;Resize=(412,232))
ಚಮೋಲಿ (ಉತ್ತರಾಖಂಡ) : ಉತ್ತರಾಖಂಡದ ಪವಿತ್ರ ಬದರಿನಾಥ ಧಾಮದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ಖಾಸಗಿ ಹೆಲಿಕಾಪ್ಟರೊಂದು ಪತನಗೊಂಡು 5 ಕನ್ನಡಿಗರು ಹಾಗೂ ದೆಹಲಿ ಮೂಲದ ಓರ್ವ ಪೈಲಟ್ ಸಾವನ್ನಪ್ಪಿದ ಆಘಾತಕಾರಿ ಘಟನೆ ಶುಕ್ರವಾರ ನಡೆದಿದೆ.
ಹೆಲಿಕಾಪ್ಟರ್‌ನಲ್ಲಿದ್ದವರನ್ನು ಸಕಲೇಶಪುರದ ಮೂಲದ ಪ್ರತಾಪ್ ಗೌಡ (41), ಬೆಳಗಾವಿ ಮೂಲದವರಾದ ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾಳುಂಕೆ (44), ಕುಣಿಗಲ್ ತಾಲೂಕಿನ ವಿ.ಬಿ.ಶಂಕರ್ ಗೌಡ (39), ಹೆಚ್.ಎಸ್.ನಟರಾಜ್ (51), ಸುಧೀರ್ ಕೆ. (50) ಹಾಗೂ ಪೈಲಟ್ ಕ್ಯಾಪ್ಟನ್ ಹಿಮಾಂಶು ಎಂದು ಗುರುತಿಸಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ದುರಂತ ಸಂಭವಿಸರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಕುರಿತ ತನಿಖಾ ವರದಿ ಪ್ರಕಟವಾದ ಬಳಿಕವಷ್ಟೇ ಖಚಿತ ಮಾಹಿತಿ ತಿಳಿದುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಾನ್ಸ್ ಭಾರತ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಸೇರಿದ ‘ವಿಟಿ-ಎಚ್‌ಸಿಎಕ್ಸ್’ ಕಾಲ್‌ಸೈನ್ ಹೊಂದಿದ್ದ ಹೆಲಿಕಾಪ್ಟರ್, ಮಧ್ಯಾಹ್ನ ಸುಮಾರು 1:15ರ ವೇಳೆಗೆ ಬದರಿನಾಥದಿಂದ ಡೆಹ್ರಾಡೂನ್‌ನ ಸಹಸ್ರಧಾರಾ ಹೆಲಿಪ್ಯಾಡ್ ಕಡೆಗೆ ಹೊರಟಿತ್ತು. ಮಧ್ಯಾಹ್ನ ಸುಮಾರು 2:14ರಿಂದ 2:20ರ ವೇಳೆಗೆ ಜೋಶಿಮಠ ಕಣಿವೆಯ ಮೇಲ್ಭಾಗದಲ್ಲಿ ಹಾರಾಟ ನಡೆಸುತ್ತಿದ್ದಾಗ, ರೇಡಾರ್ ಹಾಗೂ ಟ್ರ್ಯಾಕಿಂಗ್ ವ್ಯವಸ್ಥೆಯಿಂದ ಹೆಲಿಕಾಪ್ಟರ್‌ನ ಸಂವಹನ ಸಂಪೂರ್ಣವಾಗಿ ಕಡಿತಗೊಂಡಿತು.
