ಕುವೈತ್‌ ಮೇಲೆ ಇರಾನ್‌ ದಾಳಿ: ಭಾರತೀಯ ಸಾವು

KannadaprabhaNewsNetwork |  
Published : Jun 04, 2026, 03:00 AM ISTUpdated : Jun 04, 2026, 04:57 AM IST
iran

ಸಾರಾಂಶ

ಬುಧವಾರ ಅಮೆರಿಕದ ಮಿತ್ರದೇಶ ಕುವೈತ್‌ ಮೇಲೆ ಇರಾನ್ ನಡೆಸಿದ ಪ್ರತಿದಾಳಿಯಲ್ಲಿ ಓರ್ವ ಭಾರತೀಯ ನಾಗರಿಕ ಸಾವನ್ನಪ್ಪಿದ್ದಾನೆ. ಇದರಿಂದಾಗಿ ಫೆ.28 ರಂದು ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ಭುಗಿಲೆದ್ದ ನಂತರ ಯುದ್ಧದ ವೇಳೆ ಸಾವನ್ನಪ್ಪಿದ ಭಾರತೀಯರ ಸಂಖ್ಯೆ 10ಕ್ಕೇರಿದೆ.

ವಾಷಿಂಗ್ಟನ್‌/ತೆಹ್ರಾನ್‌/ನವದೆಹಲಿ: ಶಾಂತಿ ಮಾತುಕತೆ ಮುಂದುವರಿದಿರುವ ನಡುವೆಯೇ ಅಮೆರಿಕ-ಇರಾನ್‌ ಮಧ್ಯೆ ಮತ್ತೆ ಸಂಘರ್ಷ ಭುಗಿಲೆದ್ದಿದೆ. ಬುಧವಾರ ಅಮೆರಿಕದ ಮಿತ್ರದೇಶ ಕುವೈತ್‌ ಮೇಲೆ ಇರಾನ್ ನಡೆಸಿದ ಪ್ರತಿದಾಳಿಯಲ್ಲಿ ಓರ್ವ ಭಾರತೀಯ ನಾಗರಿಕ ಸಾವನ್ನಪ್ಪಿದ್ದಾನೆ. ಇದರಿಂದಾಗಿ ಫೆ.28 ರಂದು ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ಭುಗಿಲೆದ್ದ ನಂತರ ಯುದ್ಧದ ವೇಳೆ ಸಾವನ್ನಪ್ಪಿದ ಭಾರತೀಯರ ಸಂಖ್ಯೆ 10ಕ್ಕೇರಿದೆ.

ಮಂಗಳವಾರ ತಡರಾತ್ರಿ ಮೊದಲು ಹೋರ್ಮುಜ್‌ ಜಲಸಂಧಿ ಸಮೀಪದ ಕ್ವೆಶ್ಮ್‌ ದ್ವೀಪದ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ, ಇರಾನ್‌ ಕೂಡ ಅಮೆರಿಕದ ಮಿತ್ರದೇಶಗಳಾದ ಕುವೈತ್‌ ಹಾಗೂ ಬಹ್ರೇನ್‌ ಮೇಲೆ ಡ್ರೋನ್‌ ಹಾಗೂ ಕ್ಷಿಪಣಿ ಬಳಸಿ ದಾಳಿ ಮಾಡಿದೆ. ಇದು ಭಾರತೀಯನ ಸಾವಿಗೆ ಕಾರಣವಾಗಿದೆ.

ಇದರ ಬೆನ್ನಲ್ಲೇ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ‘ಇಂತಹ ಹಿಂಸಾಚಾರ ನಿಲ್ಲಬೇಕು. ಸಂಘರ್ಷ ಆರಂಭವಾದಾಗಿನಿಂದಲೂ ನಾಗರಿಕರು ಮತ್ತು ನಾಗರಿಕರ ಮೂಲಕಸೌಕರ್ಯಗಳನ್ನು ಗುರಿಯಾಗಿಸಬಾರದು ಎಂದು ನಾವು ಆಗ್ರಹಿಸಿದ್ದೆವು. ಅಂತಹ ದಾಳಿಗಳನ್ನು ನಿಲ್ಲಿಸುವಂತೆ ನಾವು ಮತ್ತೊಮ್ಮೆ ಎರಡೂ ಕಡೆಯವರಿಗೆ ಒತ್ತಾಯಿಸುತ್ತೇವೆ’ ಎಂದಿದೆ.ಮೊದಲು ಅಮೆರಿಕ ದಾಳಿ:

ಮೊದಲು ಅಮೆರಿಕವು ಆತ್ಮರಕ್ಷಣೆಯ ಭಾಗವಾಗಿ ಕ್ವೆಶ್ಮ್‌ ದ್ವೀಪದ ಸೇನಾ ನೆಲೆ ಮೇಲೆ ದಾಳಿ ನಡೆಸಿದ್ದಾಗಿ ತಿಳಿಸಿದೆ. ಆ ಬಳಿಕ ಇರಾನ್‌ ತನ್ನ ನೆರೆ ದೇಶಗಳ ಮೇಲೆ ಹಲವು ಸುತ್ತಿನ ದಾಳಿ ನಡೆಸಿದ್ದು, ಆ ದಾಳಿಗಳನ್ನೆಲ್ಲ ವಿಫಲಗೊಳಿಸಲಾಗಿದೆ ಎಂದಿದೆ.

‘ಇದಕ್ಕೆ ಪ್ರತಿಯಾಗಿ ಇರಾನ್‌, ಕುವೈತ್‌ನತ್ತ ಹಾರಿಸಿಬಿಟ್ಟ 2 ಕ್ಷಿಪಣಿಗಳು ಮಾರ್ಗ ಮಧ್ಯೆ ಪತನವಾಗಿದ್ದರೆ, ಬಹ್ರೇನ್‌ಅನ್ನು ಗುರಿಯಾಗಿರಿಸಿ ಹಾರಿಸಿಬಿಟ್ಟಿದ್ದ 3 ಕ್ಷಿಪಣಿಗಳನ್ನು ಮಾರ್ಗ ಮಧ್ಯೆ ಹೊಡೆದುರುಳಿಸಲಾಗಿದೆ. ಹೋರ್ಮುಜ್‌ ದಾಟುತ್ತಿದ್ದ ಸಾಮಾನ್ಯ ನಾವಿಕರಿದ್ದ ಹಡಗುಗಳನ್ನು ಗುರಿಯಾಗಿಸಿಯೂ ಇರಾನ್‌ 3 ಡ್ರೋನ್‌ಗಳನ್ನು ಹಾರಿಸಿಬಿಟ್ಟಿದ್ದು, ಅವುಗಳನ್ನು ಹೊಡೆದುರುಳಿಸಲಾಗಿದೆ’ ಎಂದು ಅಮೆರಿಕ ಹೇಳಿಕೊಂಡಿದೆ.

ಭಾರತೀಯ ಬಲಿ:

ಇದಾದ ಬಳಿಕ ಅಮೆರಿಕ ದಾಳಿಗೆ ಪ್ರತಿಯಾಗಿ ಕುವೈತ್‌ನ ಅಲ್‌ ಸಲೇಂ ಏರ್‌ಬೇಸ್‌ ಹಾಗೂ ಬಹರೈನ್‌ನ ಇಸಾ ಏರ್‌ಬೇಸ್‌ ಅನ್ನು ಗುರಿಯಾಗಿರಿಸಿಕೊಂಡು ಇರಾನ್‌ ಬುಧವಾರ ಬೆಳಗ್ಗೆ ದಾಳಿ ನಡೆಸಿದೆ. ಇರಾನ್‌ ದಾಳಿಯಿಂದ ಕುವೈತ್‌ ಅಂತಾರಾಷ್ಟ್ರೀಯ ಏರ್ಪೋರ್ಟಲ್ಲಿ ಓರ್ವ ಮೃತಪಟ್ಟಿದ್ದು, ಕೆಲವರಿಗೆ ಗಾಯಗಳಾಗಿವೆ. ಮೃತನನ್ನು ಭಾರತೀಯ ವ್ಯಕ್ತಿ ಎಂದು ಕುವೈತ್‌ನಲ್ಲಿನ ಭಾರತೀಯ ದೂತಾವಾಸ ಹೇಳಿದೆ. ಆದರೆ ಆತನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.ಈ ಹಿನ್ನೆಲೆಯಲ್ಲಿ ವಿಮಾನ ಹಾರಾಟ ರದ್ದು ಮಾಡಲಾಗಿದ್ದು, ಕೆಲ ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ. ಮಧ್ಯಾಹ್ನದ ಬಳಿಕ ಕುವೈಟ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಭಾಗಶಃ ಪುನರ್‌ ಆರಂಭವಾಗಿದೆ.

