ಡ್ರಗ್ ಹಾವಳಿ ನಿರ್ಮೂಲನೆಗೆ ವಿದ್ಯಾರ್ಥಿಗಳೇ ಮೊದಲ ರಕ್ಷಕರು

KannadaprabhaNewsNetwork |  
Published : Oct 08, 2026, 01:15 AM IST
್ಿ್ಿ್ಿ | Kannada Prabha

ಸಾರಾಂಶ

ಡ್ರಗ್ಸ್ ಹಾವಳಿ ವಿರುದ್ಧದ ಹೋರಾಟಕ್ಕೆ ವಿದ್ಯಾರ್ಥಿಗಳೇ ಮೊದಲ ರಕ್ಷಕರಾಗಬೇಕು ಎಂದು ತುಮಕೂರು ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ್‌ರವರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಡ್ರಗ್ಸ್ ಹಾವಳಿ ವಿರುದ್ಧದ ಹೋರಾಟಕ್ಕೆ ವಿದ್ಯಾರ್ಥಿಗಳೇ ಮೊದಲ ರಕ್ಷಕರಾಗಬೇಕು ಎಂದು ತುಮಕೂರು ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ್‌ರವರು ಹೇಳಿದ್ದಾರೆ.

ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆ ವತಿಯಿಂದ ಬುಧವಾರ ನೂತನವಾಗಿ ಪ್ರವೇಶ ಪಡೆದಿರುವ 2026-27ನೇ ಸಾಲಿನ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ವೈದ್ಯ ವೃತ್ತಿ ಸಂಕೇತವಾಗಿರುವ ಬಿಳಿವರ್ಣದ ಸಮವಸ್ತ್ರಧಾರಣೆ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದಲ್ಲಿ ಹೆಚ್ಚುತ್ತಿರುವ ಡ್ರಗ್ ಹಾವಳಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ವೈದ್ಯಕೀಯ ಕ್ಷೇತ್ರದವರು ಈ ವ್ಯಸನದಿಂದ ಹೊರತಾಗಿಲ್ಲ. ಮಾದಕ ವ್ಯಸನ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು ಮೊದಲ ಸಾಲಿನ ರಕ್ಷಕರಾಗಬೇಕು ಎಂದು ಸಲಹೆ ಮಾಡಿದರು. ಆರೋಗ್ಯವಂತ ಸಮಾಜ ನಿರ್ಮಾಣವೇ ತುಮಕೂರು ಪೋಲೀಸ್ ಮತ್ತು ಶ್ರೀದೇವಿ ವೈದ್ಯಕೀಯ ಕಾಲೇಜಿನ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕವನ್ನು ಮಾದಕ ವ್ಯಸನ ಮುಕ್ತ ರಾಜ್ಯವನ್ನಾಗಿ ಮಾಡಲು ಕಾಲೇಜಿನ ಜೊತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿ ಪೋಲೀಸ್ ಮಾರ್ಷಲ್ ಮತ್ತು ಕರ್ನಾಟಕ ಪೊಲೀಸ್ ಇಲಾಖೆ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಶ್ರೀಘ ಇದಕ್ಕೆ ಅಂತಿಮ ಸ್ವರೂಪ ನೀಡಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವೈದ್ಯ ವಿದ್ಯಾರ್ಥಿ ಪ್ರತಿಜ್ಞಾವಿಧಿ ಬೋಧಿಸಿದ ಶ್ರೀದೇವಿ ವೈದ್ಯಕೀಯ ನಿರ್ದೇಶಕ ಡಾ.ರಮಣ್ ಎಂ ಹುಲಿನಾಯ್ಕರ್ ಮಾತನಾಡಿ, ಪ್ರೀತಿ ಮತ್ತು ಸಹಾನುಭೂತಿ ವೈದ್ಯರಿಗೆ ಇರಬೇಕಾದ ಮೊದಲನೇ ಗುಣ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಒತ್ತಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್‌ ಮಾತನಾಡಿ ಒಬ್ಬ ವೈದ್ಯರನ್ನು ತಯಾರು ಮಾಡಲು ಸರ್ಕಾರ 25-30 ಲಕ್ಷ ರುಪಾಯಿ ವೆಚ್ಚ ಮಾಡುತ್ತದೆ. ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿಯಬೇಕು. ಹಣ ಮತ್ತು ಹೆಸರು ಗಳಿಸುವುದೇ ವೈದ್ಯರ ಗುರಿಯಾಗಬಾರದು. ರೋಗಿಗಳ ಸೇವೆಯೇ ನಿಜವಾದ ಮಾನವೀಯ ಸೇವೆ ಎಂಬದನ್ನು ಅರ್ಥಮಾಡಿಕೊಂಡು ಜೀವನ ಪೂರ್ತಿ ಕಲಿಯುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಹೇಳಿದರು.

ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎಂ.ಎಸ್. ಪಾಟೀಲ್‌ ಮಾತನಾಡಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ವೈದ್ಯಕೀಯ ವಲಯದಲ್ಲಿ ಉತ್ತಮ ಸಾಧನೆ ಮಾಡುವ ಕಾಲೇಜುಗಳಿಗೆ, ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುತ್ತಿದ್ದು, ಅದನ್ನು ಗಳಿಸುವ ಕಡೆಗೆ ನಿಮ್ಮ ಗಮನ ಇರಬೇಕು. ಕಾಲೇಜಿನಲ್ಲಿ ಉತ್ತಮ ಮೂಲ ಸೌಕರ್ಯ ಒದಗಿಸಲಾಗಿದೆ. ತಂದೆ-ತಾಯಿ ಕನಸು ಮತ್ತು ಸಮಾಜದ ಕನಸನ್ನು ನನಸು ಮಾಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ.ಪ್ರದೀಪ್‌ಕುಮಾರ್ ವೇಗಿ ಅವರಿಗೆ “ಪ್ರತಿಷ್ಠಿತ ಕಲಾಂ ಮೆಡಲ್ ಆಫ್ ಎಕ್ಸ್ಲೆನ್ಸ್ ಇನ್ ಬಯೋಮೆಡಿಕಲ್ ಅಡ್ವಾನ್ಸಸ್”- 2026 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೀನೋಮಿಕ್ ಸಂಶೋಧನೆ, ಆಣ್ವಿಕ ಜೀವಶಾಸ್ತ್ರ ಹಾಗೂ ಅನುವಾದಾತ್ಮಕ ಆರೋಗ್ಯ ಕ್ಷೇತ್ರಗಳಿಗೆ ನೀಡಿರುವ ಮಹತ್ವದ ಕೊಡುಗೆಗಾಗಿ ಈ ಗೌರವ ಸಂದಿದೆ.

ಸಮಾರಂಭದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟಿ ಹಾಗೂ ನೇತ್ರ ತಜ್ಞೆ ಡಾ.ಲಾವಣ್ಯ, ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಲ್.ಹರೇಂದ್ರಕುಮಾರ್, ವೈದ್ಯಕೀಯ ಅಧೀಕ್ಷಕ ಡಾ.ಮಂಜುನಾಥ್ ಜೆ.ವಿ., ಉಪಪ್ರಾಂಶುಪಾಲೆ ಡಾ.ರೇಖಾಗುರುಮೂರ್ತಿ, ಆಡಳಿತ ವಿಭಾಗದ ಉಪಪ್ರಾಂಶುಪಾಲ ಡಾ.ಎಂ.ಎನ್.ಹೇಮಂತ್‌ರಾಜ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಪೋಷಕರು ಉಪಸ್ಥಿತರಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ, ಶಾ ಸೂಚನೆಯಂತೆ ಸಂವಿಧಾನಕ್ಕೆ ಸಿಇಸಿ ದ್ರೋಹ: ಕಾಂಗ್ರೆಸ್‌
ತ್ರಿಮೂರ್ತಿ ಕದನ, ಫಾರಂ 6 ಗದ್ದಲಕ್ಕೆ ಸುಪ್ರೀಂ ಎಂಟ್ರಿ