ವಿಘ್ನೇಶ್ ಎಂ. ಭೂತನಕಾಡು
ಪ್ರಸಿದ್ಧ ಟಾಟಾ ಸಂಸ್ಥೆ ಕೊಡಗು ಸೇರಿ ಹಾಸನ, ಚಿಕ್ಕಮಗಳೂರು, ಪಕ್ಕದ ರಾಜ್ಯ ತಮಿಳುನಾಡು ಹಾಗೂ ಕೇರಳದಲ್ಲಿ ಸುಮಾರು 33 ಸಾವಿರ ಎಕರೆ ಕೃಷಿ ಭೂಮಿ ಹೊಂದಿದ್ದು, ಇಲ್ಲಿ ಕಾಫಿ ಹಾಗೂ ಚಹಾ ಬೆಳೆಯನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಸಾವಿರಾರು ಮಂದಿ ಕೆಲಸ ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.
ಟಾಟಾ ಕಾಫಿ ಸಂಸ್ಥೆ ಟಾಟಾ ಸಮೂಹದ ಒಂದು ಭಾಗ. ಟಾಟಾ ಕಾಫಿ ವಿಶ್ವದ ಅತಿದೊಡ್ಡ ಸಮಗ್ರ ಕಾಫಿ ಕೃಷಿ ಮತ್ತು ಸಂಸ್ಕರಣಾ ಕಂಪನಿಗಳಲ್ಲಿ ಒಂದಾಗಿದೆ ಮತ್ತು ಭಾರತೀಯ ಮೂಲದ ಕಾಳುಮೆಣಸು ಉತ್ಪಾದಿಸುವ ಅತಿದೊಡ್ಡ ಸಂಸ್ಥೆಯಾಗಿದೆ. ಕನ್ಸಲ್ಟೆಂಟ್ ಕಾಫಿ ಸಂಸ್ಥೆಯೊಂದಿಗೆ 2000 ಇಸವಿಯಲ್ಲಿ ಕೊಡಗು ಸೇರಿ ಹಲವು ಕಡೆ ಟಾಟಾ ಸಂಸ್ಥೆ ಕಾಫಿ ತೋಟ ಖರೀದಿಸಿತು. ಕೊಡಗಿನಲ್ಲಿ ಸುಮಾರು 13 ಕಾಫಿ ತೋಟಗಳು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯಲ್ಲಿ 2 ತೋಟಗಳನ್ನು ಸಂಸ್ಥೆ ಹೊಂದಿದೆ. ಕೊಡಗು ಜಿಲ್ಲೆಯೊಂದರಲ್ಲೇ ಸುಮಾರು 18 ಸಾವಿರ ಎಕರೆ ಜಮೀನನ್ನು ಸಂಸ್ಥೆ ಹೊಂದಿದೆ ಎನ್ನಲಾಗುತ್ತಿದೆ.ಟಾಟಾ ಸಂಸ್ಥೆಯಿಂದ ಜಿಲ್ಲೆಯಲ್ಲಿ ಅರೆಬಿಕಾ ಹಾಗೂ ರೊಬೆಸ್ಟಾ ಕಾಫಿಯನ್ನು ಬೆಳೆಯಲಾಗುತ್ತಿದ್ದು, ಟಾಟಾ ಕಾಫಿಯ ಅರೆಬಿಕಾ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬೇಡಿಕೆಯಿದೆ.
ಇಲ್ಲಿನ ಟಾಟಾ ತೋಟಗಳಲ್ಲಿ ಪ್ರಮುಖವಾಗಿ ಕಾಫಿ, ಕಾಳು ಮೆಣಸು, ಟೀ, ಅಡಿಕೆ, ತೆಂಗು, ಬೆಣ್ಣೆಹಣ್ಣನ್ನು ಬೆಳೆಯಲಾಗುತ್ತಿದೆ. ಟಾಟಾ ಕಾಫಿ ಸಂಸ್ಥೆ ಪಾಲಿಬೆಟ್ಟದಲ್ಲಿ ತನ್ನ ಕೇಂದ್ರ ಸ್ಥಾನ ಹೊಂದಿದ್ದು, ವ್ಯವಸ್ಥಾಪಕ ನಿರ್ದೇಶಕರಾಗಿ ಮಂದಣ್ಣ ಕಾರ್ಯನಿರ್ವಹಿಸುತ್ತಿದ್ದಾರೆ.
ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿಯಲ್ಲಿರುವ ಟೀ ಎಸ್ಟೇಟ್ ಸರ್ಕಾರದಿಂದ ಲೀಸ್ ಗೆ ಪಡೆಯಲಾಗಿದೆ. ಟಾಟಾ ಕಾಫಿಯಲ್ಲಿ ಕೂರ್ಗ್ ಫೌಂಡೇಷನ್ ಸ್ಥಾಪನೆ ಮಾಡಲಾಗಿದ್ದು, ಸಿಆರ್‌ಎಸ್ ಫಂಡ್ ಮೂಲಕ ಆರೋಗ್ಯ ಶಿಬಿರ ಸೇರಿ ಹಲವು ಚಟುವಟಿಕೆ ನಡೆಸಲಾಗುತ್ತಿದೆ.
ಸುಂಟಿಕೊಪ್ಪದ ಪಾಲಿಬೆಟ್ಟದಲ್ಲಿ ಸ್ವಸ್ಥ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ವಿಶೇಷ ಚೇತನರ ಏಳಿಗೆಗೆ ಸಂಸ್ಥೆ ಕೆಲಸ ಮಾಡುತ್ತಿದೆ. ರೂರಲ್ ಇಂಡಿಯಾ ಪ್ರಾಜೆಕ್ಟ್ ಮೂಲಕ ಅಮ್ಮತ್ತಿಯಲ್ಲಿ ಆಸ್ಪತ್ರೆಯಿದ್ದು, ಟಾಟಾ ಕಾಫಿಯ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಕಾರ್ಮಿಕರಿಗೆ ಉತ್ತಮ ಚಿಕಿತ್ಸೆಯನ್ನು ಅಲ್ಲಿ ನೀಡಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ತಮ್ಮದೇ ಆದ ಪಾಲುದಾರ ಟಾಟಾ ಕಾಫಿ ಸಂಸ್ಥೆ ಸಾವಿರಾರು ಎಕರೆ ಕಾಫಿ ತೋಟ ಹೊಂದಿದೆ. ಆದರೂ ಒಂದು ಬಾರಿಯೂ ಕೊಡಗಿನ ತಮ್ಮ ಸಂಸ್ಥೆಗೆ ಯಾವತ್ತೂ ರತನ್ ಟಾಟಾ ಭೇಟಿ ನೀಡಿರಲಿಲ್ಲ.