ಸಿಹಿ, ಕಹಿ ಘಟನೆಗಳ ಸಮ್ಮಿಶ್ರಣದಲ್ಲಿ ಮರೆಯಾದ ‘೨೦೨೩’...!

KannadaprabhaNewsNetwork | Published : Jan 1, 2024 1:15 AM

ಸಾರಾಂಶ

ಕೋಲಾರ ಜಿಲ್ಲೆಯಲ್ಲಿ 2023ರಲ್ಲಿ ಘಟಿಸಿದ ಪ್ರಮುಖ ಘಟನಾವಳಿಗಳ ಬಗ್ಗೆ ಒಮ್ಮೆ ಹಿಂತಿರುಗಿ ನೋಡಿದಾಗ ಸಿಹಿ-ಕಹಿ ಘಟನೆಗಳ ಸಮ್ಮಿಶ್ರಣ ಎನ್ನಬಹುದು. ಮಳೆ ಇಲ್ಲದೆ ಕೃಷಿ ಕ್ಷೇತ್ರಕ್ಕೆ ಹಿನ್ನಡೆ, ಜಿಲ್ಲೆಯ ಶಾಸಕರಿಗೆ ಮಂತ್ರಿ ಸ್ಥಾನ ಇಲ್ಲ, ಕೊಲೆ ಘಟನೆಗಳ ಸರಮಾಲೆ, ಅರಣ್ಯ ಭೂಮಿ ತೆರವು ಪ್ರಕರಣ, ಸಂಸದ, ಶಾಸಕರ ನಡುವೆ ವಾಗ್ವಾದ ನಡುವೆಯೇ ಉಳಿತು ವರ್ಷ.

ಕನ್ನಡಪ್ರಭ ವಾರ್ತೆ ಕೋಲಾರ

೨೦೨೩ ಕೊನೆಗೊಂಡಿದ್ದು, ಜನತೆ ೨೦೨೪ನೇ ವರ್ಷವನ್ನು ಸ್ವಾಗತಿಸಲು ಜನತೆ ಉತ್ಸುಕರಾಗಿದ್ದಾರೆ. ಕಳೆದ ಸಾಲಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಘಟಿಸಿದ ಪ್ರಮುಖ ಘಟನಾವಳಿಗಳ ಬಗ್ಗೆ ಒಮ್ಮೆ ಹಿಂತಿರುಗಿ ನೋಡಿದಾಗ ಸಿಹಿ- ಕಹಿ ಘಟನೆಗಳ ಸಮ್ಮಿಶ್ರಣ ಎನ್ನಬಹುದು.

ಕಳೆದ ವರ್ಷ ರಾಜಕೀಯ ಪಲ್ಲಟಗಳು ಹೆಚ್ಚಾಗಿ ನಡೆದವು, ಅಬ್ಬರದ ರಾಜಕೀಯ ಪಕ್ಷಗಳ ಸಮಾವೇಶಗಳು ನಡೆದರೂ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಫಲಿತಾಂಶ ನಿರೀಕ್ಷೆ ತಲೆಕೆಳಗಾಯಿತು. ಮುಂಗಾರು-ಹಿಂಗಾರು ಮಳೆಯ ಕೊರತೆ, ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳವು, ಅಪರಾಧಿಗಳ ಮೇಲೆ ಪೊಲೀಸರಿಂದ ಫೈರಿಂಗ್, ಜಿಲ್ಲೆಯಲ್ಲಿ ಬರ ಎದುರಾಗಿದ್ದು, ಕೋಚಿಮುಲ್ ನೇಮಕಾತಿ ಹಗರಣದ ಕರಿನೆರಳು, ಬಾಲಕನ ಹತ್ಯೆ, ಶಾಲಾ ಮಕ್ಕಳಿಂದ ಮಲ ಹೊರಿಸಿದ ಘಟನೆಗಳು ಜನತೆಯ ನೆನಪಿನಲ್ಲಿ ಶಾಶ್ವತವಾಗಿಯೇ ಉಳಿಯುವಂತೆ ಮಾಡಿದೆ.

ಮಳೆ ಇಲ್ಲದೆ ಕೃಷಿ ಕ್ಷೇತ್ರಕ್ಕೆ ಹಿನ್ನಡೆ:

ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ, ಜತೆಗೆ ಹಿಂಗಾರು ಮಳೆಯು ಕೈಕೊಟ್ಟಿತ್ತು, ಇದರಿಂದಾಗಿ ಬಿತ್ತನೆ ಕಾರ್ಯಕ್ಕೆ ತೀವ್ರ ಹಿನ್ನಡೆಯಾಯಿತು. ಕೇವಲ ಶೇ.೪೩ರಷ್ಟು ಮಳೆ ಆಗಿದೆ. ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದಿಂದ ಸರ್ಕಾರವು ಎಲ್ಲ ತಾಲೂಕುಗಳನ್ನು ಬರ ಪಡೀತ ಪ್ರದೇಶ ಎಂದು ಘೋಷಣೆ ಮಾಡಿದೆ.

ಜಿಲ್ಲೆಯ ಶಾಸಕರಿಗೆ ಮಂತ್ರಿ ಸ್ಥಾನ ಇಲ್ಲ:

ಮೇ ತಿಂಗಳಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳ ಪೈಕಿ ೪ ಕಾಂಗ್ರೆಸ್ ಹಾಗೂ ೨ ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾದರು. ೪ ಮಂದಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು ಯಾವುದೇ ಶಾಸಕರಿಗೆ ಸಚಿವ ಸ್ಥಾನ ಸಿಗದೆ ಇರುವುದು ತೀವ್ರ ನಿರಾಸೆಯುಂಟು ಮಾಡಿದೆ.

