ಮನೆ, ಮಕ್ಕಳು ಕನಸು ಕಟ್ಟಿದ ಮಾರನೇ ದಿನ ಪತಿ ಸಾವಿನ ಸುದ್ದಿ

KannadaprabhaNewsNetwork |  
Published : Jul 08, 2024, 12:38 AM ISTUpdated : Jul 08, 2024, 04:58 AM IST
ಕ್ಯಾ.ಅನ್ಷುಮಾನ್‌  | Kannada Prabha

ಸಾರಾಂಶ

ಶಾಂತಿ ಕಾಲದಲ್ಲಿ ಸೇನೆಯಲ್ಲಿ ಅನುಪಮ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಎರಡನೇ ಅತ್ಯುನ್ನತ ಗೌರವವಾದ ಕೀರ್ತಿ ಚಕ್ರ ಈ ಬಾರಿ ಹುತಾತ್ಮ ಯೋಧ ಕ್ಯಾ.ಅನ್ಷುಮಾನ್‌ ಸಿಂಗ್‌ ಅವರಿಗೆ ನೀಡಲಾಗಿದೆ.

ನವದೆಹಲಿ: ಶಾಂತಿ ಕಾಲದಲ್ಲಿ ಸೇನೆಯಲ್ಲಿ ಅನುಪಮ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಎರಡನೇ ಅತ್ಯುನ್ನತ ಗೌರವವಾದ ಕೀರ್ತಿ ಚಕ್ರ ಈ ಬಾರಿ ಹುತಾತ್ಮ ಯೋಧ ಕ್ಯಾ.ಅನ್ಷುಮಾನ್‌ ಸಿಂಗ್‌ ಅವರಿಗೆ ನೀಡಲಾಗಿದೆ. ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪತಿ ಅನ್ಷುಮಾನ್‌ ಪರವಾಗಿ ಅವರ ಪತ್ನಿ ಸ್ಮೃತಿ ಶುಕ್ರವಾರ ಪ್ರಶಸ್ತಿ ಸ್ವೀಕರಿಸುವಾಗ ನೆರೆದಿದ್ದವರ ಕಣ್ಣಾಲಿಗಳು ಒದ್ದೆಯಾಗಿದ್ದವು. ಸ್ವತಃ ರಕ್ಷಣಾ ಸಚಿವ ರಾಜ್‌ನಾಥ್‌ ಕಣ್ಣೀರು ಉಕ್ಕಿಬಂದರೂ ತಡೆದಿದ್ದರು.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧ, ತನ್ನ ಪತಿ ಕುರಿತು ಸ್ಮೃತಿ ಈ ಕಾರ್ಯಕ್ರಮದ ಬಳಿಕ ಮಾತನಾಡಿದ್ದಾರೆ. ಆ ಕುರಿತ ವಿಡಿಯೋವೊಂದನ್ನು ರಕ್ಷಣಾ ಇಲಾಖೆ ಹಂಚಿಕೊಂಡಿದೆ. ಅದರಲ್ಲಿ ತಮ್ಮಿಬ್ಬರ ಪ್ರೀತಿ, ವಿವಾಹ, ಕನಸು, ಅಗಲಿಕೆಯ ಕ್ಷಣಗಳನ್ನು ಸ್ಮೃತಿ ಹಂಚಿಕೊಂಡಿದ್ದಾರೆ.

