;Resize=(412,232))
ನವದೆಹಲಿ: ಹೆಚ್ಚುತ್ತಿರುವ ಅಪಘಾತಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ದೇಶದಲ್ಲಿ 2028, ಅ.1ರಿಂದ ಉತ್ಪಾದನೆಯಾಗುವ ಎಲ್ಲ ವಾಹನಗಳಿಗೆ ವಿ2ವಿ (ವೆಹಿಕಲ್ ಟು ವೆಹಿಕಲ್) ಸಂವಹನ ವ್ಯವಸ್ಥೆ ಕಡ್ಡಾಯಗೊಳಿಸುವ ಕರಡು ಅಧಿಸೂಚನೆಯೊಂದನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಬಿಡುಗಡೆ ಮಾಡಿದೆ.
ಇದರ ಪ್ರಕಾರ ಅ.1, 2028ರ ಮೊದಲು ಅಥವಾ ನಂತರ ಉತ್ಪಾದನೆಯಾಗುವ ಎಲ್, ಎಂ ಮತ್ತು ಎನ್ ಕೆಟಗರಿಯ ವಾಹನಗಳಿಗೆ ವಿ2ವಿ ಸಂವಹನ ವ್ಯವಸ್ಥೆ ಕಡ್ಡಾಯ. ದ್ವಿಚಕ್ರ, ತ್ರಿಚಕ್ರವಾಹನಗಳು, ಕಾರುಗಳು, ಎಸ್‌ಯುವಿಗಳು, ಬಸ್‌ಗಳು, ಗೂಡ್ಸ್ ವಾಹನಗಳು, ಟ್ರಕ್‌ಗಳು ಮತ್ತು ಹಗುರ ವಾಣಿಜ್ಯ ವಾಹಗಳು ಹೀಗೆ ಬಹುತೇಕ ವಾಹನಗಳು ಇವುಗಳಲ್ಲಿ ಸೇರಿವೆ.
ಹಂತ ಹಂತವಾಗಿ ಈ ತಂತ್ರಜ್ಞಾನ ಕಡ್ಡಾಯಕ್ಕೆ ಸರ್ಕಾರ ಮುಂದಾಗಿದ್ದು, ಈ ಮೂಲಕ ಈ ವ್ಯವಸ್ಥೆಯ ಉತ್ಪಾದಕರು ಹಾಗೂ ಪೂರೈಕೆದಾರರಿಗೆ ಹಾರ್ಡ್‌ವೇರ್, ಸಾಫ್ಟ್‌ವೇರ್ ಸೌಲಭ್ಯ ಅಭಿವೃದ್ಧಿಪಡಿಸಲು ಸಾಕಷ್ಟು ಕಾಲಾವಕಾಶ ಸಿಗಲಿದೆ. ವಾಹನಗಳು ಪರಸ್ಪರ ಸಂವಹನ ನಡೆಸಲು ಅವಕಾಶ ನೀಡುವ ಈ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆಗೆ ಗಣನೀಯ ಕೊಡುಗೆ ನೀಡಲಿದೆ.
ವಿ2ವಿ ವ್ಯವಸ್ಥೆ ವೇಗ, ಸ್ಥಳ, ದಿಕ್ಕು, ಲೇನ್ ಬದಲಾವಣೆ, ವೇಗ ಬದಲಾವಣೆ ಕುರಿತು ವಾಹನಗಳ ನಡುವೆ ಪರಸ್ಪರ ಸಂವಹನಕ್ಕೆ ಅವಕಾಶ ನೀಡುತ್ತದೆ. ವಾಹನ ಚಾಲಕನ ಕಣ್ಣಿಗೆ ಕಾಣದ ಅಥವಾ ವಾಹನಗಳಿಗೆ ಅಳವಡಿಸಲಾಗಿರುವ ಸೆನ್ಸರ್‌ಗಳ ರೇಂಜ್ ಮೀರಿದ ಅಪಾಯಗಳ ಕುರಿತು ಎಚ್ಚರಿಸುತ್ತದೆ. ಮುಂದೆ ಸಾಗುತ್ತಿರುವ ವಾಹನ ದಿಢೀರ್ ಬ್ರೇಕ್‌ಹಾಕುವ ಸಾಧ್ಯತೆ, ಅಸುರಕ್ಷಿತ ಲೇನ್ ಬದಲಾವಣೆಗಳು, ಡಿಕ್ಕಿಯಾಗುವ ಸಾಧ್ಯತೆಗಳ ಕುರಿತು ತಕ್ಷಣ ಎಚ್ಚರಿಕೆ ನೀಡುತ್ತವೆ.
ಚೀನಾ, ಜಪಾನ್, ಅಮೆರಿಕ ಹಾಗೂ ಅನೇಕ ಯುರೋಪಿಯನ್ ರಾಷ್ಟ್ರಗಳು ಈಗಾಗಲೇ ವಿಟುವಿ ಅಥವಾ ಬ್ರಾಡರ್ ವೆಹಿಕಲ್ಸ್ ಟು ಎವ್ರಿಥಿಂಗ್ ಸಿಸ್ಟಮ್ಸ್ ಅನ್ನು ಪ್ರಾಯೋಗಿಕವಾಗಿ ಮತ್ತು ಆಯ್ದ ಉತ್ಪಾದನೆ ಮೂಲಕ ಪರೀಕ್ಷಿಸಿವೆ.
- ಹೊಸ ವಾಹನಗಳಿಗೆ ವಿ ಟು ವಿ ಎಂಬ ಸೆನ್ಸರ್ ವ್ಯವಸ್ಥೆ ಅಳವಡಿಸಲಾಗುತ್ತದೆ
- ಇದರಿಂದ ವಾಹನದ ಸ್ಥಳ, ದಿಕ್ಕು, ಅಂತರ ಲೇನ್ ಬದಲಾವಣೆ ಬಗ್ಗೆ ಮಾಹಿತಿ
- ಮುಂದೆ ಸಾಗುವ ವಾಹನ ಬ್ರೇಕ್ ಹಾಕಿದರೂ ಕೂಡ ಹಿಂದಿನ ವಾಹನಕ್ಕೆ ಮಾಹಿತಿ
- ಅಸುರಕ್ಷಿತ ಲೇನ್ ಬದಲಾವಣೆ, ಡಿಕ್ಕಿ ಸಾಧ್ಯತೆಗಳ ಕುರಿತು ತಕ್ಷಣ ಎಚ್ಚರಿಕೆ ರವಾನೆ
- ಈ ತಂತ್ರಜ್ಞಾನದಿಂದ ಅಪಘಾತ ನಿಯಂತ್ರಣ. ರಸ್ತೆ ಸುರಕ್ಷತೆಗೆ ಗಣನೀಯ ಕೊಡುಗೆ
- ಈಗಾಗಲೇ ಚೀನಾ, ಜಪಾನ್, ಅಮೆರಿಕ, ಅನೇಕ ಯುರೋಪ್ ದೇಶಗಳಲ್ಲಿ ಜಾರಿ