;Resize=(412,232))
ನವದೆಹಲಿ: ‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಲು ಆದೇಶಿಸಿದ್ದರು’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬುಧವಾರ ಗಂಭೀರ ಆರೋಪ ಮಾಡಿದ್ದಾರೆ. ಇದು ಸದನದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದ್ದು, ರಾಹುಲ್ ತಮ್ಮ ಆರೋಪಕ್ಕೆ ಸಾಕ್ಷ್ಯ ಒದಗಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಸದನದಲ್ಲಿ ಮಾತನಾಡಿದ ರಾಹುಲ್, ಜು.20ರಂದು ಸಂಸತ್ ಚಲೋ ವೇಳೆ ಸಿಜೆಪಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಬಲಪ್ರಯೋಗವನ್ನು ಪ್ರಸ್ತಾವಿಸಿದರು. ಈ ವೇಳೆ, ‘ನಮ್ಮ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುವಂತೆ ಗೃಹ ಸಚಿವರೇ ಆದೇಶಿಸಿದ್ದರು. ಶಾ ನಮ್ಮ ವಿದ್ಯಾರ್ಥಿಗಳ ರಕ್ತದಲ್ಲಿ ಪೆಲೆಟ್‌ಗಳನ್ನು ತೂರಿಸುತ್ತಾರೆ. ಭಾರತದ ವಿದ್ಯಾರ್ಥಿಗಳು ದಾಳಿಗೆ ಒಳಗಾಗಲು ಅವರೇ ಆದೇಶ ನೀಡಿದ್ದರು. ಪೊಲೀಸ್ ಬಲಪ್ರಯೋಗಕ್ಕೆ ಗೃಹ ಸಚಿವರು ಅಥವಾ ಪ್ರಧಾನ ಮಂತ್ರಿಗಳು ಮಾತ್ರ ಅನುಮತಿ ನೀಡಬಹುದು’ ಎಂದು ಗಂಭೀರ ಆರೋಪ ಮಾಡಿದರು.
ಈ ಸಮಯದಲ್ಲಿ ಶಾ ಸದನದಲ್ಲಿ ಉಪಸ್ಥಿತರಿರಲಿಲ್ಲ. ಆದರೆ ಬಿಜೆಪಿ ಪಾಳೆಯದಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತನಾಡಿ, ‘ನೀವು ಹೇಗೆ ಈ ರೀತಿ ಮಾತಾಡಬಹುದು? ಇದು ವಿಪಕ್ಷದ ನಾಯಕರಿಗೆ ನೀಡಲಾದ ವಿಶೇಷಾಧಿಕಾರದ ಉಲ್ಲಂಘನೆ. ನೀವು ಈ ಆರೋಪವನ್ನು ಯಾವ ಆಧಾರದ ಮೇಲೆ ಮಾಡಿದ್ದೀರಿ? ಇದು ಆಧಾರರಹಿತ ಆರೋಪ’ ಎಂದು ವಾಗ್ದಾಳಿ ನಡೆಸಿದರು. ಎನ್‌ಡಿಎ ಸಂಸದರು ರಾಹುಲ್ ಕ್ಷಮೆಯಾಚನೆಗೆ ಒತ್ತಾಯಿಸಿ, ಆರೋಪಕ್ಕೆ ಸೂಕ್ತ ಪುರಾವೆ ಒದಗಿಸುವಂತೆ ಪಟ್ಟು ಹಿಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಓಂ ಬಿರ್ಲಾ, ‘ಸಾಕ್ಷ್ಯಾಧಾರಗಳಿಲ್ಲದೆ ಸದನದಲ್ಲಿ ಆರೋಪಗಳನ್ನು ಮಾಡಲು ಸಾಧ್ಯವಿಲ್ಲ’ ಎಂದು ರಾಹುಲ್‌ರನ್ನು ಎಚ್ಚರಿಸಿದರು.
ನವದೆಹಲಿ: ‘3 ರೀತಿಯ ಜನರಿರುತ್ತಾರೆ. ಅವರು ವಿದ್ಯಾರ್ಥಿಗಳು, ಮೂರ್ಖರು ಮತ್ತು ಅಂಧಭಕ್ತರು’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಬಿಜೆಪಿಗರನ್ನುದ್ದೇಶಿಸಿ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಸ್ಪೀಕರ್ ಓಂ ಬಿರ್ಲಾ ಸೂಚನೆ ಮೇರೆಗೆ ಕಡತದಿಂದ ತೆಗೆದುಹಾಕಲಾಗಿದೆ.