‘ನಾನು ಅಂಶುಮಾನ್‌ ಪ್ರೀತಿಸಿ ಮದುವೆಯಾಗಿದ್ದೆವು. ನಮ್ಮ ಪ್ರೇಮಕತೆ ಕಾಲೇಜಿನಲ್ಲಿ ಲವ್‌ ಅಟ್‌ ಫಸ್ಟ್‌ ಸೈಟ್‌ ಆಗಿತ್ತು. ಆದರೆ ಇದಾದ ತಿಂಗಳಲ್ಲೇ ಅವರು ಸೇನೆಗೆ ಸೇರಿದರು. ಅಲ್ಲಿಂದ 8 ವರ್ಷಗಳ ಕಾಲ ಲಾಂಗ್‌ ಡಿಸ್ಟೆನ್ಸ್‌ ರಿಲೇಷನ್‌ಶಿಪ್‌ ಆಗಿತ್ತು. ಹೀಗೆ ಶಿಕ್ಷಣ ಮುಗಿದು ಸೇನೆ ಸೇರಿದ ಬಳಿಕ ನಾವು ಮದುವೆಯಾಗಲು ನಿರ್ಧರಿಸಿದೆವು. ಆದರೆ ಮದುವೆಯ ಎರಡೇ ತಿಂಗಳಿನಲ್ಲಿ ಅವರನ್ನು ಸಿಯಾಚಿನ್‌ಗೆ ವರ್ಗಾವಣೆ ಮಾಡಲಾಯಿತು. ಕಳೆದ ವರ್ಷ ಜು.18 ನಾನು ಮತ್ತು ಕ್ಯಾ।ಸಿಂಗ್‌ ಹಲವು ಗಂಟೆಗಳ ಕಾಲ ಮಾತನಾಡಿದ್ದೆವು. ನಾವು ಮನೆ ಮಾಡಬೇಕು, ನಾವು ಮಕ್ಕಳು ಮಾಡಿಕೊಂಡು, ನಮ್ಮ ಜೀವನ ಮುಂದಿನ 50 ವರ್ಷದಲ್ಲಿ ಹೇಗೆ ಇರುತ್ತದೆ. ನಮ್ಮ ಸಂಸಾರ ಹೇಗೆ ನಡೆಸಬೇಕು ಎಂದೆಲ್ಲಾ ಮಾತನಾಡಿದ್ದೆವು. ಆದರೆ ಮಾರನೇ ದಿನ ಬೆಳಗ್ಗೆಯೇ ಸೇನೆಯಿಂದ ಅವರು ಇನ್ನಿಲ್ಲ ಎಂದು ಕರೆ ಬಂತು. ನಮಗೆ ಅದನ್ನು ಅರಗಿಸಿಕೊಳ್ಳಲು ಆಗಿರಲಿಲ್ಲ. ಆದರೆ ಇಂದು ಈ ಗೌರವ ಪಡೆದ ಬಳಿಕ ಅವರಿಲ್ಲ ಎಂಬುದು ‘ಸತ್ಯ’ ಎಂದು ಅರ್ಥ ಮಾಡಿಕೊಂಡೆವು’ ಎಂದು ಹೇಳಿಕೊಂಡರು.

ವೀರಯೋಧನ ಸಾವು

ಜೊತೆಗೆ ಕ್ಯಾ।ಸಿಂಗ್‌ ಪ್ರತಿ ಬಾರಿಯೂ ನನಗೆ ಸಾಮಾನ್ಯವಾದ ರೀತಿಯಲ್ಲಿ ಸಾವು ಬರಬಾರದು. ನಾನು ಸಾಯುವ ವೇಳೆ ನನ್ನ ಎದೆಯ ಮೇಲೆ ಪದಕ ಹೊಂದಿರಬೇಕು ಎಂದು ಆಸೆ ಇರಿಸಿಕೊಂಡಿದ್ದರು. ನಾವು ಸಾಮಾನ್ಯವಾಗಿ ಮೃತಪಟ್ಟರೆ ಯಾರಿಗೂ ತಿಳಿಯದು ಎಂದು ಹೇಳಿದ್ದರು. ಅದೇ ರೀತಿ ಹುತಾತ್ಮರಾದರು. ಅವರ ಸಾವಿನ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಸ್ಮೃತಿ ಹೇಳಿದರು.

ವೀರಮರಣ

ಕಳೆದ ವರ್ಷ ಸಿಯಾಚಿನ್‌ನಲ್ಲಿ ಭಾರತೀಯ ಸೇನೆ ನೆಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಉಳಿದ ಯೋಧರ ಪ್ರಾಣರಕ್ಷಣೆ ಮತ್ತು ವೈದ್ಯಕೀಯ ಉಪಕರಣಗಳ ರಕ್ಷಣೆ ಮಾಡಲು ಹೋಗಿ ಅನ್ಷುಮನ್‌ ತಮ್ಮ ಪ್ರಾಣತ್ಯಾಗ ಮಾಡಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !