ಹೈದರಾಬಾದ್: ಟಾಲಿವುಡ್‌ನ ಸ್ಟಾರ್ ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ್ ದಾಂಪತ್ಯ ಜೀವನಕ್ಕೆ ಕಾಲಿಸಿರಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು.
ಅಕ್ಕಿನೇನಿ ಕುಟುಂಬದ ಮದುವೆ ಸಮಾರಂಭದಲ್ಲಿ ಅಲ್ಲು ಅರ್ಜುನ್, ರಾಮ ಚರಣ್ ದಂಪತಿ, ಮಹೇಶ್ ಬಾಬು ದಂಪತಿ, ಪ್ರಭಾಸ್, ರಾಜಮೌಳಿ, ಪಿ.ವಿ ಸಿಂಧೂ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ನವ ದಂಪತಿಗೆ ಶುಭ ಕೋರಿದರು. ಕಳೆದ ಆ.8ರಂದು ನಾಗ ಚೈತನ್ಯ ಮತ್ತು ನಟಿ ಶೋಭಿತಾ ಗುರು ಹಿರಿಯ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು.
ಅಸ್ಸಾಂ ಹೋಟೆಲ್‌ನಲ್ಲಿ ಗೋಮಾಂಸ ಮಾರಾಟ, ಸೇವನೆ ನಿಷೇಧ
ಗುವಾಹಟಿ
ಅಸ್ಸಾಂನ ಹೋಟೆಲ್, ರಸ್ಟೋರೆಂಟ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರುವುದು ಹಾಗೂ ಸೇವಿಸುವುದನ್ನು ನಿಷೇಧಿಸಿರುವುದಾಗಿ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಬುಧವಾರ ಘೋಷಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಸಂಪುಟ ಸಭೆಯಲ್ಲಿ ರಾಜ್ಯದ ರೆಸ್ಟೋರೆಂಟ್, ಹೋಟೆಲ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸವನ್ನು ಮಾರಾಟ ಮಾಡುವುದು ಹಾಗೂ ಸೇವಿಸುವುದನ್ನು ನಿಷೇಧಿಸಲು ನಿರ್ಧರಿಸಿದ್ದೇವೆ. ಈ ಮೊದಲು ದೇವಸ್ಥಾನಗಳ ಬಳಿಯಷ್ಟೇ ಗೋಮಾಂಸ ಸೇವನೆಯನ್ನು ನಿರ್ಬಂಧಿಸಲಾಗಿತ್ತು. ಈಗ ಅದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗಿದೆ’ ಎಂದು ತಿಳಿಸಿದರು.
ಪ್ರಸ್ತುತ ಜಾರಿಯಲ್ಲಿರುವ ಗೋಮಾಂಸ ಸೇವನೆಯ ಕುರಿತ ಕಾನೂನಿಗೆ ತಿದ್ದುಪಡಿ ತರುವ ನಿರ್ಣಯವನ್ನು ರಾಜ್ಯ ಸಚಿವ ಸಂಪುಟದಲ್ಲಿ ಕೈಗೊಳ್ಳಲಾಯಿತು.
ಡಿ.10ರಂದು ಬಾಂಗ್ಲಾಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಮಿಸ್ರಿ ಭೇಟಿ
ನವದೆಹಲಿ: ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಡಿ.10 ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ ನಂತರ ಹಾಗೂ ಇತ್ತೀಚಿನ ಹಿಂದೂಗಳ ಮೇಲಿನ ದೌರ್ಜನ್ಯದ ನಂತರ ಭಾರತೀಯ ಹಿರಿಯ ಅಧಿಕಾರಿಯೊಬ್ಬರು ಢಾಕಾಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಅವರು ಬಾಂಗ್ಲಾದೇಶ ವಿದೇಶಾಂಗ ಕಾರ್ಯದರ್ಶಿ ಎಂಡಿ ಜಾಶಿಮ್ ಉದ್ದೀನ್ ಅವರೊಂದಿಗೆ ಹಿಂದೂಗಳ ಮೇಲಿನ ದೌರ್ಜನ್ಯ ಸೇರಿ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ.
