ಕ್ರಿಮಿನಲ್‌ಗಳ ಪಾಲಿಗೆ ಟೆಲಿಗ್ರಾಂ ಹೊಸ ಡಾರ್ಕ್‌ ವೆಬ್‌

KannadaprabhaNewsNetwork |  
Published : Jun 19, 2026, 03:00 AM ISTUpdated : Jun 19, 2026, 05:05 AM IST
Telegram

ಸಾರಾಂಶ

ಟೆಲಿಗ್ರಾಂ ಆ್ಯಪ್‌ ಇದೀಗ ಹೊಸ ಡಾರ್ಕ್‌ ವೆಬ್‌ ಆಗಿದೆ. ಕ್ರಿಮಿನಲ್‌ಗಳು, ಸೈಬರ್‌ ವಂಚಕರು, ಉಗ್ರಗಾಮಿ ಗುಂಪುಗಳು ಮತ್ತು ಇತರೆ ಬೆದರಿಕೆಯೊಡ್ಡುವಂಥ ವ್ಯಕ್ತಿಗಳು ಕಾನೂನು ವಿರೋಧಿ ಕೆಲಸಕ್ಕಾಗಿ ಟೆಲಿಗ್ರಾಂ ಆ್ಯಪ್‌ ಅನ್ನು ವ್ಯಾಪಕವಾಗಿ ಬಳಸುತ್ತಾರೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ ಮುಂದೆ ಗಂಭೀರ ಆರೋಪ ಮಾಡಿದೆ.

 ನವದೆಹಲಿ: ಟೆಲಿಗ್ರಾಂ ಆ್ಯಪ್‌ ಇದೀಗ ಹೊಸ ಡಾರ್ಕ್‌ ವೆಬ್‌ ಆಗಿದೆ. ಕ್ರಿಮಿನಲ್‌ಗಳು, ಸೈಬರ್‌ ವಂಚಕರು, ಉಗ್ರಗಾಮಿ ಗುಂಪುಗಳು ಮತ್ತು ಇತರೆ ಬೆದರಿಕೆಯೊಡ್ಡುವಂಥ ವ್ಯಕ್ತಿಗಳು ಕಾನೂನು ವಿರೋಧಿ ಕೆಲಸಕ್ಕಾಗಿ ಟೆಲಿಗ್ರಾಂ ಆ್ಯಪ್‌ ಅನ್ನು ವ್ಯಾಪಕವಾಗಿ ಬಳಸುತ್ತಾರೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ ಮುಂದೆ ಗಂಭೀರ ಆರೋಪ ಮಾಡಿದೆ.

ನೀಟ್‌ ಮರುಪರೀಕ್ಷೆ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿರುವ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದ ವಿಚಾರಣೆ ವೇಳೆ ಸರ್ಕಾರ ಅಫಿಡವಿಟ್‌ ಸಲ್ಲಿಸಿದೆ. ಅದರಲ್ಲಿ ಕೆಲವು ಗಂಭೀರ ಪ್ರಸ್ತಾಪ ಮಾಡಿದೆ.

‘ನೀಟ್‌ ಮತ್ತಿತರ ಪರೀಕ್ಷೆಯ ಸೋರಿಕೆಯಾದ ಪ್ರಶ್ನೆಪತ್ರಿಕೆ ಹಂಚಿಕೆಗೆ, ಸೈಬರ್‌ ವಂಚನೆ, ಭಯೋತ್ಪಾದನೆ ಪರ ಪ್ರಚಾರ, ಮಕ್ಕಳ ಲೈಂಗಿಕ ಶೋಷಣೆ ವಿಡಿಯೋ, ಚಿತ್ರಗಳು ಮತ್ತು ಮಾದಕ ವಸ್ತು ಸಾಗಣೆ ಹಾಗೂ ಹಣಕಾಸು ಅಪರಾಧಗಳಿಗೆ ಟೆಲಿಗ್ರಾಂ ಅನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಸೋರಿಕೆ ಆದ ಪ್ರಶ್ನೆಪತ್ರಿಕೆ ಹರಿದಾಡಿದ್ದು ಇಲ್ಲೇ ಅಧಿಕ’ ಎಂದಿದೆ.

ಜತೆಗೆ, ಟೆಲಿಗ್ರಾಂ ಮೂಲಕ ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ರಾಷ್ಟ್ರೀಯ ಸೈಬರ್‌ ಕ್ರೈಂ ರಿಪೋರ್ಟಿಂಗ್‌ ಪೋರ್ಟಲ್‌ನ ಅಂಕಿ-ಅಂಶಗಳನ್ನು ಉಲ್ಲೇಖಿಸಿ ದೂರಿದೆ.

