ನವದೆಹಲಿ: ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಸೋಮವಾರ ಸಂಸತ್ ಭವನಕ್ಕೆ ನಾಯಿಯೊಂದನ್ನು ತಂದ ಪ್ರಸಂಗ ನಡೆದಿದೆ. ಅಲ್ಲದೆ, ಇದಕ್ಕೆ ಸ್ಪಷ್ಟನೆ ನೀಡುವ ಭರದಲ್ಲಿ, ‘ಕಚ್ಚುವ ಜನರು ಸಂಸತ್ತಿನ ಒಳಗಿದ್ದಾರೆ. ನಾನು ನಾಯಿ ತಂದಿದ್ದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಬಿಜೆಪಿ ಕಿಡಿಕಾರಿದ್ದು, ‘ರೇಣುಕಾ ಸಂಸತ್ತಿನ ಪಾವಿತ್ರ್ಯತೆಗೆ ಭಂಗ ತಂದಿದ್ದಾರೆ’ ಎಂದಿದೆ.
ಬೆಳಗ್ಗೆ ಸಂಸತ್ ಕಲಾಪಕ್ಕೆ ಕಾರಿನಲ್ಲಿ ನಾಯಿಯೊಂದಿಗೆ ಸಂಸತ್ ಭವನ ಪ್ರವೇಶಿಸಿ ಅಚ್ಚರಿ ಮೂಡಿಸಿದರು. ಬಳಿಕ ಅದನ್ನು ಅದೇ ಕಾರಲ್ಲಿ ಮನೆಗೆ ವಾಪಸ್ ಕಳಿಸಿದರು. ಇದಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಅದು ಬೀದಿ ನಾಯಿ.
ಈಗ ನಾನು ಸಂಸತ್ತಿಗೆ ಬರುವಾಗ ರಸ್ತೆಯಲ್ಲಿತ್ತು. ವೇಗವಾಗಿ ಚಲಿಸುವ ಕಾರುಗಳಿಗೆ ಸಿಲುಕುವ ಅಪಾಯದಲ್ಲಿತ್ತು. ಹೀಗಾಗಿ ಅದನ್ನು ರಕ್ಷಿಸಿ ಕಾರಲ್ಲಿ ಹಾಕಿಕೊಂಡು ಬಂದೆ. ಈಗ ಮನೆಗೆ ವಾಪಸು ಕಳಿಸಿದ್ದೇನೆ. ಸಂಸತ್ತಿನ ಒಳಗೆ ಕಚ್ಚುವ ವ್ಯಕ್ತಿಗಳಿದ್ದಾರೆ. ಇಂಥದ್ದರಲ್ಲಿ ನಾಯಿ ತಂದಿದ್ದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.