ಶಾದಿ ಯೋಜನೆ ಹಣ ಎಗರಿಸಲು ನಕಲಿ ವಧು ವರರ ಮದುವೆ ನಾಟಕ

KannadaprabhaNewsNetwork |  
Published : Feb 05, 2024, 01:46 AM ISTUpdated : Feb 05, 2024, 08:58 AM IST
ಸಾಮೂಹಿಕ ಮದುವೆ | Kannada Prabha

ಸಾರಾಂಶ

ಉತ್ತರ ಪ್ರದೇಶ ರಾಜ್ಯ ಸರ್ಕಾರದ ‘ಶಾದಿ ಅನುದಾನ ಯೋಜನೆ’ಅಡಿಯಲ್ಲಿ ನವ ವಿವಾಹಿತರಿಗೆ ನೀಡಲಾಗುವ 51,000 ರು. ಧನಸಹಾಯವನ್ನು ಅಕ್ರಮವಾಗಿ ಪಡೆಯಲು ಕೆಲ ಮಹಿಳೆಯರು ಮತ್ತು ಪುರುಷರು ನಕಲಿ ವಧು ವರರ ಸೋಗಿನಲ್ಲಿ ವಿವಾಹವಾದ ರೀತಿ ನಾಟಕವಾಡಿರುವ ಘಟನೆ ರಾಜ್ಯದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ.

ಲಖನೌ: ಉತ್ತರ ಪ್ರದೇಶ ರಾಜ್ಯ ಸರ್ಕಾರದ ‘ಶಾದಿ ಅನುದಾನ ಯೋಜನೆ’ಅಡಿಯಲ್ಲಿ ನವ ವಿವಾಹಿತರಿಗೆ ನೀಡಲಾಗುವ 51,000 ರು. ಧನಸಹಾಯವನ್ನು ಅಕ್ರಮವಾಗಿ ಪಡೆಯಲು ಕೆಲ ಮಹಿಳೆಯರು ಮತ್ತು ಪುರುಷರು ನಕಲಿ ವಧು ವರರ ಸೋಗಿನಲ್ಲಿ ವಿವಾಹವಾದ ರೀತಿ ನಾಟಕವಾಡಿರುವ ಘಟನೆ ರಾಜ್ಯದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ. 

ಜ.25 ರಂದು ಬಲಿಯಾದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನಡೆದ ಭಾರೀ ನಕಲಿ ಮದುವೆ ವಂಚನೆಯಲ್ಲಿ ಸರ್ಕಾರಿ ಅಧಿಕಾರಿಗಳೂ ಭಾಗಿಯಾಗಿರುವುದು ಕಂಡು ಬಂದಿದೆ. 

ಅಂದರೆ ತಾವೇ ಫಲಾನುಭವಿಗಳ ಅನುದಾನದ ಹಣ ಎಗರಿಸಲು ಅಧಿಕಾರಿಗಳು ಜನರಿಗೆ ಹಣ ನೀಡಿ ವಧುವರರ ವೇಷ ಹಾಕಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. 

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿದಂತೆ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸಾಮೂಹಿಕ ಮದುವೆ ಸಮಾರಂಭಕ್ಕೆ ಬಿಜೆಪಿ ಶಾಸಕ ಕೇತ್ಕಿ ಸಿಂಗ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಏನಿದು ವಂಚನೆ?
ಸರ್ಕಾರದ ‘ಶಾದಿ ಅನುದಾನ ಯೋಜನೆ’ ಯೋಜನೆಯಡಿಯಲ್ಲಿ ಹಿಂದುಳಿದ ಮತ್ತು ಬಡ ಜನರಿಗೆ ಸಾಮೂಹಿಕ ವಿವಾಹ ಮಾಡಿಸಲಾಗುತ್ತದೆ ಮತ್ತು ನವವಿವಾಹಿತ ದಂಪತಿಗೆ ತಲಾ 51,000 ರು. ಅನುದಾನ ನೀಡಲಾಗುತ್ತದೆ. 

ಸರ್ಕಾರದ ನೇತೃತ್ವದಲ್ಲಿ ಹೀಗೆ ಜ.25ರಂದು ಬಲಿಯಾದಲ್ಲಿ ಬರೋಬ್ಬರಿ 568 ಜೋಡಿಗಳಿಗೆ ವಿವಾಹ ಮಾಡಿಸಲಾಗಿದೆ. ಆದರೆ ಈ 568ರಲ್ಲಿ ಕೆಲವರು ಜೋಡಿಗಳೇ ಅಲ್ಲ. 

ಅಂದರೆ ಮದುವೆ ಆಗಿರುವ ಕುರಿತು ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರದ ಅನುದಾನ ಪಡೆಯಲು ಕೆಲವರು ವಧು ವರರ ವೇಷದಲ್ಲಿ ವಿವಾಹದಲ್ಲಿ ಭಾಗಿಯಾಗಿದ್ದಾರೆ. 

ಕೆಲವರಿಗಂತೂ ಜೋಡಿಯೇ ಇರಲಿಲ್ಲ. ಅವರು ಆದರೂ ಸುಮ್ಮನೆ ನಿಂತಿರುವುದು ಜಾಲತಾಣದಲ್ಲಿ ವೈರಲ್‌ ಆಗಿರುವ ಸಮಾರಂಭದ ವಿಡಿಯೋದಲ್ಲಿ ಕಂಡು ಬಂದಿದೆ.

2,000 ರು. ನೀಡಿ ವಧುವರರ ವೇಷ: ಸಾಮೂಹಿಕ ಮದುವೆ ಸಮಾರಂಭದಲ್ಲಿ ಮದುವೆಯಾದ ರೀತಿ ನಾಟಕವಾಡಲು ಮಹಿಳೆಯರು ಹಾಗೂ ಪುರುಷರಿಗೆ ತಲಾ 500 ರಿಂದ 2,000 ರು. ಹಣ ನೀಡಲಾಗಿದೆ. 

‘ನಾನು ಮದುವೆ ನೋಡೋಕೆ ಅಂತ ಸಮಾರಂಭಕ್ಕೆ ಬಂದೆ. ನನ್ನನ್ನು ವರನನ್ನಾಗಿ ಅಲ್ಲೇ ಕೂರಿಸಿಬಿಟ್ಟರು. ನನಗೆ ಹಣ ನೀಡುವುದಾಗಿ ಅವರು ಹೇಳಿದರು. ಹಲವರನ್ನು ಹಾಗೆ ಕರೆತರಲಾಗಿದೆ’ ಎಂದು 19 ವರ್ಷದ ಯುವಕನೊಬ್ಬ ಹೇಳಿಕೆ ನೀಡಿದ್ದಾನೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