ಸದನದಲ್ಲಿ ಮಾತನಾಡಿದ ರಾಹುಲ್, ‘ನನ್ನನ್ನು ಭೇಟಿಯಾದ 18 ವರ್ಷದ ಯುವತಿಯೊಬ್ಬಳು, ವಿದ್ಯಾರ್ಥಿಗಳು ಎಂದರೆ ಜ್ಞಾನವನ್ನು ಬಯಸುವವರು ಮತ್ತು ಇತರರ ಮಾತುಗಳನ್ನು ಕೇಳಲು ಸಿದ್ಧರಿರುವವರು ಎಂದು ವಿವರಿಸಿದಳು. ಇನ್ನೊಂದು ಗುಂಪಿನ ಜನರಿದ್ದಾರೆ. ಅವರು ವಿದ್ಯಾರ್ಥಿಗಳಲ್ಲ. ತಮಗೆ ಎಲ್ಲವೂ ತಿಳಿದಿದೆ ಎಂದುಕೊಂಡಿರುತ್ತಾರೆ. ತಾವೇ ದೇವರು ಎಂದು ನಂಬುತ್ತಾರೆ. ಅವರು ಅಹಂಕಾರಿಗಳು, ಯಾರ ಮಾತನ್ನೂ ಕೇಳುವುದಿಲ್ಲ. ಅವರನ್ನು ಮೂರ್ಖರು ಮತ್ತು ಅಂಧ ಭಕ್ತರು ಎಂದು ಕರೆಯಲಾಗುತ್ತದೆ’ ಎಂದರು.
ನವದೆಹಲಿ : ‘ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆ. ಹಾಗಾಗಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ವಜಾಗೊಳಿಸಬೇಕು. ಜತೆಗೆ, ದೌರ್ಜನ್ಯಗಳ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಜು.20 ರಂದು ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್‌ನಿಂದ ಗುಂಡು ಹಾರಿಸಿ, ಲಾಠಿ ಚಾರ್ಜ್ ನಡೆಸಲು ಶಾ ಆದೇಶಿಸಿದ್ದಾರೋ ಅಥವಾ ಅವರಿಗೆ ಅದು ತಿಳಿದಿರಲಿಲ್ಲವೋ? ಅವರೇ ಅದನ್ನು ಆದೇಶಿಸಿದ್ದರೆ ತಪ್ಪಿತಸ್ಥರಾಗುತ್ತಾನೆ, ಅವರಿಗೆ ಅದು ತಿಳಿದಿರಲಿಲ್ಲವೆಂದಾದರೆ ಅವರು ಅಸಮರ್ಥರೆನಿಸಿಕೊಳ್ಳುತ್ತಾರೆ’ ಎಂದು ಟೀಕಿಸಿದರು.
ನನ್ನನ್ನು ಮೌನಗೊಳಿಸಲು ಯತ್ನ:
‘ಲೋಕಸಭೆಯಲ್ಲಿ ವಿಪಕ್ಷ ನಾಯಕರಿಗೆ ಮಾತಾಡಲು ಅವಕಾಶ ನೀಡಲಾಗುತ್ತಿಲ್ಲ. ನನ್ನ ಮಾತಿಗೆ ಅವಕಾಶ ಸಿಗುವಂತೆ ಸದನದಲ್ಲಿ ಶಿಸ್ತು ಕಾಪಾಡಿ ಹಲವು ಬಾರಿ ಸಭಾಪತಿಯವರನ್ನು ಕೋರಿದೆ. ಆದರೆ ಅವರು ಸಚಿವರಾದ ಕಿರಣ್ ರಿಜಿಜು ಮತ್ತು ರಾಜನಾಥ್ ಸಿಂಗ್‌ಗೆ ಪದೇ ಪದೇ ಅವಕಾಶ ನೀಡಿದರು. ಇದಕ್ಕೆ ನೀಡಿದ ನೆಪವೆಂದರೆ, ನಾನು ಶಾ ಬಗ್ಗೆ ಏನೋ ಹೇಳಿದೆ ಎಂಬುದು. ನಾನು ಮಾತಾಡಲು ಯತ್ನಿಸಿದಾಗೆಲ್ಲ ನನ್ನನ್ನು ಮೌನಗೊಳಿಸಲಾಗುತ್ತಿದೆ’ ಎಂದು ಆರೋಪಿಸಿದರು.
