ್ತಿದ್ದಂತೆ ಕೇಂದ್ರ ಸರ್ಕಾರದ ಮೂಲಗಳು ಪ್ರತಿಕ್ರಿಯಿಸಿವೆ. ‘ಹಿಂಸಾಚಾರದ ಆರೋಪ ಹೊತ್ತಿರುವವರಿಗೆ ಅಥವಾ ಕ್ರಿಮಿನಲ್‌ ಹಿನ್ನೆಲೆಯುಳ್ಳವರಿಗೆ ಈ ಭರವಸೆ ಅನ್ವಯಿಸಲ್ಲ’ ಎಂದು ಸ್ಪಷ್ಟಪಡಿಸಿವೆ.ಮಹಾರಾಷ್ಟ್ರದಲ್ಲೂ ಎಫ್‌ಐಆರ್‌ ರದ್ದು:

ಸಿಜೆಪಿ ಪ್ರತಿಭಟನೆಯಲ್ಲಿ ಭಾಗ ವಹಿಸಿದ್ದವರ ವಿರುದ್ಧದ ಎಫ್‌ಐಆರ್‌ ಹಿಂಪಡೆಯು ವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಸೂಚಿಸಿದ್ದಾರೆ.

==

ಮಹಾರಾಷ್ಟ್ರದಲ್ಲೂ ಜಿರಳೆ

ಹೋರಾಟಗಾರರ ಮೇಲಿನ

ಎಫ್‌ಐಆರ್‌ ರದ್ದು: ಸಿಎಂ

ಮುಂಬೈ: ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ಗಳನ್ನು ಹಿಂಪಡೆಯುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗೃಹ ಇಲಾಖೆಗೆ ಸೂಚಿಸಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

==

ನೀಟ್‌ ಹಿಂಸಾಚಾರದ ತನಿಖೆಗೆ

ಎಸ್‌ಐಟಿ ರಚನೆ: ಸುಪ್ರೀಂ ಒಲವು

-ಸಮಗ್ರ, ಪಾರದರ್ಶಕ ತನಿಖೆಗೆ ಒತ್ತು

ಪಿಟಿಐ ನವದೆಹಲಿ‘ಸಿಜೆಪಿ ಪ್ರತಿಭಟನೆಯಲ್ಲಿ ನಡೆದ ಹಿಂಸಾಚಾರ ಘಟನೆಗಳ ಬಗ್ಗೆ ನ್ಯಾಯಯುತ, ಪಾರದರ್ಶಕ ಮತ್ತು ಸಮಗ್ರ ತನಿಖೆಯನ್ನು ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಬಹುದು’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಂಸತ್‌ ಚಲೋ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗಿಸಿದ್ದಾರೆ ಎಂದು ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳ ವಿಚಾರಣೆ ನಡೆಸಿದ ಮು. ನ್ಯಾ. ಸೂರ್ಯಕಾಂತ್‌ ಅವರನ್ನೊಳಗೊಂಡ ಪೀಠ, ‘ಯಾರೇ ಅತಿಯಾದ ಬಲಪ್ರಯೋಗಿಸಿ, ಕಾನೂನು ಕೈಗೆತ್ತಿಕೊಂಡರೂ ಅವರನ್ನು ಕಠಿಣ ಕ್ರಮಕ್ಕೆ ಒಳಪಡಿಸಬೇಕು. ಎಲ್ಲಾ ಆರೋಪಗಳ ಕುರಿತು ಸ್ವತಂತ್ರ, ಪಾರದರ್ಶಕ ಮತ್ತು ಕೂಲಂಕಷ ತನಿಖೆ ನಡೆಸುವ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಇದಕ್ಕಾಗಿ ಎಸ್‌ಐಟಿ ರಚಿಸಬಹುದು’ ಎಂದು ತಿಳಿಸಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಫೇಸ್‌ಬುಕ್ ಪೋಸ್ಟ್‌ ಡಿಲೀಟ್
ಜಿರಳೆಗಳು ಕೊಳೆ ಎಂದ ಕಂಗನಾಗೆ ತರಾಟೆ