ವಿಜಯ್‌ ಪದಗ್ರಹಣಕ್ಕೆ ಗ್ರಹಣ

KannadaprabhaNewsNetwork |  
Published : May 09, 2026, 01:45 AM IST
ವಿಜಯ್‌  | Kannada Prabha

ಸಾರಾಂಶ

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಹಾಗೂ ನಟ ವಿಜಯ್‌ಗೆ ತಮಿಳುನಾಡಿನ ಮುಖ್ಯಮಂತ್ರಿ ಆಗುವ ಯೋಗ ಇನ್ನೂ ತೂಗುಯ್ಯಾಲೆಯಲ್ಲಿದೆ. ಬಹುಮತಕ್ಕೆ ಬೇಕಾದ 118 ಶಾಸಕರ ಪಟ್ಟಿಯನ್ನು ಸಲ್ಲಿಸಲು ಪುನಃ ವಿಜಯ್ ವಿಫಲರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಶನಿವಾರ ಅವರು ಪ್ರಮಾಣ ವಚನ ಸ್ವೀಕರಿಸುವುದು ಅನುಮಾನವಾಗಿದೆ.

118ರ ಮ್ಯಾಜಿಕ್‌ ನಂಬರ್‌ಗೆ ಇನ್ನೂ 2 ಸ್ಥಾನ ಕೊರತೆ । ಬಹುಮತ ಸಾಬೀತಿಗೆ ದಳಪತಿ ಫೇಲ್‌

ರಾಜ್ಯಪಾಲರ ಜತೆಗಿನ 3ನೇ ಭೇಟಿಯೂ ವಿಫಲ । ಇಂದು ವಿಜಯ್‌ ಪ್ರಮಾಣವಚನ ಅನುಮಾನ

==ಪಿಟಿಐ ಚೆನ್ನೈ

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಹಾಗೂ ನಟ ವಿಜಯ್‌ಗೆ ತಮಿಳುನಾಡಿನ ಮುಖ್ಯಮಂತ್ರಿ ಆಗುವ ಯೋಗ ಇನ್ನೂ ತೂಗುಯ್ಯಾಲೆಯಲ್ಲಿದೆ. ಬಹುಮತಕ್ಕೆ ಬೇಕಾದ 118 ಶಾಸಕರ ಪಟ್ಟಿಯನ್ನು ಸಲ್ಲಿಸಲು ಪುನಃ ವಿಜಯ್ ವಿಫಲರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಶನಿವಾರ ಅವರು ಪ್ರಮಾಣ ವಚನ ಸ್ವೀಕರಿಸುವುದು ಅನುಮಾನವಾಗಿದೆ.

ಶುಕ್ರವಾರ ಸಂಜೆ ವಿಜಯ್‌ 3ನೇ ಬಾರಿಗೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ರನ್ನು ಭೇಟಿ ಮಾಡಿ ಶಾಸಕರ ಬೆಂಬಲ ಪತ್ರ ಸಲ್ಲಿಸಿದರು. ಬಳಿಕ ಶನಿವಾರ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆ ಇತ್ತು. ಆದರೆ ನಾಟಕೀಯ ವಿದ್ಯಮಾನದಲ್ಲಿ, ವಿಜಯ್‌ ಅವರು ಅಗತ್ಯ ಬಹುಮತಕ್ಕೆ ಬೇಕಾದ 118ರ ಬದಲು ಕೇವಲ 116 ಶಾಸಕರ ಬೆಂಬಲ ಪತ್ರ ಸಲ್ಲಿಸಿದ್ದು, ಇನ್ನೂ 2 ಸ್ಥಾನಗಳ ಕೊರತೆ ಎದುರಿಸುತ್ತಿದ್ದಾರೆ ಎಂದು ಗೊತ್ತಾಗಿದೆ. ಹೀಗಾಗಿ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಲು ರಾಜ್ಯಪಾಲರು ನಿರಾಕರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಡಿಸಿಎಂ ಸ್ಥಾನ ಕೋರಿದ ವಿಸಿಕೆ:

234 ಸ್ಥಾನಗಳ ಪೈಕಿ 108 ಸ್ಥಾನ ಗೆದ್ದಿರುವ ಟಿವಿಕೆಗೆ ಬಹುಮತಕ್ಕೆ 118 ಸ್ಥಾನದ ಅಗತ್ಯವಿತ್ತು. ಕಾಂಗ್ರೆಸ್‌ನ 5 ಶಾಸಕರು 3 ದಿನ ಹಿಂದೆ ಟಿವಿಕೆ ಬೆಂಬಲಿಸಿದ್ದರು. ಈ ಮೂಲಕ ಅವರ ಬಲ 112ಕ್ಕೇರಿತ್ತು. ಈ ನಡುವೆ ಶುಕ್ರವಾರ ಸಿಪಿಐ ಮತ್ತು ಸಿಪಿಎಂನ ತಲಾ ಇಬ್ಬರು ಶಾಸಕರು (ಒಟ್ಟು 4 ಶಾಸಕರು) ಅಧಿಕೃತವಾಗಿ ವಿಜಯ್‌ಗೆ ಬೆಂಬಲ ಘೋಷಿಸಿದರು. ಇದರೊಂದಿಗೆ ಅವರ ಬಲ 116ಕ್ಕೇರಿತು.