ಆ ಸಮಯದಲ್ಲಿ ಸ್ಥಳೀಯ ಸೇನಾ ವಿಭಾಗವು ಆಕಾಶದಲ್ಲಿ ಹೊಗೆ ಏಳುತ್ತಿರುವುದನ್ನು ಹಾಗೂ ಹೆಲಿಕಾಪ್ಟರ್ ವೇಗವಾಗಿ ಕೆಳಗೆ ಬೀಳುತ್ತಿರುವುದನ್ನು ಗಮನಿಸಿತು. ಜೋಶಿಮಠ ಸಮೀಪದ ಮಾರ್ವಾಡಿ ಸೇತುವೆ ಹಾಗೂ ಜೆಪಿ ಪವರ್ ಹೌಸ್ ಹತ್ತಿರವಿರುವ ಛಾಯ್ ಗ್ರಾಮದ ಬೆಟ್ಟದ ಸಾಲಿಗೆ ಹೆಲಿಕಾಪ್ಟರ್ ಅಪ್ಪಳಿಸಿರುವುದು ನಂತರ ದೃಢಪಟ್ಟಿತು.
ದುರಂತದ ಮಾಹಿತಿ ತಿಳಿಯುತ್ತಿದ್ದಂತೆಯೇ ಚಮೋಲಿ ಜಿಲ್ಲಾಡಳಿತ, ಉತ್ತರಾಖಂಡ ಪೊಲೀಸ್, ರಾಜ್ಯ ವಿಪತ್ತು ಶಮನ ಪಡೆ, ಭಾರತೀಯ ಸೇನೆ ಹಾಗೂ ಐಟಿಬಿಪಿ ಪಡೆಗಳು ಜಂಟಿಯಾಗಿ ಬೃಹತ್ ರಕ್ಷಣಾ ಕಾರ್ಯಾಚರಣೆ ಆರಂಭಿಸಿದವು. ದುರ್ಗಮ ಪರ್ವತ ಸಾಲುಗಳು ಮತ್ತು ಮಂಜು-ಮಳೆಯಿಂದಾಗಿ ಕಾರ್ಯಾಚರಣೆಗೆ ಅಡೆತಡೆ ಉಂಟಾಯಿತಾದರೂ, ಸೇನಾ ತಂಡವು ಮಧ್ಯಾಹ್ನ 3:30ರ ಸುಮಾರಿಗೆ ಅಪಘಾತದ ಸ್ಥಳವನ್ನು ತಲುಪಿ ಪರಿಸ್ಥಿತಿಯನ್ನು ಪರಿಶೀಲಿಸಿತು.
ಶುಕ್ರವಾರದ ದುರಂತದ ಬೆನ್ನಲ್ಲೇ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಸಂಪೂರ್ಣ ಹೆಲಿಕಾಪ್ಟರ್ ಫ್ಲೀಟ್‌ನ ಹಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ದುರಂತಕ್ಕೆ ತೀವ್ರ ಕಂಬನಿ ಮಿಡಿದಿದ್ದು, ತಾವೇ ಖುದ್ದಾಗಿ ಘಟನೆಯ ಮೇಲ್ವಿಚಾರಣೆಯನ್ನು ನಡೆಸುತ್ತಿದ್ದಾರೆ. ಮೃತರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ರಕ್ಷಣಾ ಹಾಗೂ ಸಾಗಾಣಿಕೆ ನೆರವನ್ನು ತಕ್ಷಣವೇ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಉತ್ತರಾಖಂಡ: 10 ವರ್ಷಕ್ಕೆ 13 ಅಪಘಾತ, 21 ಜನ ಬಲಿ
ಡೆಹ್ರಾಡೂನ್: ಜೋಶಿಮಠದಲ್ಲಿ ನಡೆದ ಹೆಲಿಕಾಪ್ಟರ್ ದುರಂತದ ಬೆನ್ನಲ್ಲೇ ಕಳೆದೊಂದು ದಶಕದಲ್ಲಿ ರಾಜ್ಯದಲ್ಲಿ ನಡೆದ ಸರಣಿ ಹೆಲಿಕಾಪ್ಟರ್ ಅಪಘಾತಗಳು, ಕಾಪ್ಟರ್ ಸೇವೆಯ ಸುರಕ್ಷತೆ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. ಕಾರಣ ಕಳೆದೊಂದು ದಶಕದಲ್ಲಿ ರಾಜ್ಯದಲ್ಲಿ 13 ಕಾಪ್ಟರ್ ಅಪಘಾತ ಸಂಭವಿಸಿ 21 ಜನರು ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಕೇಂದ್ರ ಸರ್ಕಾರ ರಾಜ್ಯಸಭೆಗೆ ನೀಡಿದ ಅಂಕಿ ಅಂಶಗಳ ಪ್ರಕಾರ ದೇಶಾದ್ಯಂತ 2020- 2025ರ ಅವಧಿಯಲ್ಲಿ ನಡೆದ 12 ಪ್ರಮುಖ ಕಾಪ್ಟರ್ ಪತನದಲ್ಲಿ 7 ಉತ್ತರಾಖಂಡದಲ್ಲಿಯೇ ಸಂಭವಿಸಿದೆ. ಈ ಅವಧಿಯಲ್ಲಿ 30 ಜನರು ಸಾವನ್ನಪ್ಪಿದ್ದು, ಅವರಲ್ಲಿ 21 ಜನರು ಉತ್ತರಾಖಂಡದಲ್ಲಿಯೇ ಮೃತಪಟ್ಟಿದ್ದಾರೆ.
