ಭುವನೇಶ್ವರ : ಹೊಸ ಸರ್ಕಾರ ರಚನೆಯಾದ ಬಳಿಕ ಏಕರೂಪ ನಾಗರಿಕ ಸಂಹಿತೆ ಸೇರಿ ಮಹತ್ವದ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದಾರೆ. ಸರ್ಕಾರ ರಚನೆಯಾಗಿ 100 ದಿನದಲ್ಲೇ ಇದು ಮಂಡನೆ ಆಗಬಹುದಾದ ಸೂಚನೆ ಕೊಟ್ಟಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘ನಾನು ಮುಖ್ಯಮಂತ್ರಿಯಾದಂದಿನಿಂದಲೂ ಹೊಸ ಸರ್ಕಾರದ ಮೊದಲ 100 ದಿನಗಳ ಕಾರ್ಯಸೂಚಿಯನ್ನು ಇಟ್ಟುಕೊಂಡೇ ಚುನಾವಣೆಯನ್ನು ಎದುರಿಸುತ್ತಿದ್ದೇನೆ. ಅದೇ ರೀತಿ 2019ರಲ್ಲಿ ಪ್ರಧಾನಿಯಾಗಿ ಮೊದಲ 100 ದಿನದೊಳಗೆ 370ನೇ ವಿಧಿ ನಿಷೇಧ ಮತ್ತು ತ್ರಿವಳಿ ತಲಾಖ್ ನಿಷೇಧದಂತಹ ಮಹತ್ವದ ಕಾನೂನುಗಳನ್ನು ಅಂಗೀಕರಿಸಲಾಯಿತು. ಹೀಗೆಯೇ ಈ ಬಾರಿಯೂ ಕೆಲವು ಮಹತ್ವದ ಕಾನೂನುಗಳನ್ನು ಜಾರಿ ಮಾಡಲು ಸಿದ್ಧತೆ ನಡೆಸಲಾಗಿದೆ’ ಎಂದು ತಿಳಿಸಿದರು.
ಇದೇ ವೇಳೆ ಮೊದಲ 100 ದಿನದೊಳಗೆ ಏಕರೂಪ ನಾಗರಿಕ ಸಂಹಿತೆ ಮತ್ತು ಒಂದು ದೇಶ ಒಂದು ಚುನಾವಣೆ ತಿದ್ದುಪಡಿಗಳನ್ನು ಜಾರಿ ಮಾಡುವ ಕುರಿತು ಪ್ರಶ್ನಿಸಿದಾಗ, ‘ಬಿಜೆಪಿಯ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಎಲ್ಲ ಅಂಶಗಳನ್ನು ಆದಷ್ಟು ಶೀಘ್ರದಲ್ಲಿ ಜಾರಿ ಮಾಡಲು ಪ್ರಯತ್ನಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.
ಯುವಶಕ್ತಿಯಿಂದಲೂ ಸಲಹೆ: ಇದೇ ವೇಳೆ ತಮ್ಮ ಮೊದಲ 100 ದಿನದ ಕಾರ್ಯಸೂಚಿ ಕುರಿತು ಮಾತನಾಡುತ್ತಾ, ‘ಹೊಸ ಸರ್ಕಾರದ ಮೊದಲ 100 ದಿನದ ಕಾರ್ಯಸೂಚಿ ಸಿದ್ಧಪಡಿಸಲು ಮತ್ತೆ 25 ದಿನ ನೀಡಲಾಗಿದೆ. ಈ ಅವಧಿಯಿಂದಲೂ ರಾಷ್ಟ್ರದ ಯುವಜನರಿಂದಲೂ ಸಲಹೆ ಸ್ವೀಕರಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಏನಿದು ಯುಸಿಸಿ?:
ಏಕರೂಪ ನಾಗರಿಕ ಸಂಹಿತೆಯಲ್ಲಿ ಎಲ್ಲ ಧರ್ಮಕ್ಕೂ ಸಮಾನ ಕಾನೂನುಗಳನ್ನು ಜಾರಿಗೆ ತರಲಾಗುತ್ತದೆ. ಪ್ರಮುಖವಾಗಿ ವಿವಾಹ, ವಿಚ್ಛೇದನ, ಆಸ್ತಿ ಹಂಚಿಕೆ, ಉತ್ತರಾಧಿಕಾರ ಮುಂತಾದ ವಿಷಯಗಳಲ್ಲಿ ಸಮಾನ ಕಾನೂನುಗಳನ್ನು ತರಲಾಗುತ್ತದೆ. ಇಂತಹ ಕಾನೂನು ಜಾರಿ ಮಾಡಿದ ಸ್ವತಂತ್ರ ಭಾರತದ ಮೊದಲ ರಾಜ್ಯ ಎಂಬ ಹಿರಿಮೆಗೆ ಉತ್ತರಾಖಂಡ ಪಾತ್ರವಾಗಿದೆ.