ಪೋಪ್‌ ವಿರುದ್ಧವೇ ತಿರುಗಿಬಿದ್ದ ಟ್ರಂಪ್‌!- ಯುದ್ಧವನ್ನು ದೇವರು ಮೆಚ್ಚಲ್ಲ ಎಂದು ಕ್ರೈಸ್ತರ ಪರಮೋಚ್ಚ ಗುರು ಹೇಳಿಕೆ

KannadaprabhaNewsNetwork |  
Published : Apr 14, 2026, 02:00 AM ISTUpdated : Apr 14, 2026, 07:30 AM IST
Pope

ಸಾರಾಂಶ

ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸುವಂತೆ ಕರೆ ನೀಡಿದ ಕ್ರೈಸ್ತರ ಧರ್ಮಗುರು ಪೋಪ್‌ ಲಿಯೋ 14 ವಿರುದ್ಧ ಕೆಂಡಾಮಂಡಲರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕ್ರೈಸ್ತರ ಪರಮೋಚ್ಚ ಗುರು ಪೋಪ್‌ ಅವರನ್ನೇ ಕಟುವಾಗಿ ಟೀಕಿಸಿದ್ದಾರೆ.

ವಾಷಿಂಗ್ಟನ್‌: ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸುವಂತೆ ಕರೆ ನೀಡಿದ ಕ್ರೈಸ್ತರ ಧರ್ಮಗುರು ಪೋಪ್‌ ಲಿಯೋ 14 ವಿರುದ್ಧ ಕೆಂಡಾಮಂಡಲರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕ್ರೈಸ್ತರ ಪರಮೋಚ್ಚ ಗುರು ಪೋಪ್‌ ಅವರನ್ನೇ ಕಟುವಾಗಿ ಟೀಕಿಸಿದ್ದಾರೆ. ಜತೆಗೆ ತಾವು ಯೇಸುವಿನ ರೂಪ ತಳೆದಿರುವ ಎಐ ನಿರ್ಮಿತ ಫೋಟೋವನ್ನು ಟ್ರುತ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಮೂಲಕ, ತಮಗೆ ಶಾಂತಿ ಪಾಠ ಮಾಡಿದ ಪೋಪ್‌ ಜತೆ ಅಧ್ಯಕ್ಷರು ನೇರ ವಾಗ್ಯುದ್ಧಕ್ಕಿಳಿದಿದ್ದಾರೆ.

ಎಐ ಫೋಟೋದಲ್ಲಿ ಟ್ರಂಪ್‌ ಅವರು ಜೀಸಸ್‌ನಂತೆ ಬಿಳಿ ನಿಲುವಂಗಿಯನ್ನು ತೊಟ್ಟು, ರೋಗಿಷ್ಟನೊಬ್ಬನ ಹಣೆ ಮೇಲೆ ಕೈ ಇಟ್ಟು ಆತನನ್ನು ಗುಣಪಡಿಸುವಂತೆ ಬಿಂಬಿಸಲಾಗಿದ್ದು, ಹಿನ್ನೆಲೆಯಲ್ಲಿ ಅಮೆರಿಕದ ಧ್ವಜ, ಯೋಧರು, ಯುದ್ಧವಿಮಾನಗಳು, ಸ್ವಾತಂತ್ರ್ಯದ ಪ್ರತಿಮೆಯನ್ನು(ಸ್ಟ್ಯಾಚು ಆಫ್‌ ಲಿಬರ್ಟಿ) ಕಾಣಬಹುದಾಗಿದೆ. ಯೇಸು ಲಾಜರಸ್ ಎಂಬಾತನಿಗೆ ಜೀವದಾನ ಮಾಡಿದ ಬಗ್ಗೆ ಬೈಬಲ್‌ನಲ್ಲಿ ಕತೆಯನ್ನು ಈ ಚಿತ್ರ ಹೋಲುವಂತಿದೆ.ಪೋಪ್‌ಗೆ ತಿರುಗೇಟು ನೀಡುವಂತಿರುವ ಈ ಚಿತ್ರದ ಮೂಲಕ ಟ್ರಂಪ್‌, ‘ನೀವು ಧರ್ಮಗುರುವಾದರೆ, ನೀವೆಲ್ಲರೂ ಪೂಜಿಸುವ ಯೇಸು ನಾನು’ ಎಂದು ಹೇಳುತ್ತಿರುವಂತಿದೆ. 

