ನವದೆಹಲಿ: 10 ಜನರನ್ನು ಬಲಿಪಡೆದ ಸೋಮವಾರದ ಕಾಂಚನಜುಂಗಾ ರೈಲು ಅಪಘಾತಕ್ಕೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಹೊಣೆ ಎಂದು ವಿಪಕ್ಷಗಳು ಆರೋಪಿಸುತ್ತಿರುವ ನಡುವೆಯೇ, ಯುಪಿಎ ಮತ್ತು ಎನ್‌ಡಿಎ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ನಡೆದ ರೈಲು ಅಪಘಾತಗಳ ಕುರಿತಾದ ಅಂಕಿ ಅಂಶಗಳು ಬಿಡುಗಡೆಯಾಗಿವೆ. ಅದರನ್ವಯ ಯುಪಿಎ ಅವಧಿಗೆ ಹೋಲಿಸಿದರೆ ಎನ್‌ಡಿಎ ಅವಧಿಯಲ್ಲಿ ರೈಲು ಅಪಘಾತ ಭಾರೀ ಇಳಿಕೆಯಾಗಿರುವುದು ಕಂಡುಬಂದಿದೆ.ಅಂಕಿ ಅಂಶಗಳ ಅನ್ವಯ ಯುಪಿಎ ಅಧಿಕಾರದಲ್ಲಿದ್ದ 2004-14ರ ಅವಧಿಯಲ್ಲಿ ವರ್ಷಕ್ಕೆ 171 ಅಪಘಾತ ನಡೆದಿದ್ದರೆ, ಎನ್‌ಡಿಎ ಆಡಳಿತದ ನಡೆಸಿದ 2014-24ರ ಅವಧಿಯಲ್ಲಿ ವರ್ಷಕ್ಕೆ ಕೇವಲ 68 ಅಪಘಾತ ದಾಖಲಾಗಿವೆ ಎಂದು ಸರ್ಕಾರದ ಮೂಲಗಳು ಅಂಕಿ-ಅಂಶ ಬಿಡುಗಡೆ ಮಾಡಿವೆ.ಅತಿ ವಿಸ್ತಾರವಾದ ರೈಲು ಜಾಲ ಹೊಂದಿರುವ ದೇಶಗಳ ಪೈಕಿ ಅಮೆರಿಕ, ರಷ್ಯಾ ಮತ್ತು ಚೀನಾ ನಂತರದ ಸ್ಥಾನದಲ್ಲಿರುವ ಭಾರತ, ಅಪಘಾತ ತಡೆಯುವ ನಿಟ್ಟಿನಲ್ಲಿ ಕಳೆದ ಕೆಲ ವರ್ಷಗಳಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ವ್ಯವಸ್ಥೆಯ ಆಧುನೀಕರಣ ಮತ್ತು ಕಾರ್ಯನಿರ್ವಹಣಾ ಕ್ಷಮತೆ ಮತ್ತು ಭದ್ರತೆ ಹೆಚ್ಚಿಸುವ ಅಂಶಗಳು ಕೂಡಾ ಸೇರಿವೆ.ಅಂಕಿ ಅಂಶಗಳು ಏನು ಹೇಳಿವೆ.
ಇನ್ನು 2004-14ರಲ್ಲಿ ಭದ್ರತೆ ಕುರಿತಾದ ಯೋಜನೆಗಳಿಗೆ 70273 ಕೋಟಿ ವೆಚ್ಚ ಮಾಡಿದ್ದರೆ 2014-24ರಲ್ಲಿ ಅದು 1.78 ಲಕ್ಷ ಕೋಟಿ ರು. ತಲುಪಿದೆ. ಹಳಿ ನವೀಕರಣ ವೆಚ್ಚವನ್ನು 47018 ಕೋಟಿ ರು.ಗಳಿಂದ 1.09 ಲಕ್ಷ ಕೋಟಿ ರು.ಗೆ ಹೆಚ್ಚಿಸಲಾಗಿದೆ.
ವೆಲ್ಡ್ ವೈಫಲ್ಯ 3699ರಿಂದ 481ಕ್ಕೆ ಇಳಿಸಲಾಗಿದೆ. ಅಂದರೆ ಶೇ.87ರಷ್ಟು ಇಳಿದಿದೆ.ಲೆವೆಲ್ ಕ್ರಾಸಿಂಗ್ ನಿರ್ಮೂಲನೆಗೆ ಮಾಡುವ ಎಚ್ಚವನ್ನು 5726 ಕೋಟಿ ರು.ಗಳಿಂದ 36699 ಕೋಟಿ ರು.ಗೆ ಹೆಚ್ಚಿಸಲಾಗಿದೆ. ಮಾನವ ರಹಿತ ಲೆವೆಲ್ ಕ್ರಾಸಿಂಗ್ ಅನ್ನು ಸಂಪೂರ್ಣ ಶೂನ್ಯಕ್ಕೆ ತರಲಾಗಿದೆ. ಮೇಲುಸೇತುವೆಗೆ ಅನುದಾನ 4148 ಕೋಟಿ ರು.ಗಳಿಂದ 11945 ಕೋಟಿ ರು.ಗೆ ಹೆಚ್ಚಿಸಲಾಗಿದೆ.
ಬೋಗಿಗಳಲ್ಲಿ ಬೆಂಕಿ ಮತ್ತು ಹೊಗೆ ಪತ್ತೆ ವ್ಯವಸ್ಥೆಯನ್ನು ಶೂನ್ಯದಿಂದ 19271ಕ್ಕೆ ಮುಟ್ಟಿಸಲಾಗಿದೆ. ನಾನ್ ಎಸಿ ಕೋಚ್‌ಗಳಲ್ಲಿ ಶೂನ್ಯವಿದ್ದ ಫೈರ್ ಎಕ್ಸ್‌ಟಿಂಗ್ವಿಷರ್ ಪ್ರಮಾಣವನ್ನು ಶೂನ್ಯದಿಂದ 66840ಕ್ಕೆ ತಲುಪಿಸಲಾಗಿದೆ ಎಂದ ಅಂಕಿ ಅಂಶಗಳು ಹೇಳಿವೆ.
ಬಂಗಾಳದಲ್ಲಿ 10 ಜನರನ್ನು ಬಲಿಪಡೆದ ಕಾಂಚನಜುಂಗಾ ರೈಲು ದುರಂತದಲ್ಲಿ ಮಡಿದವರಿಗಾಗಿ ಹಾಗೂ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಮಂಗಳವಾರ ದೆಹಲಿಯಲ್ಲಿ ಮೇಣದಬತ್ತಿ ಹೊತ್ತಿಸಿ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು, ‘ಕಳೆದ 10 ವರ್ಷಗಳಲ್ಲಿ 1,117 ರೈಲು ಅಪಘಾತಗಳು ಸಂಭವಿಸಿದೆ. ಇದರಿಂದಾಗಿ ಹಲವು ಜನರು ಅಸುನೀಗಿದ್ದಾರೆ’ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ನವದೆಹಲಿ: ರೈಲ್ವೆಯಲ್ಲಿ ಲೋಕೋ ಪೈಲೆಟ್, ಗೇಟ್ ಮೆನ್, ಪಾಯಿಂಟ್‌ಮೆನ್ ಸೇರಿ 1.52 ಲಕ್ಷ ಸುರಕ್ಷತಾ ಸಂಬಂಧಿ ಹುದ್ದೆಗಳು ಖಾಲಿ ಇವೆ ಎಂದು ರೈಲ್ವೆ ಇಲಾಖೆ ಹೇಳಿದೆ. ಬಂಗಾಳ ರೈಲು ದುರಂತದ ಮರುದಿನವೇ ಈ ವಿಷಯ ಬಹಿರಂಗವಾಗಿದೆ.ಮಧ್ಯಪ್ರದೇಶದ ಚಂದ್ರಶೇಖರ್ ಗೌರ್ ಎಂಬುವರು ಸಲ್ಲಿಸದ್ದ ಆರ್‌ಟಿಐನಲ್ಲಿ ಈ ಮಾಹಿತಿ ಲಭಿಸಿದೆ. ‘ರೈಲ್ವೆ ಇಲಾಖೆಯಲ್ಲಿ 10 ಲಕ್ಷ ಮಂಜೂರಾದ ಸುರಕ್ಷತಾ ಹುದ್ದೆಗಳ ಪೈಕಿ 8.48 ಲಕ್ಷ ಭರ್ತಿಯಾಗಿವೆ. 1.52 ಲಕ್ಷ ಇನ್ನು ಖಾಲಿ ಉಳಿದಿವೆ. ಲೋಕೋಪೈಲೆಟ್ (ರೈಲು ಚಾಲಕ) ಹುದ್ದೆಗಳು 70,093 ಮಂಜೂರಾಗಿದ್ದು, ಇದರಲ್ಲಿ 14,429 ಇನ್ನು ಖಾಲಿ ಇವೆ. 4,337 ಸಹಾಯಕ ಚಾಲಕ ಹುದ್ದೆಗಳು ಖಾಲಿ ಇವೆ. ಇದರೊಂದಿಗೆ ಸಿಗ್ನಲ್ ಆಪರೇಟರ್, ಸ್ಟೇಷನ್ ಮಾಸ್ಟರ್, ಹಳಿ ನಿರ್ವಾಹಕ, ಟ್ರೈನ್ ಕಂಟ್ರೋಲರ್ ಸೇರಿದಂತೆ ಹಲವು ಹುದ್ದೆಗಳು ಭರ್ತಿಯಾಗದೇ ಉಳಿದಿದೆ’ ಎಂದು ರೈಲ್ವೆ ಇಲಾಖೆ ಹೇಳಿದೆ.