ಕೇಂದ್ರದ ಆರೋಪ ಏನು?:

- ಟೆಲಿಗ್ರಾಂ ಇದೀಗ ಹೊಸ ಡಾರ್ಕ್‌ ವೆಬ್‌ ಆಗಿದೆ. 

ಕ್ರಿಮಿನಲ್‌ಗಳು ಡಾರ್ಕ್‌ ವೆಬ್‌ ಅನ್ನು ಸಂಪರ್ಕಿಸುವ ಟೆಲಿಗ್ರಾಂ ಚಾನಲ್‌ನಲ್ಲಿ ಡೀಪ್‌ ವೆಬ್‌ ಲಿಂಕ್‌ಗಳ ಮೂಲಕ ಪೋಸ್ಟ್‌ ಹಾಕುತ್ತಾರೆ. ಇದರಿಂದ ಆರೋಪಿಗಳ ಜಾಡುಹಿಡಿಯುವುದು ಕಷ್ಟ.

- ಟೆಲಿಗ್ರಾಂ ಖಾಸಗಿತನ, ಅನಾಮಧೇಯತೆಯ ವೈಶಿಷ್ಟ್ಯ ಕ್ರಿಮಿನಲ್‌ಗಳಿಗೆ ಲಾಭ ಮಾಡಿಕೊಡುತ್ತಿದೆ. ಟೆಲಿಗ್ರಾಂ ಬಳಕೆದಾರರು ಪ್ರೈವಸಿ ಸೆಟ್ಟಿಂಗ್‌ನ ಮೂಲಕ ಮೊಬೈಲ್‌ ಸಂಖ್ಯೆ, ಟೆಲಿಗ್ರಾಂ ಐಡಿಯಂಥ ಗುರುತು ಮರೆಮಾಚಬಹುದಾಗಿದೆ.

- ಮಕ್ಕಳ ಲೈಂ*ಕ ಶೋಷಣೆ, ದುರ್ಬಳಕೆ ವಿಡಿಯೋ, ಚಿತ್ರಗಳ ಹಂಚಿಕೆಗೆ ಟೆಲಿಗ್ರಾಂ ಆ್ಯಪ್‌ ಅನ್ನು ಭಾರೀ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಅದೇ ರೀತಿ ಕ್ರಿಮಿನಲ್‌ ಚಟುವಟಿಕೆಗಳಿಗೂ ಇದು ಪ್ರಮುಖ ವೇದಿಕೆಯಾಗಿದೆ.

- ಹಣಕಾಸು ವಂಚನೆಗಳು, ಸೋರಿಕೆಯಾದ ಡೇಟಾ ಹಂಚಿಕೆ ಮತ್ತು ಸೈಬರ್‌ ಅಪರಾಧಗಳನ್ನು ಸಂಘಟಿಸಲು ಕ್ರಿಮಿನಲ್‌ಗಳು ನಕಲಿ ಖಾತೆಗಳ ಮೂಲಕ ಕಾರ್ಯ ನಿರ್ವಹಿಸುತ್ತಾರೆ.

- ಸೈಬರ್‌ ಅಪರಾಧ, ಅಕ್ರಮ ಹಣ ವರ್ಗಾವಣೆಯ ಹಣ ಸ್ವೀಕಾರ, ವರ್ಗಾವಣೆಗೆ ಮೂಲ್‌ ಬ್ಯಾಂಕ್‌ ಖಾತೆಗಳ ಖರೀದಿ-ಮಾರಾಟ ಟೆಲಿಗ್ರಾಂ ಮೂಲಕ ನಡೆಯುತ್ತದೆ. ಸೋರಿಕೆ ಆದ ಪ್ರಶ್ನೆಪತ್ರಿಕೆ ಹರಿದಾಡಿದ್ದು ಇಲ್ಲೇ ಅಧಿಕ.

- ಕೆಲ ದುರುದ್ದೇಶಪೂರಿತ ಆ್ಯಂಡ್ರಾಯ್ಡ್‌ ಆ್ಯಪ್‌ಗಳು ಸಂತ್ರಸ್ತರ ಡೇಟಾ ಮತ್ತು ಸಾಧನದ ಮಾಹಿತಿ ಕದಿಯಲು ಟೆಲಿಗ್ರಾಂ ಅನ್ನು ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಪ್ಲಾಟ್‌ಫಾರ್ಮ್‌ ಆಗಿ ಬಳಸುತ್ತಿವೆ. ಅಲ್ಲದೆ, ಮಾಲ್‌ವೇರ್‌ಗಳು, ಗೂಗಲ್‌ ಪ್ಲೇ ಪ್ರೊಟೆಕ್ಟ್‌ ಅನ್ನು ತಪ್ಪಿಸಿಕೊಂಡು ಹೋಗುವ ಟೂಲ್ಸ್‌ಗಳು, ಹಣಕಾಸು ಆ್ಯಪ್‌ಗಳಂತೆ ನಟಿಸುವ ಮಾಲ್‌ವೇರ್‌ಗಳನ್ನು ಕೆಲ ಟೆಲಿಗ್ರಾಂ ಚಾನೆಲ್‌ಗಳು ಪ್ರಚಾರ ಮಾಡುತ್ತಿವೆ.

