ಬಹುಮತ ವಿಜಯ - 120 ನಂಬರ್ ಪಡೆದ ನಟ । ಇಂದು ಬೆಳಗ್ಗೆ 10ಕ್ಕೆ ಸಿಎಂ ಆಗಿ ಶಪಥ

KannadaprabhaNewsNetwork |  
Published : May 10, 2026, 01:45 AM ISTUpdated : May 10, 2026, 04:11 AM IST
Vijay

ಸಾರಾಂಶ

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಹಾಗೂ ನಟ ವಿಜಯ್‌ಗೆ ತಮಿಳುನಾಡಿನ 13ನೇ ಮುಖ್ಯಮಂತ್ರಿ ಆಗುವ ಯೋಗ ಕೊನೆಗೂ ಒಲಿದುಬಂದಿದೆ. ಬಹುಮತದ ಸಂಖ್ಯೆಯಾದ 118 ಅನ್ನು ಮೀರಿ ಅವರು 120 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಶನಿವಾರ ಸಂಜೆ ಸಲ್ಲಿಸಿದ್ದಾರೆ

  ಚೆನ್ನೈ : ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಹಾಗೂ ನಟ ವಿಜಯ್‌ಗೆ ತಮಿಳುನಾಡಿನ 13ನೇ ಮುಖ್ಯಮಂತ್ರಿ ಆಗುವ ಯೋಗ ಕೊನೆಗೂ ಒಲಿದುಬಂದಿದೆ. ಬಹುಮತದ ಸಂಖ್ಯೆಯಾದ 118 ಅನ್ನು ಮೀರಿ ಅವರು 120 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಶನಿವಾರ ಸಂಜೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಲಾಗಿದ್ದು, ಭಾನುವಾರ ಬೆಳಗ್ಗೆ 10 ಗಂಟೆಗೆ ಜವಾಹರಲಾಲ್‌ ನೆಹರು ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇದೇ ವೇಳೆ, ರಾಜ್ಯಪಾಲರು ವಿಜಯ್‌ ಅವರಿಗೆ ಮೇ 13ರೊಳಗೆ ಬಹುಮತ ಸಾಬೀತುಪಡಿಸಲು ಸೂಚಿಸಿದ್ದಾರೆ.

ತಮಿಳುನಾಡಿನಲ್ಲಿ ಈ ಹಿಂದಿನ ಸರ್ಕಾರದ ಅವಧಿ ಭಾನುವಾರ ಅಂತ್ಯವಾಗುತ್ತದೆ. ಅದುವರೆಗೂ ಹೊಸ ಸರ್ಕಾರ ರಚನೆಯಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗುತ್ತಿತ್ತು. ಹೀಗಾಗಿ ಕೂದಲೆಳೆ ಅಂತರದಿಂದ ರಾಜ್ಯವು ರಾಷ್ಟ್ರಪತಿ ಆಳ್ವಿಕೆಯಿಂದ ಪಾರಾಗಿದೆ.

ವಿಜಯ್ ಪ್ರಮಾಣ ವಚನದಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಬೆಂಬಲ ನೀಡಿದ ವಿಸಿಕೆ, ಮುಸ್ಲಿಂ ಲೀಗ್:

ವಿಜಯ್‌ ಕಳೆದ 3 ದಿನದಲ್ಲಿ 3 ಸಲ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ಕೋರಿದ್ದರು. ಆದರೆ ಸರ್ಕಾರ ರಚಿಸಲು 118 ಸ್ಥಾನಗಳ ಸರಳ ಬಹುಮತ ತಲುಪಲಾಗದೆ ತೊಳಲಾಡುತ್ತಿದ್ದರು. ಶನಿವಾರ ಸಂಜೆ ವಿಜಯ್‌ಗೆ ತಲಾ 2 ಶಾಸಕರನ್ನು ಹೊಂದಿರುವ ವಿಸಿಕೆ ಮತ್ತು ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌) ಪಕ್ಷಗಳು ಕೊನೆಗೂ ಅಧಿಕೃತವಾಗಿ ಬೆಂಬಲ ಪ್ರಕಟಿಸಿದವು. ಈ ಮೂಲಕ ಟಿವಿಕೆ ಸರ್ಕಾರ ರಚನೆಗೆ ಎದುರಾಗಿದ್ದ ಅನಿಶ್ಚಿತತೆಗೆ ಅಂತ್ಯ ಹಾಡಿದವು.ಈ 2 ಸಣ್ಣ ಪಕ್ಷಗಳ ಬೆಂಬಲದೊಂದಿಗೆ, ಟಿವಿಕೆ ಪರ ಶಾಸಕರ ಸಂಖ್ಯೆ 120ಕ್ಕೆ ಏರಿದೆ.

ವಿಸಿಕೆ ಶಾಸಕಾಂಗ ಪಕ್ಷದ ನಾಯಕ ವನ್ನಿ ಅರಸು ಟಿವಿಕೆಗೆ ಬೆಂಬಲ ಘೋಷಿಸುವ ಪತ್ರವನ್ನು ವಿಜಯ್‌ಗೆ ಹಸ್ತಾಂತರ ಮಾಡಿದ್ದಾರೆ. ಈ ಬೆನ್ನಲ್ಲೇ ಐಯುಎಂಎಲ್‌ ಕೂಡಾ ಟಿವಿಕೆಯನ್ನು ಬೆಂಬಲಿಸುವುದಾಗಿ ಅಧಿಕೃತ ಪತ್ರ ಮುಖೇನ ಹೇಳಿದೆ.

