ಭಾರತದಲ್ಲಿ ಆತಂಕಕಾರಿಯಾಗಿ ಏರುತ್ತಿದೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ? ಕರ್ನಾಟಕಕ್ಕೆ ಎಷ್ಟನೇ ಸ್ಥಾನ.?

KannadaprabhaNewsNetwork |  
Published : Aug 30, 2024, 01:03 AM ISTUpdated : Nov 13, 2024, 11:05 AM IST
Kota suicide News

ಸಾರಾಂಶ

ಭಾರತದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಆತಂಕಕಾರಿಯಾಗಿ ಏರುತ್ತಿದೆ, ರಾಷ್ಟ್ರೀಯ ಅಪರಾಧ ಬ್ಯೂರೋದ ವರದಿಯು 2021 ರಲ್ಲಿ 13,089 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಹಿರಂಗಪಡಿಸಿದೆ 

ನವದೆಹಲಿ: ದೇಶದ ಭವಿಷ್ಯ ನಿರ್ಧರಿಸುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣದ ದೇಶದಲ್ಲಿ ವರ್ಷ ವರ್ಷ ಹೆಚ್ಚುತ್ತಿದೆ. ವಿದ್ಯಾರ್ಥಿಗಳ ಸಾವಿನ ಪ್ರಮಾಣ ಜನಸಂಖ್ಯಾ ಬೆಳವಣಿಗೆ ದರ ಮತ್ತು ರೈತರ ಆತ್ಮಹತ್ಯೆ ಸಂಖ್ಯೆಯನ್ನೂ ಮೀರಿಸಿದೆ ಎಂದು ವರದಿಯೊಂದು ಕಳವಳ ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 4ನೇ ಸ್ಥಾನದಲ್ಲಿದೆ.

ಜಾಗತಿಕವಾಗಿ ಶಾಲಾ ಮಕ್ಕಳಿಗೆ ವಿವಿಧ ರೀತಿಯ ನೆರವು ನೀಡುವ ‘ಐಸಿ3’ ಎಂಬ ಸರ್ಕಾರೇತರ ಸಂಸ್ಥೆ 2021-2022ನೇ ಸಾಲಿನ ರಾಷ್ಟ್ರೀಯ ಅಪರಾಧ ಬ್ಯೂರೋದ ವರದಿ ಆಧರಿಸಿ ಇಂಥದ್ದೊಂದು ವರದಿ ಮುಂದಿಟ್ಟಿದೆ.

ವರದಿ ಹೇಳಿದ್ದೇನು?:

2021ರಲ್ಲಿ ದೇಶವ್ಯಾಪಿ 13089 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ ಶೇ.4.5ರಷ್ಟು ಹೆಚ್ಚು. ಆ ವರ್ಷ ದೇಶದಲ್ಲಿ ಸಂಭವಿಸಿದ ಒಟ್ಟು ಆತ್ಮಹತ್ಯೆಯಲ್ಲಿ ವಿದ್ಯಾರ್ಥಿಗಳ ಪಾಲು ಶೇ.8ರಷ್ಟಿತ್ತು. ಜೊತೆಗೆ 2002-11ರ ದಶಕಕ್ಕೆ ಹೋಲಿಸಿದರೆ 2012-21ರ ದಶಕದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ (97571 ಸಾವು) ಶೇ.57ರಷ್ಟು ಹೆಚ್ಚಳವಾಗಿದೆ. ವಿದ್ಯಾರ್ಥಿಗಳ ಸಾವಿನ ಪ್ರಮಾಣ ಜನಸಂಖ್ಯಾ ಬೆಳವಣಿಗೆ ದರ ಮತ್ತು ಒಟ್ಟಾರೆ ಆತ್ಮಹತ್ಯೆಯ ಪ್ರವೃತ್ತಿಗಿಂತಲೂ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಟಾಪ್‌ 5 ರಾಜ್ಯಗಳು:

2021ರಲ್ಲಿ ಮಹಾರಾಷ್ಟ್ರದಲ್ಲಿ 1834, ಮಧ್ಯಪ್ರದೇಶ 1308, ತಮಿಳುನಾಡು 1246, ಕರ್ನಾಟಕ 855, ಒಡಿಶಾ 834 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದ ಒಟ್ಟು ವಿದ್ಯಾರ್ಥಿಗಳ ಸಾವಿನಲ್ಲಿ ಈ 5 ರಾಜ್ಯಗಳ ಪಾಲು ಶೇ.46ರಷ್ಟಿದೆ. ಜೊತೆಗೆ ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಾಲು ಶೇ.29ರಷ್ಟಿದೆ ಎಂದು ವರದಿ ಹೇಳಿದೆ.

2021 ಮತ್ತು ಅದರ ಹಿಂದಿನ 6 ವರ್ಷಗಳಲ್ಲಿ ರೈತರ ಆತ್ಮಹತ್ಯೆ ಶೇ.12ರಷ್ಟು ಇಳಿದಿದ್ದರೆ, ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ ಶೇ.62ರಷ್ಟು ಏರಿಕೆಯಾಗಿದೆ. 2021ರಲ್ಲಿ 10881 ರೈತರು ಮತ್ತು 13089 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಹೇಳಿದೆ.

ಕಾರಣ ಏನು?:

ಶೈಕ್ಷಣಿಕ ಒತ್ತಡ, ಉದ್ಯೋಗ ಆಯ್ಕೆಯ ಒತ್ತಡ, ಶೈಕ್ಷಣಿಕ ಸಂಸ್ಥೆಗಳಿಂದ ಯಾವುದೇ ನೆರವಿಲ್ಲದಿರುವುದು, ರ್‍ಯಾಗಿಂಗ್‌ ಮತ್ತು ಕಿರುಕುಳ, ತಾರತಮ್ಯ, ಹಣಕಾಸು ಬಿಕ್ಕಟ್ಟು, ಕೌಟುಂಬಿಕ ರಚನೆಯಲ್ಲಿ ಬದಲಾವಣೆ, ಭಾವನಾತ್ಮಕವಾಗಿ ನಿರ್ಲಕ್ಷ್ಯ, ಸಾಮಾಜಿಕವಾಗಿ ಕಡೆಗಣನೆ, ಮಾನಸಿಕ ಒತ್ತಡದ ಕಡೆಗಣನೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!