ಆದರೆ, ಇಬ್ಬರು ಶಾಸಕರ ಬೆಂಬಲ ಹೊಂದಿರುವ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ನಾಯಕ ತೋಲ್‌ ತಿರುಮಾವಲನ್‌, ಅಧಿಕೃತ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ನೀಡಲಿಲ್ಲ. ತಮ್ಮ ಪಕ್ಷಕ್ಕೆ ಡಿಸಿಎಂ ಹುದ್ದೆ ಬೇಕು. ಈ ಹುದ್ದೆ ಸಿಕ್ಕರೆ ಶನಿವಾರ ಬೆಂಬಲ ಪ್ರಕಟಿಸುವೆ ಎಂದು ವಿಜಯ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಜಯ್‌ಗೆ ಇಬ್ಬರು ವಿಸಿಕೆ ಶಾಸಕರ ಅಧಿಕೃತ ಬೆಂಬಲ ಪತ್ರ ಲಭಿಸಿಲ್ಲ. ರಾಜ್ಯಪಾಲರು ಇದನ್ನೇ ಮುಂದಿಟ್ಟುಕೊಂಡು ವಿಜಯ್‌ ಗೆ ಆಹ್ವಾನ ನಿರಾಕರಿಸಿದರು ಎಂದು ಗೊತ್ತಾಗಿದೆ.

ಈ ಗೊಂದಲದ ಬಗ್ಗೆ ಟಿವಿಕೆ ಪ್ರತಿಕ್ರಿಯಿಸಿದ್ದು, ‘ಶನಿವಾರ ಎಲ್ಲ ಅಡ್ಡಿ ನಿವಾರಣೆ ಆಗಲಿವೆ’ ಎಂದಿದೆ ಹಾಗೂ ವಿಸಿಕೆ ಮನವೊಲಿಕೆ ಯತ್ನ ಮುಂದುವರಿಸಿದೆ.

ಮುಸ್ಲಿಂ ಲೀಗ್‌ ಉಲ್ಟಾಪಲ್ಟಾ:

ಈ ನಡುವೆ, ವಿಜಯ್ ಅವರು ರಾಜ್ಯಪಾಲರನ್ನು ಭೇಟಿಯಾದ ನಂತರ, 2 ಸ್ಥಾನಗಳನ್ನು ಹೊಂದಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌) ಕೂಡ ಸರ್ಕಾರ ರಚನೆಗೆ ಬೆಂಬಲವಿದೆ ಎಂದು ಘೋಷಿಸಿತ್ತು. ಆದರೆ ಎಲ್ಲೂ ಟಿವಿಕೆ ಹೆಸರು ಬರೆಯದೇ ಹೊಸ ಸರ್ಕಾರ ಎಂಬ ಪದಗಳನ್ನಷ್ಟೇ ಬಳಸಿತ್ತು. ಈ ಬಗ್ಗೆ ನಂತರ ಹೇಳಿಕೆ ನೀಡಿದ ಪಕ್ಷ, ‘ನಮ್ಮ ಬೆಂಬಲ ಟಿವಿಕೆಗೆ ಇಲ್ಲ’ ಎಂದು ಸ್ಪಷ್ಟಪಡಿಸಿದೆ.

ಖರ್ಗೆ ಮನವೊಲಿಕೆ ಯತ್ನ:

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಲವನ್ ಮತ್ತು ಐಯುಎಂಎಲ್‌ ಜತೆ ನಡೆಸಿದ ಫೋನ್‌ನಲ್ಲಿ ಮಾತುಕತೆ ನಡೆಸಿ ಟಿವಿಕೆ-ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಬೆಂಬಲ ಕೋರಿದ್ದಾರೆ.

ಈ ನಡುವೆ ಕಾಂಗ್ರೆಸ್‌ಗೆ 2 ಸಚಿವ ಸ್ಥಾನದ ಭರವಸೆ ಲಭ್ಯವಾಗಿದೆ ಎಂದು ತಮಿಳುನಾಡು ಕಾಂಗ್ರೆಸ್‌ ಪ್ರಭಾರಿ ಗಿರೀಶ್‌ ಛೋಡಂಕರ್‌ ಹೇಳಿದ್ದಾರೆ.

