- ಕ್ಷಿಪಣಿ ಉಡ್ಡಯನ ಕೇಂದ್ರ, ಬೋಟುಗಳ ಮೇಲೆ ದಾಳಿ
ವಾಷಿಂಗ್ಟನ್: ಒಂದು ಕಡೆ ಶಾಂತಿ ಒಪ್ಪಂದದ ಮಾತುಕತೆ ಮುಂದುವರೆದಿರುವಂತೆಯೇ, ಇನ್ನೊಂದು ಕಡೆ ದಕ್ಷಿಣ ಇರಾನ್‌ನ ಕ್ಷಿಪಣಿ ಉಡ್ಡಯನ ಕೇಂದ್ರ ಹಾಗೂ ಸಮುದ್ರದಲ್ಲಿ ಜಲಸ್ಫೋಟಕಗಳನ್ನು ಅಳವಡಿಸುತ್ತಿದ್ದ ಸಣ್ಣ ಬೋಟುಗಳನ್ನು ಗುರಿಯಾಗಿಸಿ ಅಮೆರಿಕ ಸೋಮವಾರ ದಿಢೀರ್ ದಾಳಿ ನಡೆಸಿದೆ. ಇರಾನ್‌ನ ಬೆದರಿಕೆಯಿಂದ ಸೇನೆಯನ್ನು ರಕ್ಷಿಸಲು ನಡೆಸಿದ ಮುನ್ನೆಚ್ಚರಿಕಾ ದಾಳಿ ಇದಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ.
ಅಮೆರಿಕ ದಾಳಿಯ ಪರಿಣಾಮ ಬಂದಾರ್ ಅಬ್ಬಾಸ್ ನಗರದಲ್ಲಿ ಹಲವು ಸ್ಫೋಟದ ಸದ್ದುಗಳು ಕೇಳಿಸಿವೆ. ಹಲವೆಡೆ ತೈಲ ಟ್ಯಾಂಕರ್‌ಗಳ ಮೇಲೂ ದಾಳಿ ನಡೆಸಲಾಗಿದೆ.ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಅಮೆರಿಕದ ಡ್ರೋನ್‌ವೊಂದನ್ನು ಹೊಡೆದುರುಳಿಸಿದ್ದು, ಮೂರು ಯುದ್ಧನೌಕೆಗಳ ಮೇಲೂ ಕ್ಷಿಪಣಿಗಳನ್ನು ಹಾರಿಸಿಬಿಟ್ಟಿದೆ. ಅಲ್ಲದೆ ಈ ದಾಳಿಗೆ ಅಮೆರಿಕ ತಕ್ಕ ಪರಿಣಾಮ ಎದುರಿಸಬೇಕಾಗಿ ಬರಲಿದೆ ಎಂದು ಎಚ್ಚರಿಸಿದೆ.
ಹಲವು ದಿನಗಳ ಬಳಿಕ ಮತ್ತೆ ಶುರುವಾಗಿರುವ ದಾಳಿ-ಪ್ರತಿ ದಾಳಿಯಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಆದರೆ, ಈ ದಾಳಿ ಏ.18ರಿಂದ ನಡೆಯುತ್ತಿರುವ ಶಾಂತಿ ಮಾತುಕತೆ ಪ್ರಯತ್ನಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಈ ನಡುವೆ ಅಣುಬಾಂಬ್ ಉತ್ಪಾದಿಸಲು ಬಳಸಬಹುದಾದ ಇರಾನ್‌ನ ಅಣು ಧೂಳನ್ನು ಅಂತಾರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರ(ಐಎಇಎ) ಉಸ್ತುವಾರಿಯಲ್ಲಿ ಅಮೆರಿಕ ಅಥವಾ ಬೇರಿನ್ಯಾವುದೋ ಸ್ವೀಕಾರಾರ್ಹ ಸ್ಥಳದಲ್ಲಿ ನಾಶ ಮಾಡಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇರಾನ್ ಸಂಸ್ಕರಿಸಿದ ಯುರೇನಿಯಂ ಅನ್ನು ತಕ್ಷಣ ಅಮೆರಿಕಕ್ಕೆ ಒಪ್ಪಿಸಬೇಕು ಅಥವಾ ಇಬ್ಬರಿಗೂ ಸಮ್ಮತ ಜಾಗದಲ್ಲಿ ನಾಶ ಮಾಡಬೇಕು ಎಂದು ಟ್ರಂಪ್ ಅವರು ತಮ್ಮ ಸಾಮಾಜಿಕ ಜಾಲತಾಣ ಟ್ರುಥ್ ಸೋಷಿಯಲ್‌ನಲ್ಲಿ ಹೇಳಿಕೊಂಡಿದ್ದಾರೆ.