ಪೋಪ್‌ ಮೇಲೇಕೆ ದ್ವೇಷ?:

ಒಂದೂವರೆ ತಿಂಗಳು ನಡೆದು, ಇನ್ನೂ ತಣ್ಣಗಾಗದ ಮಧ್ಯಪ್ರಾಚ್ಯ ಯುದ್ಧವನ್ನು ವಿರೋಧಿಸಿದ್ದ ಪೋಪ್‌, ‘ಶಾಂತಿ ಹಾಗೂ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ’ ಎಂದು ಒತ್ತಾಯಿಸಿದ್ದರು. ಜತೆಗೆ, ‘ತಾನು ಸರ್ವಶಕ್ತನೆಂಬ ಭ್ರಮೆಯಿಂದಾಗಿ ಮುಂದುವರೆಸಲಾಗುತ್ತಿರುವ ಯುದ್ಧವು ಆಕ್ರಮಣಕಾರಿಯಾಗುತ್ತಾ ಸಾಗಿದೆ. ದೇವರು ಯುದ್ಧವನ್ನು ಮೆಚ್ಚುವುದಿಲ್ಲ ಹಾಗೂ ಸ್ಫೋಟಕಗಳನ್ನು ಸುರಿಯುವವರ ಪರವಾಗಿ ಇರುವುದಿಲ್ಲ. ಇರಾನ್‌ ನಾಗರಿಕತೆಯನ್ನೇ ನಾಶ ಮಾಡುವ ಬೆದರಿಕೆ ಸ್ವೀಕಾರಾರ್ಹವಲ್ಲ. ಇದಕ್ಕೆ ಮಾತುಕತೆಯೊಂದೇ ಪರಿಹಾರ’ ಎಂದು ಬುದ್ಧಿವಾದ ಹೇಳಿದ್ದರು.

ಇದು ಟ್ರಂಪ್‌ರನ್ನು ಕೆರಳಿಸಿದ್ದು, ಪೋಪ್‌ರನ್ನು ತೆಗಳಿ ಸುದೀರ್ಘ ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ, ‘ಅಪರಾಧಗಳ ವಿರುದ್ಧ ಪೋಪ್‌ ಮೃದು ಧೋರಣೆ ತಳೆದಿದ್ದಾರೆ ಹಾಗೂ ವಿದೇಶಾಂಗ ನೀತಿಯಲ್ಲಿ ಕಳಪೆಯಾಗಿದ್ದಾರೆ. ಅವರು, ಟ್ರಂಪ್‌ ಸರ್ಕಾರ ಹೆದರಿದೆ ಎಂಬಂತೆ ಮಾತಾಡುತ್ತಾರೆ. ಅದು ನನಗೆ ಹಿಡಿಸದು’ ಎಂದು ಅಕ್ಷರಗಳಲ್ಲೇ ಬೆಂಕಿ ಕಾರಿದ್ದಾರೆ.

ಮುಂದುವರೆದು, ‘ಇರಾನ್‌ ಅಣ್ವಸ್ತ್ರ ಹೊಂದಿದರೆ ತೊಂದರೆ ಇಲ್ಲ, ಅಮೆರಿಕಕ್ಕೆ ಡ್ರಗ್ಸ್‌ ಹಾಗೂ ಕೊಲೆಗಾರರನ್ನೆಲ್ಲಾ ಜೈಲಿಂದ ಬಿಡುಗಡೆ ಮಾಡಿ ಕಳುಹಿಸುತ್ತಿದ್ದ ವೆನಿಜುವೆಲಾ ಮೇಲೆ ದಾಳಿ ಮಾಡಿದ್ದು ತಪ್ಪು ಎಂಬ ನಿಲುವು ತಳೆದಿರುವ ಪೋಪ್‌ ನನಗೆ ಬೇಡ. ಜತೆಗೆ ಯಾವ ಕೆಲಸಕ್ಕಾಗಿ ಜನ ಭಾರೀ ಬಹುಮತದೊಂದಿಗೆ ನನಗೆ ಅಧಿಕಾರ ಕೊಡಲಾಗಿದೆಯೋ ಅದನ್ನು ಮಾಡಿದರೆ ಟೀಕಿಸುವ ಪೋಪ್‌ ನನಗೆ ಬೇಡವೇಬೇಡ’ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