ಅಪಘಾತಕ್ಕೆ ಮುನ್ನ ಕಾಪ್ಟರಲ್ಲಿ ಪ್ರತಾಪ್ ಕೊನೆಯ ವಿಡಿಯೋ
ಚಮೋಲಿ: ದುರಂತಕ್ಕೆ ಕೆಲವೇ ಕ್ಷಣಗಳ ಮುನ್ನ, ಹೆಲಿಕಾಪ್ಟರ್‌ನಲ್ಲಿದ್ದ ಬಾಚಿಹಳ್ಳಿ ಪ್ರತಾಪ್ ಗೌಡ ಅವರು ಸೆರೆಹಿಡಿದಿದ್ದ ಕೊನೆಯ ವಿಡಿಯೋ ತುಣುಕು ಲಭ್ಯವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಕಾಂಗ್ರೆಸ್ ಮುಖಂಡ ಬಾಚಿಹಳ್ಳಿ ಪ್ರತಾಪ್ ಗೌಡ (49) ಅವರು ಅಪಘಾತಕ್ಕೂ ಮೊದಲು ತಮ್ಮ ಹೆಲಿಕಾಪ್ಟರ್ ಪ್ರಯಾಣದ ದೃಶ್ಯಗಳನ್ನು ಉತ್ಸಾಹದಿಂದ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋ ಈಗ ಹೊರಬಂದಿದೆ.
ಏನಾಯ್ತು?:
ಟ್ರಾನ್ಸ್ ಭಾರತ್ ಏವಿಯೇಷನ್ ಹೆಲಿಕಾಪ್ಟರ್ ಪತನ
ಎಲ್ಲಿ?: ಉತ್ತರಾಖಂಡದ ಜೋಶಿಮಠ ಕಣಿವೆಯಲ್ಲಿ
ಯಾವಾಗ?: ಶುಕ್ರವಾರ ಮಧ್ಯಾಹ್ನ 1.15ರ ಸುಮಾರಿಗೆ
ಪರಿಣಾಮ ಎನು: ಹೆಲಿಕಾಪ್ಟರಲ್ಲಿದ್ದ 5 ಕರ್ನಾಟಕ ಯಾತ್ರಿಕರು. ಪೈಲಟ್ ಸಾವು
ಮೃತರು
ಪ್ರತಾಪ್ ಗೌಡ, ಸಕಲೇಶಪುರ
ಅರುಣ್ ಸಾಳುಂಕೆ. ಸಿಸಿಬಿ ಇನ್ಸ್‌ಪೆಕ್ಟರ್, ಬೆಂಗಳೂರು
ವಿ.ಬಿ. ಶಂಕರಗೌಡ, ಕುಣಿಗಲ್
ಹೆಚ್.ಎಸ್.ನಟರಾಜ್, ಕುಣಿಗಲ್
ಕೆ. ಸುಧೀರ್, ಬೆಂಗಳೂರು