ನೀಟ್‌ಗಾಗಿ 15 ಕೋಟಿ ಟೆಲಿಗ್ರಾಂ ಬಳಕೆದಾರರಿಗೆ ಸಂಕಷ್ಟ: ಹೈಕೋರ್ಟ್ ಗರಂ

 ನವದೆಹಲಿ: ಜೂ.21ರಂದು ನಡೆಯಲಿರುವ ನೀಟ್ ಮರುಪರೀಕ್ಷೆಗೂ ಮುನ್ನ ಟೆಲಿಗ್ರಾಂ ಆ್ಯಪ್‌ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಕೇಂದ್ರದ ಕ್ರಮದ ವಿರುದ್ಧ ಕಂಪನಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ದೆಹಲಿ ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ತೇಜಸ್ ಕಾರಿಯಾ ನೇತೃತ್ವದ ರಜಾಕಾಲದ ಪೀಠ, ‘ನೀಟ್‌ ಮರುಪರೀಕ್ಷೆ ಬರೆಯುತ್ತಿರುವ ಕೆಲವೇ ಕೆಲವು ಜನರ ಗುಂಪಿಗಾಗಿ 15 ಕೋಟಿ ಟೆಲಿಗ್ರಾಂ ಬಳಕೆದಾರರ ಹಕ್ಕುಗಳನ್ನು ಹೇಗೆ ತಾನೇ ಮೊಟಕುಗೊಳಿಸಬಹುದು?’ ಎಂದು ಕೇಂದ್ರ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿತು. ವಿಚಾರಣೆಯ ನಂತರ ಆದೇಶವನ್ನು ಕಾಯ್ದಿರಿಸಿತು.

ವಾಯುಪಡೆ ಕಾಪ್ಟರ್‌ನಲ್ಲಿ ನೀಟ್‌ ಪ್ರಶ್ನೆಪತ್ರಿಕೆ ಸಾಗಣೆ ಶುರು: ಇದೇ ಮೊದಲು

ಛಿಂದ್ವಾಡ (ಮ.ಪ್ರ.): ಜೂ.21ರ ನೀಟ್‌ ಪರೀಕ್ಷೆ ಅಕ್ರಮ ತಡೆಗೆ ಭಾರತೀಯ ವಾಯುಪಡೆಯು ತನ್ನ ಹೆಲಿಕಾಪ್ಟರ್‌ನಲ್ಲಿ ಪ್ರಶ್ನೆಪತ್ರಿಕೆಗಳನ್ನು ಮಧ್ಯಪ್ರದೇಶದ ಛಿಂದ್ವಾಡಕ್ಕೆ ಸಾಗಿಸಿದೆ. ಹೀಗಾಗಿರುವುದು ಇದೇ ಮೊದಲು.ಮಿ-17 ಹೆಲಿಕಾಪ್ಟರ್‌ನಲ್ಲಿ ಬಿಗಿ ಭದ್ರತೆಯಲ್ಲೇ ತರಲಾದ ಪ್ರಶ್ನೆಪತ್ರಿಕೆಗಳನ್ನು ಪೊಲೀಸರ ಕಣ್ಗಾವಲಿನಲ್ಲಿ ನಿಗದಿತ ಸ್ಟೋರ್‌ರೂಂಗೆ ತಲುಪಿಸಲಾಯಿತು. ಇಲ್ಲಿಂದ ಅವುಗಳನ್ನು ಪರೀಕ್ಷೆ ನಡೆಯುವ ದೇಶದ 18 ಕಡೆಗಳಿಗೆ ರಸ್ತೆ ಮೂಲಕ ಸಾಗಿಸಲಾಗುವುದು.ಈ ಮೊದಲು ಮೇನಲ್ಲಿ ನಡೆದಿದ್ದ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಕಾರಣ ರದ್ದು ಮಾಡಲಾಗಿತ್ತು. ಮತ್ತದೇ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು(ಎನ್‌ಟಿಎ) ಇದೇ ಮೊದಲ ಬಾರಿಗೆ ವಾಯುಪಡೆಯ ನೆರವು ಕೇಳಿತ್ತು.

ನೀಟ್‌ಗೆ ಮತ್ತೊಂದು ಬಲಿ: ಗುಜರಾತಲ್ಲಿ 17ರ ಬಾಲಕ ಆತ್ಮ*ತ್ಯೆ

 ಜೂ.21ರ ನೀಟ್‌ ಯುಜಿಯ ಮರು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳ ಆತ್ಮ*ತ್ಯಾ ಸರಣಿ ಮುಂದುವರಿದಿದೆ. ಮರು ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ನೀಟ್‌ ಆಕಾಂಕ್ಷಿ 17ರ ಬಾಲಕನೊಬ್ಬ 6ನೇ ಮಹಡಿಯಿಂದ ಬಿದ್ದು ಆತ್ಮ*ತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಿಗ್ಗೆ ಅಹಮದಾಬಾದ್‌ನಲ್ಲಿ ನಡೆದಿದೆ.

‘ಅಹಮದಾಬಾದ್‌ನ ಟ್ರಾಗಡ್ ಪ್ರದೇಶದ ಅರಿಸ್ಟೊ ಆನಂದಮ್ ಫ್ಲಾಟ್‌ನ ಬಿ ಬ್ಲಾಕ್‌ನ ಅಪಾರ್ಟ್‌ಮೆಂಟ್‌ನಲ್ಲಿಯ 6ನೇ ಮಹಡಿಯ ಬಾಲ್ಕನಿಯಿಂದ ಬಾಲಕ ನಸುಕಿನ 2.55ರ ಸುಮಾರಿಗೆ ಜಿಗಿದಿದ್ದಾನೆ. ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಆತ ಬದುಕುಳಿಯಲಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.ಸ್ಥಳದಲ್ಲಿ ಯಾವುದೇ ಆತ್ಮ*ತ್ಯಾ ಪತ್ರ ಪತ್ತೆಯಾಗಿಲ್ಲ.ಬಾಲಕ ಹಿಂದಿನ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದಿದ್ದ.

ಗೊಂದಲ ಬೇಡ: ನೀಟ್‌ ವಿದ್ಯಾರ್ಥಿಗಳಿಗೆ ಎನ್‌ಟಿಎ ಅಭಯ

ನವದೆಹಲಿ : ‘ಜೂ.21ರ ನೀಟ್‌ ಮರು ಪರೀಕ್ಷೆಗೆ ಸುರಕ್ಷಿತ, ಸುಭದ್ರ ಮತ್ತು ನ್ಯಾಯಯುತ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ವ್ಯಾಪಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಶಾಂತವಾಗಿರಬೇಕು ಹಾಗೂ ಪರೀಕ್ಷಾ ತಯಾರಿಯತ್ತ ಗಮನಹರಿಸಬೇಕು’ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಕೋರಿದೆ.‘ಮರುಪರೀಕ್ಷೆಯನ್ನು ಭಾನುವಾರ ನಿಗದಿಯಂತೆ ನಡೆಸಲಾಗುವುದು. ಅಭ್ಯರ್ಥಿಗಳು ಪರೀಕ್ಷೆ ಮುಂದೂಡಿಕೆಯ ವದಂತಿಗಳಿಂದ ಅಥವಾ "ಸಾಮಾಜಿಕ ಮಾಧ್ಯಮದಲ್ಲಿನ ಗೊಂದಲದ ಸಂದೇಶಗಳಿದ ಪ್ರಭಾವಿತರಾಗಬಾರದು. ಏನೇ ಇದ್ದರೂ ಎನ್‌ಟಿಎ ನೀಡುವ ಮಾಹಿತಿಯನ್ನು ಮಾತ್ರ ಗಮನಿಸಿ’ ಎಂದೂ ಕೇಳಿಕೊಂಡಿದೆ.

‘ಪರೀಕ್ಷೆಗೆ ಬಹು-ಹಂತದ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ದುಷ್ಕೃತ್ಯದ ಯಾವುದೇ ಪ್ರಯತ್ನವನ್ನು ದೃಢವಾಗಿ ಎದುರಿಸಲಾಗುವುದು. ಏಕೆಂದರೆ ಪ್ರಾಮಾಣಿಕ, ಶ್ರಮಶೀಲ ವಿದ್ಯಾರ್ಥಿಗಳನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ’ ಎಂದಿದೆ.ಸಚಿವರಿಂದ ಪರಿಶೀಲನೆ:

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಗುರುವಾರ ಅಧಿಕಾರಿಗಳ ಜತೆ ಸಭೆ ನಡೆಸಿ ಪರೀಕ್ಷಾ ಸಿದ್ಧತೆಗಳ ಪರಾಮರ್ಶೆ ನಡೆಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಯುಎಇನಲ್ಲೂ 15 ವರ್ಷ ಒಳಗಿನ ಮಕ್ಕಳಿಗೆ ಜಾಲತಾಣ ಬಳಕೆ ನಿರ್ಬಂಧ
ಅಯೋಧ್ಯೆ ರಾಮಮಂದಿರ ಸಿಸಿಟೀವಿ ತಿರುಚಲು ಯತ್ನ: ಎಸ್‌ಐಟಿ ತನಿಖೆಯಿಂದ ಪತ್ತೆ