ಜೆಡಿಎಸ್-ಬಿಜೆಪಿ ಸರ್ಕಾರದ ಅವಧಿಯಲ್ಲಿ ಯರಗೋಳ್ ಡ್ಯಾಂ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು, ಕಾಂಗ್ರೆಸ್ ಸರ್ಕಾರ ಡ್ಯಾಂ ಲೋಕಾರ್ಪಣೆ ಮಾಡಿತು. ಅಂದುಮುಖ್ಯಮಂತ್ರಿ ಸಿದ್ದರಾಮಯ್ಯ ೬೫೬ ಕೋಟಿ ವೆಚ್ಚದ ೪೩ ಕಾಮಗಾರಿಗಳ ಶಂಕುಸ್ಥಾಪನೆ, ೬೦೭ ಕೋಟಿ ರೂ ವೆಚ್ಚದ ೨೧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದ್ದರು.

ಕೊಲೆ ಘಟನೆಗಳ ಸರಮಾಲೆ:

ಶ್ರೀನಿವಾಸಪುರದಲ್ಲಿ ಜಿ.ಪಂ ಮಾಜಿ ಸದಸ್ಯ ಕೌನ್ಸಿಲರ್ ಶ್ರೀನಿವಾಸ್ ಕೊಲೆ, ನಂಬಳ್ಳಿಯಲ್ಲಿ ಮಹಿಳೆಯ ಕೊಲೆ, ನಗರದಲ್ಲಿ ಅಪ್ರಪ್ತ ಬಾಲಕ ಕಾರ್ತಿಕ್ ಸಿಂಗ್ ಕೊಲೆ , ಚಲ್ದಿಗಾನಹಳ್ಳಿ ದಲಿತ ವಿದ್ಯಾರ್ಥಿ ರಾಕೇಶ್ ಕೊಲೆ ಹಾಗೂ ಮಾಲೂರಿನಲ್ಲಿ ಗ್ರಾ.ಪಂ ಸದಸ್ಯ ಅನಿಲ್ ಕುಮಾರ್ ಕೊಲೆ ಪ್ರಕರಣಗಳು ಜನತೆಯನ್ನು ಬೆಚ್ಚಿ ಬೀಳಿಸಿತು. .

ಬಕ್ರೀದ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಕೋಲಾರ ಕ್ಲಾಕ್ ಟವರ್ ವೃತ್ತದಲ್ಲಿ ತಲ್ವಾರ್ ನಿರ್ಮಾಣ ಮಾಡಿ ಸ್ವಾಗತ ಕೋರಲಾಗುತ್ತಿತ್ತು, ಇದಕ್ಕೆ ಕೆಲ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಕಾರ್ಯಕ್ರಮದ ಆಯೋಜಕರಿಂದಲೇ ತಲ್ವಾರ್‌ನ್ನು ತೆರವುಗೊಳಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.

ಅರಣ್ಯ ಭೂಮಿ ತೆರವು ಪ್ರಕರಣ:

ರೈತರನ್ನು ಒಕ್ಕಲೆಬ್ಬಿಸಿದ ಅರಣ್ಯ ಇಲಾಖಾಧಿಕಾರಿಗಳು ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕೇತಗಾನಹಳ್ಳಿ, ಅಲಂಬಗಿರಿ, ಪಾತಪಲ್ಲಿ ಅರಣ್ಯ ಜಮೀನು ಒತ್ತುವರಿ ತೆರವು ಮಾಡಿದರು. ಇದರಿಂದಾಗಿ ನೂರಾರು ರೈತರ ಬೆಳೆಗಳು ಮಣ್ಣು ಪಾಲಾದವು.

ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಕಲ್ಪಿಸಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಜನತಾ ದರ್ಶನ ನಡೆಸಲು ಆದೇಶಿತು, ಅದೇ ಪ್ರಕಾರ ಕೋಲಾರ ಜಿಲ್ಲೆಯಲ್ಲಿ ಅ.೨೫ರಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಜಿ.ಪಂ ಸಿಇಒ, ಎಸ್ಪಿ ಸಮ್ಮುಖದಲ್ಲಿ ಜಿಲ್ಲಾಮಟ್ಟದ ಜನತಾ ದರ್ಶನ ಏರ್ಪಡಿಸಲಾಗಿತ್ತು.

ಸಂಸದ, ಶಾಸಕರ ನಡುವೆ ವಾಗ್ವಾದ:

ರೈತರ ಪರವಾಗಿ ಮನವಿ ಸಲ್ಲಿಸಲು ಆಗಲಿಸಿದ್ದ ಸಂಸದ ಮುನಿಸ್ವಾಮಿ, ಕಾಂಗ್ರೆಸ್ ಶಾಸಕರನ್ನು ಕೆಣಕಿದರು, ಶಾಸಕರ ಹಾಗೂ ಸಂಸದರ ನಡುವಿನ ಮಾತಿನ ಚಕಮಕಿಗೆ ಕಾರಣವಾಗಿ, ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರ ಎಚ್ಚರದಿಂದ ಪರಿಸ್ಥಿತಿ ಹತೋಟಿಗೆ ಬಂದಿತು. ಜಿಲ್ಲೆಯಲ್ಲಿ ನಡೆದಿದ್ದು ಜನತಾ ದರ್ಶನವಲ್ಲ, ಜಗಳ ದರ್ಶನ ಎಂಬಂತಾಯಿತು.

Share this article