ಶರಣಾಗತಿಗೆ ಸಮಯ ಕೋರಿದ್ದ 11 ಬಿಲ್ಕಿಸ್‌ ರೇಪಿಸ್ಟ್ ಅರ್ಜಿ ವಜಾ

KannadaprabhaNewsNetwork |  
Published : Jan 20, 2024, 02:04 AM ISTUpdated : Jan 20, 2024, 08:15 AM IST
ಬಿಲ್ಕಿಸ್ | Kannada Prabha

ಸಾರಾಂಶ

ಜ.21ಕ್ಕೆ ಶರಣಾಗಲೇಬೇಕೆಂದು ಬಿಲ್ಕಿಸ್‌ ಬಾನೋ ಅತ್ಯಾಚಾರಿಗಳಿಗೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಶಸ್ತ್ರಚಿಕಿತ್ಸೆ, ಮಗನ ಮದುವೆ, ಕೊಯ್ಲು ಮಾನ್ಯ ಕಾರಣವಲ್ಲ ಎಂದು ಸುಪ್ರೀಂ ಕೋರ್ಟ್‌ ಶರಣಾಗಲು ಹೆಚ್ಚುವರಿ ಸಮಯ ನೀಡಲು ನಿರಾಕರಿಸಿದೆ.

ನವದೆಹಲಿ: 2002ರಲ್ಲಿ ಗೋಧ್ರೋತ್ತರ ದಂಗೆ ಸಮಯದಲ್ಲಿ ಗರ್ಭಿಣಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಹಾಗೂ ಆಕೆಯ ಕುಟುಂಬದ 7 ಸದಸ್ಯರನ್ನು ಹತ್ಯೆ ಮಾಡಿದ್ದ ಪ್ರಕರಣದ 11 ದೋಷಿಗಳು ತಾವು ಶರಣಾಗಲು ಹೆಚ್ಚಿನ ಸಮಯ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಶುಕ್ರವಾರ ವಜಾ ಮಾಡಿದೆ. ಅಲ್ಲದೇ ಜ.21ರ ಒಳಗೆ ಜೈಲಧಿಕಾರಿಗಳ ಮುಂದೆ ಶರಣಾಗುವಂತೆ ಆದೇಶಿಸಿದೆ.

‘ಮಗನ ಮದುವೆ ಮಾಡಬೇಕು, ಬೆಳೆ ಕೊಯ್ಲು ಮಾಡಲು ಸಮಯ ಬೇಕು, ಶ್ವಾಸಕೋಶದ ಶಸ್ತ್ರಚಿಕಿತ್ಸೆಯಾಗಿದೆ, ಕಾಲು ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ’ ಎಂದೆಲ್ಲ ಆರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳ ಕಾರಣ ನೀಡಿ ದೋಷಿಗಳು ಶರಣಾಗಲು ಹೆಚ್ಚಿನ ಸಮಯ ಕೋರಿದ್ದರು. 

ಆದರೆ ‘ಅಪರಾಧಿಗಳು ಉಲ್ಲೇಖಿಸಿರುವ ಕಾರಣಗಳು ಮಾನ್ಯವಾಗಿಲ್ಲ ಅಥವಾ ಶರಣಾಗತಿ ಸಮಯ ವಿಸ್ತರಿಸುವಷ್ಟು ಅರ್ಹತೆ ಹೊಂದಿಲ್ಲ’ ಎಂದು ನ್ಯಾ. ಬಿ.ವಿ. ನಾಗರತ್ನ ಹಾಗೂ ನ್ಯಾ. ಉಜ್ಜಲ್‌ ಭುಯಾನ್‌ ಪೀಠ ಹೇಳಿದೆ.

ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ದೋಷಿಗಳಿಗೆ ಕ್ಷಮಾದಾನ ನೀಡಿ ಗುಜರಾತ್‌ ಸರ್ಕಾರ ಅವರನ್ನು ಬಿಡುಗಡೆಗೊಳಿಸಿತ್ತು. 

ಇದನ್ನು ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿಸ್‌ ಬಾನೊ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಳು. ಬಳಿಕ ದೋಷಿಗಳ ಬಿಡುಗಡೆ ತಪ್ಪು ಎಂದು ಸರ್ಕಾರಕ್ಕೆ ತಪರಾಕಿ ಹಾಕಿದ್ದ ಕೋರ್ಟ್ ಜ.21ರೊಳಗೆ ಶರಣಾಗುವಂತೆ ದೋಷಿಗಳಿಗೆ ಆದೇಶ ನೀಡಿ ಜ.8ರಂದು ತೀರ್ಪು ನೀಡಿತ್ತು.

ಅತ್ಯಾಚಾರಿ ಗುರ್ಮೀತ್‌ ಬಾಬಾಗೆ 9ನೆ ಬಾರಿ 50 ದಿನಗಳ ಪೆರೋಲ್‌
ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ಗೆ ಮತ್ತೆ ಜ.21ರಿಂದ 50 ದಿನಗಳ ಕಾಲ ಪೆರೋಲ್‌ ಮಂಜೂರು ಮಾಡಲಾಗಿದೆ. ಇದು ಗುರ್ಮೀತ್‌ಗೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸಿಗುತ್ತಿರುವ 9ನೇ ಪೆರೋಲ್‌ ಆಗಿದೆ.

ಡೇರಾ ಸಚ್ಚಾ ಸೌದಾ ಪಂಥದ ಹಿಂದಿನ ಮುಖ್ಯಸ್ಥರಾಗಿದ್ದ ಶಾ ಸತ್ನಾಂ ಸಿಂಗ್‌ ಅವರ ಹುಟ್ಟುಹಬ್ಬವನ್ನು ಆಚರಿಸಲು 50 ದಿನಗಳ ಪೆರೋಲ್‌ ನೀಡಲಾಗಿದೆ. ಇದಕ್ಕೂ ಮೊದಲು ತಮ್ಮ ಹುಟ್ಟುಹಬ್ಬಕ್ಕೆ ನವೆಂಬರ್‌ನಲ್ಲಿ ಪೆರೋಲ್‌ ಪಡೆದು ಖಡ್ಗದಲ್ಲಿ ಕೇಕ್‌ ಕತ್ತರಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. 

ಇವರಿಗೆ 2023ನೇ ವರ್ಷವೊಂದರಲ್ಲೇ ಬರೋಬ್ಬರಿ 91 ದಿನಗಳ ಪೆರೋಲ್‌ ನೀಡಲಾಗಿತ್ತು.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