;Resize=(412,232))
ನವದೆಹಲಿ: ಚುನಾವಣಾ ಆಯೋಗದ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡ ಆರೋಪ ಹೊತ್ತಿರುವ ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ) 3ನೇ ದಿನವಾದ ಭಾನುವಾರವೂ ಪ್ರತಿಭಟನೆ ಮುಂದುವರಿಸಿದೆ. ಈ ವೇಳೆ ಪ್ರತಿಭಟನಾಕಾರರನ್ನು ಜಂತರ್ ಮಂತರ್ ಪ್ರವೇಶಿಸದಂತೆ ತಡೆದ ಪೊಲೀಸರೊಂದಿಗೆ ಘರ್ಷಣೆ ಆಗಿದೆ.
ಅಶೋಕ್ ರಸ್ತೆಯಲ್ಲಿರುವ ಆಂಧ್ರ ಭವನ ಸರ್ಕಲ್‌ನಿಂದ ಹೊರಟ ರ್‍ಯಾಲಿಯು ಘೋಷಣೆಗಳನ್ನು ಕೂಗುತ್ತಾ ಜಂತರ್ ಮಂತರ್ ತಲುಪಿತು. ಆದರೆ ಅಲ್ಲಿ ಅದಾಗಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದವು. ಸಂಘದ ಅಧ್ಯಕ್ಷೆ ನೇಹಾ ಬೋರಾ ಸೇರಿ ಇತರರು ಅವನ್ನು ದಾಟಿ ಜಂತರ್ ಮಂತರ್ ಪ್ರವೇಶಿಸಲು ಯತ್ನಿಸಿದಾಗ ಪೊಲೀಸರು ತಡೆದಿದ್ದಾರೆ. ಈ ವೇಳೆ ಅವರೊಂದಿಗೆ ನೂಕಾಟ ನಡೆದಿದೆ.
ಶನಿವಾರ ನಡೆದ ಇಂಥ ಯತ್ನದ ವೇಳೆ 150 ಹಾಗೂ ಮೊದಲ ದಿನವಾದ ಶುಕ್ರವಾರ 500ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಪ್ರತಿಭಟನ ವೇಳೆ ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಅವರನ್ನು ದೆಹಲಿ ಪೊಲೀಸರು ಅಧಿಕೃತ ನಂಬರ್ ಪ್ಲೇಟ್ ಇಲ್ಲದ ಖಾಸಗಿ ವಾಹನದಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದರು ಎಂದು ಎಐಎಸ್ಎ ಸದಸ್ಯರು ಆರೋಪಿಸಿದ್ದಾರೆ.