ಬಾಂಗ್ಲಾದಲ್ಲಿ ಯೂನಸ್ ನರಮೇಧ: ಹಸೀನಾ ವಾಗ್ದಾಳಿ
ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ನಡುವೆಯೇ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು, ‘ಬಾಂಗ್ಲಾ ಹಾಲಿ ಆಡಳಿತ ಮುಖ್ಯಸ್ಥ ಮುಹಮ್ಮದ್ ಯೂನಸ್ ನರಮೇಧ ನಡೆಸಿದ್ದಾರೆ’ ಎಂದು ಆರೋಪಿಸಿದ್ದಾರೆ.ದಿಲ್ಲಿಯಿಂದಲೇ ನ್ಯೂಯಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ವರ್ಚುವಲ್ ವಿಧಾನದಲ್ಲಿ ಮಾತಣಾಡಿದ ಹಸೀನಾ. ‘ಯೂನಸ್ ಹತ್ಯಾಕಾಂಡ ನಡೆಸುತ್ತಿದ್ದಾರೆ ಮತ್ತು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ರಕ್ಷಿಸಲು ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು. ತಮ್ಮ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರಂತೆಯೇ ತನ್ನನ್ನು ಮತ್ತು ತನ್ನ ಸಹೋದರಿ ಶೇಖ್ ರೆಹಾನಾ ಅವರನ್ನು ಹತ್ಯೆ ಮಾಡುವ ಯೋಜನೆ ಇದೆ ಎಂದರು.
ಹಸೀನಾ ಹಸ್ತಾಂತರಕ್ಕೆ ಭಾರತಕ್ಕೆ ಮನವಿ ಮಾಡ್ತೇವೆ: ಯೂನಸ್
ಢಾಕಾ: ಭಾರತದಲ್ಲಿ ಆಶ್ರಯಪಡೆದಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹಸ್ತಾಂತರಕ್ಕೆ ಭಾರತಕ್ಕೆ ಮನವಿ ಮಾಡುತ್ತೇವೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಹೇಳಿದ್ದಾರೆ.ಗುರುವಾರ ಸಂದರ್ಶನವೊಂದನ್ನು ನೀಡಿದ ಅವರು, ‘ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ ಮುಂದೆ ಹಸೀನಾ ವಿಚಾರಣೆ ನಡೆದು ತೀರ್ಪು ಪ್ರಕಟವಾದ ನಂತರ ಆಕೆಯ ಹಸ್ತಾಂತರ ಕುರಿತು ಭಾರತದ ಮುಂದೆ ಅಧಿಕೃತ ಪ್ರಸ್ತಾಪ ಇಡುತ್ತೇವೆ. ಭಾರತ ಮತ್ತು ಬಾಂಗ್ಲಾ ಎರಡೂ ದೇಶಗಳು ಅಂತಾರಾಷ್ಟ್ರೀಯ ಕಾನೂನುಗಳಿಗೆ ಸಹಿ ಮಾಡಿವೆ. ಹೀಗಾಗಿ ಭಾರತಕ್ಕೆ ಆ ಕಾನೂನು ಪಾಲಿಸುವ ಅನಿವಾರ್ಯವಾಗಲಿದೆ’ ಎಂದರು.
ಇದೇ ವೇಳೆ ಬಾಂಗ್ಲಾದಲ್ಲಿರುವ ಹಿಂದೂಗಳ ಸುರಕ್ಷತೆ ಕುರಿತ ಭಾರತದ ಕಳವಳ ವಾಸ್ತವಾಂಶವನ್ನು ಆಧರಿಸಿಲ್ಲ ಎಂದು ಸ್ಪಷ್ಟಪಡಿಸಿದರು.ಇದೇ ವೇಳೆ ಈ ಹಿಂದಿನ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಯೂನಸ್ ಅವರು, ‘ಶೇಖ್ ಹಸೀನಾ ಅವರು ಎಲ್ಲವನ್ನೂ ನಾಶ ಮಾಡಿದ್ದಾರೆ. ಸಂವಿಧಾನ ಮತ್ತು ನ್ಯಾಯಾಂಗ ಸುಧಾರಣೆ ಬಳಿಕ ದೇಶದಲ್ಲಿ ಮಹಾ ಚುನಾವಣೆ ನಡೆಸಲಾಗುವುದು’ ಎಂದರು.