ಅಮರಾವತಿ: ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಗೆ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷಗಳು ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದು, ಟಿಡಿಪಿ 94 ಮತ್ತು ಜನಸೇನಾ 24 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿವೆ.
ಈ ಕುರಿತು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ‘ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ. ಬಿಜೆಪಿ ಸಹ ನಮ್ಮ ಮೈತ್ರಿ ಸೇರುವ ನಿರೀಕ್ಷೆಯಿದ್ದು, ಅಂತಿಮ ತೀರ್ಮಾನದ ಬಳಿಕ ಉಳಿದ ಕ್ಷೇತ್ರಗಳ ಸೀಟು ಹಂಚಿಕೆ ನಡೆಯಲಿದೆ’ ಎಂದರು.
ಆಂಧ್ರದಲ್ಲಿ ಒಟ್ಟು 175 ವಿಧಾನಸಭಾ ಕ್ಷೇತ್ರಗಳಿದ್ದು, 118 ಕ್ಷೇತ್ರಗಳ ಕುರಿತು ಉಭಯ ಪಕ್ಷಗಳು ಸೀಟು ಹಂಚಿಕೆಯನ್ನು ಅಂತಿಮಗೊಳಿಸಿವೆ.