ಹಡಗುಗಳ ಮೇಲೆ ದಾಳಿ:

ಇರಾನ್‌ ಪ್ರಕಾರ, ಅಮೆರಿಕವು ಹೋರ್ಮುಜ್‌ ಜಲಸಂಧಿ ಸಮೀಪ ಇರಾನ್‌ನ ತೈಲ ಹಡಗೊಂದರ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಪನಾಮಾ ಮೂಲದ ಹಡಗಿನ ಮೇಲೆ ಇರಾನ್‌ ಪ್ರತಿದಾಳಿ ನಡೆಸಿದೆ.

ಅಮೆರಿಕವು ತನ್ನ ದಾಳಿಯನ್ನು ಸಮರ್ಥಿಸಿಕೊಂಡಿದ್ದು, ಒಂದು ವೇಳೆ ಬೇರೆ ದೇಶಗಳ ಹಡಗುಗಳು ಹೋರ್ಮುಜ್‌ ಮೂಲಕ ಸಾಗಲು ಅವಕಾಶ ನೀಡದಿದ್ದರೆ, ಇರಾನ್‌ನ ಹಡಗು ಸಾಗಲೂ ಅವಕಾಶ ಸಿಗುವುದಿಲ್ಲ ಎಂದು ಹೇಳಿಕೊಂಡಿದೆ.

ಲೆಬನಾನ್‌ ಮೇಲೆ ಇಸ್ರೇಲ್ ದಾಳಿ:

ಈ ನಡುವೆ ದಾಳಿ ಮಾಡದಂತೆ ಟ್ರಂಪ್ ಸೂಚನೆ ಹೊರತಾಗ್ಯೂ ಲೆಬನಾನ್ ರಾಜಧಾನಿ ಬೈರೂತ್ ಮೇಲೆ ಇಸ್ರೇಲ್‌ ವಾಯುದಾಳಿ ಮಾಡಿದೆ. ಒಂದು ಕಾರಿಗೆ ಹಾನಿ ಆಗಿದೆ.

- ಇರಾನ್‌ ಹಡಗು, ಕ್ವೆಶ್ಮ್‌ ದ್ವೀಪದ ಮೇಲೆ ಅಮೆರಿಕ ದಾಳಿ

- ಇರಾನ್‌ನಿಂದ ಕುವೈತ್‌, ಬಹ್ರೇನ್‌ ಮೇಲೆ ಪ್ರತಿದಾಳಿ

- ಕುವೈತ್ ಏರ್‌ಪೋರ್ಟ್‌ ಮೇಲೆ ದಾಳಿ: ಭಾರತೀಯ ಬಲಿ

- ಸಮರದ ವೇಳೆ ಮೃತರಾದ ಭಾರತೀಯರ ಸಂಖ್ಯೆ 10ಕ್ಕೆ

- ಇಂಥ ದಾಳಿ ಸಲ್ಲದು, ಕೂಡಲೇ ನಿಲ್ಲಿಸಿ: ಭಾರತ ಆಕ್ರೋಶ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಭಾರತದ ವಿರುದ್ಧ ಮತ್ತೆ ಟ್ರಂಪ್‌ ತೆರಿಗೆ ಕಿರಿಕ್
ಇಬ್ಭಾಗದತ್ತ ಮಮತಾ ಪಕ್ಷ ಟಿಎಂಸಿ!