‘ವಿದ್ಯಾರ್ಥಿಗಳ ಮೇಲಿನ ಕ್ರೌರ್ಯಕ್ಕೆ ಶಾ ಕಾರಣ ಎಂದು ನಾನು ಹೇಳಿದೆ. ಅದಕ್ಕೆ ಕ್ಷಮೆಯಾಚಿಸಿದರೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಲಾಗುವುದು ಎಂದು ನನಗೆ ಭರವಸೆ ನೀಡಿದರು. ನಾನು ಬಿಜೆಪಿ-ಆರ್‌ಎಸ್‌ಎಸ್‌ಗೆ ಎಂದಿಗೂ ಕ್ಷಮೆಯಾಚಿಸುವುದಿಲ್ಲ. ದೇಶಕ್ಕೆ ಮುಖ್ಯವಾದ ವಿಷಯಗಳನ್ನು ಎತ್ತುವುದು ನನ್ನ ಹಕ್ಕು’ ಎಂದು ತಿಳಿಸಿದರು.
ಸುಪ್ರೀಂ ಮೇಲ್ವಿಚಾರಣೆಯಲ್ಲಿ ತನಿಖೆ ಮಾಡಿ:
‘ಹಲ್ಲೆಗೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವುದು ಖಚಿತ. ಪೆಲೆಟ್ ಗನ್‌ನಿಂದ ವಿದ್ಯಾರ್ಥಿಗಳನ್ನು ಹೊಡೆದವರಿಗೆ ಖಂಡಿತ ಶಿಕ್ಷೆಯಾಗುತ್ತದೆ. ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿಕೆ ಕಾರಣರಾದ ಶಾ ಅವರನ್ನು ವಜಾ ಮಾಡುವಂತೆ ಪ್ರಧಾನಿ ಮೋದಿಗೆ ಸಲಹೆ ನೀಡುತ್ತಿದ್ದೇವೆ. ಜತೆಗೆ, ದೌರ್ಜನ್ಯದ ತನಿಖೆಯನ್ನು ಸುಪ್ರೀಂ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಆಗ್ರಹಿಸುತ್ತೇವೆ’ ಎಂದರು.
ಬ್ಯಾಂಡೇಡ್ ಹಾಕಿದಂತೆ:
ಪರೀಕ್ಷಾ ಮಸೂದೆಯನ್ನು ಟೀಕಿಸಿದ ಅವರು, ‘ಇದು ಸರ್ಜರಿ ಮಾಡುವ ಬದಲು ಬ್ಯಾಂಡೇಡ್ ಹಾಕಿದಂತೆ’ ಎಂದು ವ್ಯಂಗ್ಯವಾಡಿದರು.
ರಾಹುಲ್ ಆರೋಪ ಸುಳ್ಳು: ಬಿಜೆಪಿ
ನವದೆಹಲಿ: ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ ಕಳೆದ ವಾರ ಸಂಸತ್ತಿಗೆ ಮೆರವಣಿಗೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದರು ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಬಿಜೆಪಿ ಬುಧವಾರ ಸುಳ್ಳು ಎಂದು ತಳ್ಳಿಹಾಕಿದೆ. ಕಾಂಗ್ರೆಸ್ ನಾಯಕರು ರಾಜಕೀಯ ಲಾಭಕ್ಕಾಗಿ ಗೊಂದಲವನ್ನು ಹರಡಲು ಮತ್ತು ಅರಾಜಕತೆಯನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ವಕ್ತಾರ ಸಂಬಿತ್ ಪಾತ್ರ, ‘ಶಾ ಭಯದಿಂದ 30 ಕಾರುಗಳ ಬೆಂಗಾವಲು ಪಡೆಯಲ್ಲಿ ಪ್ರಯಾಣಿಸುತ್ತಾರೆ’ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಟೀಕಿಸಿದರು.
‘ಇದು ಸುಳ್ಳು. ಪ್ರಧಾನಿಯವರ ಬೆಂಗಾವಲು ಪಡೆಯಲ್ಲೇ 30 ಕಾರು ಇಲ್ಲ. ಇನ್ನು ಅಮಿತ್ ಶಾ ಅವರ ಬೆಂಗಾವಲು ಪಡೆಯಲ್ಲಿ ರಾಹುಲ್ ಎಲ್ಲಿ 30 ಕಾರು ನೋಡಿದರು? ಅವರು ತೋರಿಸಬೇಕು’ ಎಂದು ಸವಾಲು ಹಾಕಿದರು.
‘ಕೇಂದ್ರ ಗೃಹ ಸಚಿವರು ‘ಭಯದಿಂದ ನಡುಗುತ್ತಾರೆ’ ಎಂಬ ರಾಗಾ ಹೇಳಿಕೆಗೆ ಪಾತ್ರಾ ಪ್ರತಿಕ್ರಿಯಿಸಿ, ಶಾ ಅವರು ನಕ್ಸಲೀಯರು ಮತ್ತು ಭಯೋತ್ಪಾದಕರನ್ನು ಭಯದಿಂದ ನಡುಗಿಸುವ ವ್ಯಕ್ತಿ’ ಎಂದು ಹೇಳಿದರು.