50 ದನಗಳನ್ನು ಹರಿಯುವ ನದಿಗೆಸೆದ ಕಿಡಿಗೇಡಿಗಳು, 20 ಸಾವು : ಮಧ್ಯಪ್ರದೇಶದಲ್ಲಿ ಘಟನೆ

KannadaprabhaNewsNetwork | Updated : Aug 29 2024, 05:02 AM IST

ಸಾರಾಂಶ

ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಕಿಡಿಗೇಡಿಗಳ ಗುಂಪೊಂದು ಹರಿಯುವ ನದಿಗೆ 50 ದನಗಳನ್ನು ಎಸೆದಿದ್ದು, ಅದರಲ್ಲಿ 15-20 ಹಸುಗಳು ಸಾವನ್ನಪ್ಪಿರುವ ಅಮಾನವೀಯ ಘಟನೆ ನಡೆದಿದೆ.

ಸತ್ನಾ: ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಕಿಡಿಗೇಡಿಗಳ ಗುಂಪೊಂದು ಹರಿಯುವ ನದಿಗೆ 50 ದನಗಳನ್ನು ಎಸೆದಿದ್ದು, ಅದರಲ್ಲಿ 15-20 ಹಸುಗಳು ಸಾವನ್ನಪ್ಪಿರುವ ಅಮಾನವೀಯ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಂಗಳವಾರ ಈ ಘಟನೆ ನಡೆದಿದ್ದು, ಬಹ್ಮೋರ್‌ನ ರೈಲ್ವೆ ಹಳಿ ಸಮೀಪದಲ್ಲಿರುವ ಸತ್ನಾ ನದಿಗೆ ಸುಮಾರು 50 ಹಸುಗಳನ್ನು ಹರಿಯುವ ನದಿಗೆ ಎಸೆಯಲಾಗಿದೆ. ಈ ಪೈಕಿ 15 ರಿಂದ 20 ಹಸುಗಳು ಸಾವನ್ನಪ್ಪಿದ್ದು, ಉಳಿದ ದನಗಳ ರಕ್ಷಣೆಗೆ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

==

ಫೆಮಾ ಕಾಯ್ದೆ ಉಲ್ಲಂಘನೆ: ಡಿಎಂಕೆಯ ಜಗದ್ರಕ್ಷನ್‌ಗೆ 908 ಕೋಟಿ ರು. ದಂಡ

ನವದೆಹಲಿ: ವಿದೇಶಿ ವಿನಿಮಯ ನಿಯಮ (ಫೆಮಾ) ಉಲ್ಲಂಘಿಸಿದ ಆರೊಪದ ಮೇಲೆ ತಮಿಳುನಾಡಿನ ಡಿಎಂಕೆ ಸಂಸದ ಎಸ್‌. ಜಗದ್ರಕ್ಷನ್‌ ಹಾಗೂ ಅವರ ಪರಿವಾರಕ್ಕೆ 908 ಕೋಡಿ ರು. ದಂಡ ವಿಧಿಸಿರುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ಹೇಳಿದೆ. ಜೊತೆಗೆ 2020ರಲ್ಲಿ ವಶಪಡಿಸಿಕೊಂಡಿದ್ದ 90 ಕೋಟಿ ರು. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.2017ರಲ್ಲಿ ಸಿಂಗಾಪುರದಲ್ಲಿ ನಕಲಿ ಕಂಪನಿಯೊಂದನ್ನು ತೆರೆದು ಅದರಲ್ಲಿ 47 ಕೋಟಿ ರು. ಹೂಡಿಕೆ ಮಾಡಿದ ಆರೋಪ ಡಿಎಂಕೆ ಸಂಸದನ ಮೇಲೆ ಕೇಳಿಬಂದಿತ್ತು. ಈ ಕುರಿತ ತನಿಖೆ ವೇಳೆ ಸಂಸದರ ಕುಟುಂಬ ಫೆಮಾ ಕಾಯ್ದೆ ಉಲ್ಲಂಘನೆ ಮಾಡಿದ್ದು ಪತ್ತೆಯಾದ ಹಿನ್ನೆಲೆಯಲ್ಲಿ ಅವರ ಆಸ್ತಿ ಜಪ್ತಿ ಮಾಡಲಾಗಿತ್ತು. ಅದೇ ಪ್ರಕರಣದಲ್ಲಿ ಇದೀಗ ದಂಡ ವಿಧಿಸಲಾಗಿದೆ.

==

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಎಎಸ್‌ಎಲ್‌ ಭದ್ರತೆ!

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್‌ಗೆ ಈಗಾಗಲೇ ನೀಡಲಾಗಿರುವ ಝಡ್‌ ಶ್ರೇಣಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಅಡ್ವಾನ್ಸ್‌ ಸೆಕ್ಯೂರಿಟಿ ಲೈಸನ್‌ (ಎಎಸ್‌ಎಲ್‌) ಭದ್ರತೆಯನ್ನು ಒದಗಿಸಲಾಗಿದೆ.

ಎಎಸ್‌ಎಲ್‌ ಭದ್ರತೆಯನ್ನು ಈಗಾಗಲೇ ಹೊಂದಿರುವ ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜನಾಥ್‌ ಸಿಂಗ್, ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಪಟ್ಟಿಗೆ ಭಾಗವತ್‌ ಸೇರ್ಪಡೆಯಾಗಿದ್ದಾರೆ.ಝಡ್‌ ಶ್ರೇಣಿ ಭದ್ರತೆಯನ್ನು ಹೊಂದಿರುವ ಎಲ್ಲರಿಗೂ ಎಎಸ್‌ಎಲ್‌ ಭದ್ರತೆಯನ್ನು ನೀಡುವುದಿಲ್ಲ, ಈ ಭದ್ರತೆಯನ್ನು ಸುರಕ್ಷತೆ ಪರಿಶೀಲನೆ ಕಾರಣಕ್ಕೆ ನೀಡಲಾಗುತ್ತದೆ. ಇದರ ಪ್ರಕಾರ ನಾಯಕರು ಭೇಟಿ ನೀಡುವ ಸ್ಥಳದ ಪೂರ್ವಭಾವಿ ಪರಿಶೀಲನೆ, ಸ್ಥಳೀಯ ಪೊಲೀಸರ ಜೊತೆ ಸಮಾಲೋಚನೆ, ಸಂಭವನೀಯ ಅಪಾಯು ಎದುರಿಸಲು ಬೇಕಾದ ಕಾರ್ಯತಂತ್ರ ರಚನೆ ಸೇರಿದಂತೆ ಸುರಕ್ಷತೆ ಪರಿಶೀಲನೆಯ ಹಲವು ಕಾರ್ಯಗಳನ್ನು ಒಳಗೊಂಡಿರುತ್ತದೆ.

Share this article