‘ಪೋಪ್‌ ಆಗುವವರ ಪಟ್ಟಿಯಲ್ಲಿ ಲಿಯೋ ಇರಲೇ ಇಲ್ಲ

ಜತೆಗೆ, ‘ಪೋಪ್‌ ಆಗುವವರ ಪಟ್ಟಿಯಲ್ಲಿ ಲಿಯೋ ಇರಲೇ ಇಲ್ಲ. ಆದರೆ ನಾನು ಅಧ್ಯಕ್ಷನಾಗಿದ್ದ ಕಾರಣ, ನನ್ನೊಂದಿಗೆ ಡೀಲ್‌ ಮಾಡುವುದು ಸುಲಭ ಎಂಬ ಕಾರಣಕ್ಕೆ ಅಮೆರಿಕನ್ನರಾಗಿರುವ ಅವರನ್ನು ಪೋಪ್‌ ಮಾಡಲಾಯಿತು’ ಎನ್ನುತ್ತಾ, ‘ಅವರು ರಾಜಕೀಯ ಬಿಟ್ಟು ಧಾರ್ಮಿಕ ಕೆಲಸಗಳತ್ತ ಗಮನ ಹರಿಸಿ ಒಳ್ಳೆಯ ಪೋಪ್‌ ಎನಿಸಿಕೊಳ್ಳಲು ಶ್ರಮಿಸಬೇಕು’ ಎಂದು ಸಲಹೆ ನೀಡಿದ್ದಾರೆ.ಈ ಮೊದಲು ಈಸ್ಟರ್‌ ಆಚರಣೆಯಲ್ಲಿ ಭಾಗವಹಿಸಿದ್ದ ಟ್ರಂಪ್‌, ‘ನನ್ನನ್ನು ಜನ ಜೀಸಸ್‌ ಎನ್ನುತ್ತಾರೆ’ ಎಂದು ಹೇಳಿದ್ದರು. ಅದಕ್ಕೆ ಪಾದ್ರಿಗಳ ಕಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅದಕ್ಕೂ ಮೊದಲೊಮ್ಮೆ ತಾವೇ ಟ್ರಂಪ್‌ ಉಡುಗೆ ತೊಟ್ಟಿರುವ ಎಐ ಫೋಟೋ ಹಂಚಿಕೊಂಡಿದ್ದರು.ಪೋಪ್‌ ತಿರುಗೇಟು:‘ಟ್ರಂಪ್‌ಗೆ ನಾನು ಹೆದರುವುದಿಲ್ಲ. ಯುದ್ಧದ ವಿರುದ್ಧ ಮಾತನಾಡುವುದನ್ನು ಮುಂದುವರೆಸುತ್ತೇನೆ’ ಎಂದು ಪೋಪ್‌ ಲಿಯೋ ಶಾಂತವಾಗಿ ಉತ್ತರಿಸಿದ್ದಾರೆ.

ಧರ್ಮಗುರು ಜತೆಗೇ ಟ್ರಂಪ್‌ ಜಟಾಪಟಿ

- ತಾವೇ ಸರ್ವಶಕ್ತ ಎಂಬ ಭ್ರಮೆಯಲ್ಲಿ ಯುದ್ಧವನ್ನು ಮುಂದುವರಿಸಲಾಗುತ್ತಿದೆ. ಇದನ್ನು ದೇವರು ಮೆಚ್ಚುವುದಿಲ್ಲ. ಮಾತುಕತೆಯೇ ಪರಿಹಾರ: ಪೋಪ್‌

- ನನ್ನನ್ನು ಟೀಕಿಸುವ ಪೋಪ್‌ ನನಗೆ ಬೇಡವೇ ಬೇಡ. ನಾನು ಅಮೆರಿಕ ಅಧ್ಯಕ್ಷನಾದ ಹಿನ್ನೆಲೆಯಲ್ಲಿ ನನ್ನ ಜತೆ ಡೀಲ್‌ ಮಾಡಲು ಸುಲಭ ಎಂದು ಅವರನ್ನು ಪೋಪ್‌ ಮಾಡಲಾಯಿತು: ಟ್ರಂಪ್‌

- ಟ್ರಂಪ್‌ಗೆ ನಾನು ಹೆದರುವುದಿಲ್ಲ. ಯುದ್ಧದ ವಿರುದ್ಧ ಮಾತನಾಡುವುದನ್ನು ಮುಂದುವರೆಸುತ್ತೇನೆ: ಪೋಪ್‌ ಲಿಯೋ ತಿರುಗೇಟು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹೋರ್ಮುಜ್‌ ಬಗ್ಗೆ ಟ್ರಂಪ್‌-ಮೋದಿ ಫೋನ್‌ ಮಾತುಕತೆ - ಕದನವಿರಾಮ ಬಳಿಕ ಮೊದಲ ಮಾತು
ಶೇ.33 ಸ್ತ್ರೀ ಮೀಸಲಿಗೆ ಲೋಕಸಭಾ ಸ್ಥಾನ 850ಕ್ಕೆ ಏರಿಕೆ