2 ಬಾರಿ ನಿರಾಕರಿಸಿದ್ದ ಅರ್ಲೇಕರ್:

ಬುಧವಾರ ಮತ್ತು ಗುರುವಾರ, ಬಹುಮತದ ಕೊರತೆಯನ್ನು ಉಲ್ಲೇಖಿಸಿ, ಸರ್ಕಾರ ರಚನೆಗೆ ವಿಜಯ್ ಅವರನ್ನು ಆಹ್ವಾನಿಸಲು ಅರ್ಲೇಕರ್ ನಿರಾಕರಿಸಿದ್ದರು. ಇದು ಕೇಂದ್ರವು ಸರ್ಕಾರ ರಚನೆಯನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳಿಂದ ಪ್ರತಿಭಟನೆಗಳು ಮತ್ತು ತೀವ್ರ ಟೀಕೆಗಳಿಗೆ ಕಾರಣವಾಗಿತ್ತು.

ಸುಪ್ರೀಂ ಕೋರ್ಟಿಗೂ ಅರ್ಜಿ:

ವಿಜಯ್‌ಗೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿಲ್ಲ ಎಂದು ಟಿವಿಕೆ ನಾಯಕರೊಬ್ಬರು ಶುಕ್ರವಾರ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದಾರೆ.

==

ವಿಜಯ್‌ಗೆ ರಾಜ್ಯಪಾಲರೇಕೆ ಆಹ್ವಾನಿಸುತ್ತಿಲ್ಲ?

ಏಕೈಕ ದೊಡ್ಡ ಪಕ್ಷಕ್ಕೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನಿಸಬೇಕು ಎಂಬ ನಿಯಮ ಇದೆ. ಇಲ್ಲಿ ವಿಜಯ್‌ ಮೊದಲು ಸರ್ಕಾರ ರಚನೆಗೆ ಹಕ್ಕು ಮಂಡಿಸುವಾಗ ತಮ್ಮದು ‘ಏಕೈಕ ದೊಡ್ಡ ಪಕ್ಷ’ ಎಂದು ಹೇಳಿ 108 ಶಾಸಕರ ಬೆಂಬಲ ಪತ್ರ ಕೊಟ್ಟಿದ್ದರೆ ಸಾಕಿತ್ತು. ಅದನ್ನು ರಾಜ್ಯಪಾಲರು ಮನ್ನಿಸುವ ಸಾಧ್ಯತೆಯೂ ಇತ್ತು ಎಂದು ತಜ್ಞರು ಹೇಳಿದ್ದಾರೆ. ‘ಆದರೆ ಅವರು ಕಾಂಗ್ರೆಸ್‌ನ 5 ಶಾಸಕರ ಬೆಂಬಲ ಸೇರಿ 112 ಶಾಸಕರ ಬೆಂಬಲ ಪತ್ರ ನೀಡಿದರು. ಇದು ‘ಮೈತ್ರಿ ಸರ್ಕಾರ ರಚನೆಯ ಹಕ್ಕು ಮಂಡನೆ’ ಎಂದು ರಾಜ್ಯಪಾಲರು ಭಾವಿಸಿದರು. ಹೀಗಾಗಿ ಅವರು ‘ಮೈತ್ರಿ ಸರ್ಕಾರ ರಚನೆಗೆ 118 ಶಾಸಕರ ಬೆಂಬಲ ಬೇಕು’ ಎಂದು ವಿಜಯ್‌ರನ್ನು ವಾಪಸು ಕಳಿಸಿದರು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

==

ಅದ್ಭುತ ಚೊಚ್ಚಲ ಪ್ರದರ್ಶನ:

ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಟಿವಿಕೆ 108 ಸ್ಥಾನ ಗೆದ್ದು ಅದ್ಭುತ ಚೊಚ್ಚಲ ಪ್ರದರ್ಶನ ನೀಡಿತ್ತು. ಆದರೆ 234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.

ವಿಜಯ್ ಪೆರಂಬೂರು ಮತ್ತು ತಿರುಚಿರಾಪಳ್ಳಿ ಪೂರ್ವ ಸ್ಥಾನಗಳಿಂದ ಗೆದ್ದಿದ್ದಾರೆ ಮತ್ತು ಚುನಾವಣಾ ಆಯೋಗದ ನಿಯಮದ ಪ್ರಕಾರ ಈ ಕ್ಷೇತ್ರಗಳಲ್ಲಿ ಯಾವುದಾದರೂ ಒಂದನ್ನು ಅವರು ಖಾಲಿ ಮಾಡುವ ನಿರೀಕ್ಷೆಯಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಈಗ ಖರ್ಗೆ ಹೆಗಲಿಗೆ ನಿರ್ಧಾರ ಯಾರು ಆಗ್ತಾರೆ ಕೇರಳಂ ಸಿಎಂ?
ಪಶ್ಚಿಮ ಬಂಗಾಳ ವಿಧಾನಸಭೆ ವಿರ್ಸಜನೆ ಗೌರ್‍ನರ್‌ ಗೇಟ್‌ ಪಾಸ್‌ : ದೀದಿ ಈಗ ಬೀದಿಗೆ!