ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಇಂಡಿಯಾ ಕೂಟದ ಅಂಗಪಕ್ಷಗಳಾದ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಸೀಟು ಹಂಚಿಕೆಯನ್ನು ಅಂತಿಮಗೊಳಿಸಿವೆ.
ಗುಜರಾತ್, ದಿಲ್ಲಿ, ಹರ್ಯಾಣ ಹಾಗೂ ಗೋವಾದಲ್ಲಿ ಒಟ್ಟಾಗಿ ಸ್ಪರ್ಧಿಸಲಿವೆ. ಬಿಜೆಪಿಗೆ ಇದು ಎಷ್ಟರ ಮಟ್ಟಿಗೆ ಸವಾಲು ಒಡ್ಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಕಾಂಗ್ರೆಸ್‌ಗೆ 3 ಕ್ಷೇತ್ರ ಬಿಟ್ಟುಕೊಡಲು ಒಪ್ಪಿಕೊಂಡಿವೆ. 4ರಲ್ಲಿ ತಾನು ಸ್ಪರ್ಧಿಸಲಿದೆ. ಸದ್ಯ ದಿಲ್ಲಿಯ ಎಲ್ಲ 7 ಸೀಟು ಬಿಜೆಪಿ ವಶದಲ್ಲಿದೆ.
ಅದೇ ರೀತಿ ಗುಜರಾತ್‌ನಲ್ಲಿ ಎರಡು ಕ್ಷೇತ್ರಗಳಲ್ಲಿ ಆಪ್ ಸ್ಪರ್ಧಿಸಿದರೆ ಕಾಂಗ್ರೆಸ್ 24 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.
ಉಳಿದಂತೆ ಹರ್‍ಯಾಣದ ಒಂದು ಕ್ಷೇತ್ರದಲ್ಲಿ ಆಪ್ ಸ್ಪರ್ಧಿಸಲಿದ್ದು ಉಳಿದ 9ರಲ್ಲಿ ಕಾಂಗ್ರೆಸ್ ಕಣಕ್ಕಿಳಿಯಲಿದೆ. ಗೋವಾದ 2 ಮತ್ತು ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಏಕೈಕ ಕಾಂಗ್ರೆಸ್ ಸ್ಪರ್ಧಿಸಲಿದೆ.
ಪಟೇಲ್ ಪುತ್ರಿ ಅಸಮಾಧಾನ: ಸೀಟು ಹಂಚಿಕೆ ಒಪ್ಪಂದ ಬೆನ್ನಲ್ಲೇ ಕಾಂಗ್ರೆಸ್‌ನ ದಿವಂಗತ ಮುಖಂಡ ಅಹ್ಮದ್ ಪಟೇಲ್ ಅವರ ಪುತ್ರಿ ಮುಮ್ತಾಜ್ ಪಟೇಲ್ ಅಸಮಾಧಾನ ಹೊರಹಾಕಿದ್ದಾರೆ.
ಗುಜರಾತ್ ಕಾಂಗ್ರೆಸ್ ಸಾಂಪ್ರದಾಯಿಕ ಕ್ಷೇತ್ರವಾದ ಭರೂಚ್ ಆಪ್ ಪಾಲಾಗಿರುವುದು ಅವರನ್ನು ಬೇಸರಕ್ಕೀಡು ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಭರೂಚ್ ನಮ್ಮ ಕೈತಪ್ಪಿರುವುದಕ್ಕೆ ಕಾರ್ಯಕರ್ತರಲ್ಲಿ ಕ್ಷಮೆ ಕೋರುವೆ.
ಆದರೆ ಮುಂದಿನ ದಿನಗಳಲ್ಲಿ ಭರೂಚ್‌ನಲ್ಲಿ ಕಾಂಗ್ರೆಸ್ ಅನ್ನು ಕಾರ್ಯಕರ್ತರೆಲ್ಲರು ಸೇರಿ ಬಲಪಡಿಸೋಣ’ ಎಂದು ಕರೆ ನೀಡಿದ್ದಾರೆ.