ವಿಸಿಕೆಗೆ ಡಿಸಿಎಂ ಪಟ್ಟ ಬೇಕು ಎಂದು ಟಿವಿಕೆ ಅಧ್ಯಕ್ಷ ತೋಲ್ ತಿರುಮಾವಲವನ್ ಪಟ್ಟು ಹಿಡಿದಿದ್ದರು ಎನ್ನಲಾಗಿತ್ತು. ಹೀಗಾಗಿ ಸರ್ಕಾರಕ್ಕೆ ಶುಕ್ರವಾರ ಅವರು ಅಧಿಕೃತ ಬೆಂಬಲ ಘೋಷಿಸಿರಲಿಲ್ಲ. ಆದರೆ ಶನಿವಾರ ಮಾತನಾಡಿದ ಅವರು, ‘ರಾಜ್ಯವನ್ನು ರಾಷ್ಟ್ರಪತಿ ಆಡಳಿತದಿಂದ ಪಾರು ಮಾಡಲು ವಿಜಯ್‌ಗೆ ಬೆಂಬಲ ನೀಡುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ವಿಜಯ್‌ ಬಲ 120 ಹೇಗೆ?:

234 ಸದಸ್ಯಬಲದ ತಮಿಳುನಾಡಿನಲ್ಲಿ ಸರಳ ಬಹುಮತಕ್ಕೆ 118 ಸ್ಥಾನಗಳು ಅಗತ್ಯ. ಟಿವಿಕೆ 108 ಸ್ಥಾನಗಳನ್ನು ಹೊಂದಿದೆ. ಆದರೆ ವಿಜಯ್‌ 2 ಕ್ಷೇತ್ರದಲ್ಲಿ ಗೆದ್ದ ಕಾರಣ ಅದರ ಬಲವನ್ನು 107 ಎಂದು ಪರಿಗಣಿಸಲಾಗುತ್ತದೆ. ಬಹುಮತಕ್ಕೆ ಆರಂಭದಲ್ಲಿ 11 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿತ್ತು. ಹೀಗಾಗಿ ಮೊದಲು ಕಾಂಗ್ರೆಸ್‌ ಪಕ್ಷ ಅವರನ್ನು ಬೆಂಬಲಿಸಿತ್ತು. ಪರಿಣಾಮವಾಗಿ ಮೈತ್ರಿಕೂಟದ ಬಲ 112ಕ್ಕೆ ಏರಿತ್ತು. ಬಳಿಕ ಸಿಪಿಎಂನ 2 ಹಾಗೂ ಸಿಪಿಐನ 2 ಶಾಸಕರು ಬೆಂಬಲ ಘೋಷಿಸಿದ್ದರು. ಆಗ ಬಲ 116ಕ್ಕೆ ಏರಿತ್ತು. ಇದೀಗ ಸಿವಿಕೆಯ 2 ಹಾಗೂ ಮುಸ್ಲಿಂ ಲೀಗ್‌ನ 2 ಶಾಸಕರ ಬೆಂಬಲದೊಂದಿಗೆ 118ರ ಮ್ಯಾಜಿಕ್‌ ಸಂಖ್ಯೆ ದಾಟಿ 120ಕ್ಕೆ ಕೂಟದ ಬಲವರ್ಧನೆ ಆಗಿದೆ.

3 ಬಾರಿ ನಿರಾಕರಿಸಿದ್ದ ಅರ್ಲೇಕರ್:

ಬುಧವಾರ, ಗುರುವಾರ ಮತ್ತು ಶುಕ್ರವಾರ ಬಹುಮತದ ಕೊರತೆಯನ್ನು ಉಲ್ಲೇಖಿಸಿ, ಸರ್ಕಾರ ರಚನೆಗೆ ವಿಜಯ್ ಅವರನ್ನು ಆಹ್ವಾನಿಸಲು ಅರ್ಲೇಕರ್ ನಿರಾಕರಿಸಿದ್ದರು. ಇದು ಕೇಂದ್ರವು ಸರ್ಕಾರ ರಚನೆಯನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ಆಕ್ರೋಶಕ್ಕೆ ನಾಂದಿ ಹಾಡಿತ್ತು ಹಾಗೂ ವಿರೋಧ ಪಕ್ಷಗಳಿಂದ ಪ್ರತಿಭಟನೆಗೆ ನಾಂದಿ ಹಾಡಿತ್ತು.

ವಿಜಯ್‌ ಪರ ಖರ್ಗೆಮನವೊಲಿಕೆ ಯಶಸ್ವಿ

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಲವನ್ ಮತ್ತು ಮುಸ್ಲಿಂ ಲೀಗ್‌ ಜತೆ ಶುಕ್ರವಾರವೇ ಮಾತನಾಡಿ ಟಿವಿಕೆ-ಕಾಂಗ್ರೆಸ್ ಕೂಟಕ್ಕೆ ಬೆಂಬಲ ಯಾಚಿಸಿದ್ದರು. ಇದು ವಿಜಯ್ ಪರವಾಗಿ ಸಂಖ್ಯೆಗಳನ್ನು ಕ್ರೋಢೀಕರಿಸಲು ಸಹಾಯ ಮಾಡಿತು ಎನ್ನಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ಮೋದಿಗೆ ಆಹ್ವಾನ
6 ಬಂಡಾಯ ಸಂಸದರ ಅನರ್ಹತೆಗೆ ಠಾಕ್ರೆ ಶಿವಸೇನೆ ಮನವಿ