ಅರಸೀಕೆರೆ: ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆ, ಶೋಷಣೆಯ ವಿರುದ್ಧದ ಹೋರಾಟ ಹಾಗೂ ಕಾಯಕ , ದಾಸೋಹ ತತ್ವಗಳ ಮೂಲಕ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದ ಮಹಾತ್ಮ. ಜಾತಿ, ಲಿಂಗ, ವರ್ಗ ಭೇದವಿಲ್ಲದೆ ಮಾನವತ್ವವನ್ನೇ ಧರ್ಮದ ಕೇಂದ್ರಬಿಂದುವಾಗಿಸಿದ ಬಸವಣ್ಣರ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ಆದರ್ಶಗಳು ಸಮಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ. ಆದರೆ ನಗರದಲ್ಲಿ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಕಾರ್ಯವನ್ನು ತಡೆಯಲು ಕಾಣದ ಕೈಗಳು ವ್ಯವಸ್ಥಿತ ಸಂಚು ರೂಪಿಸುತ್ತಿವೆ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಮುರುಂಡಿ ಶಿವಯ್ಯ ಸೇರಿದಂತೆ ಮುಖಂಡರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಸವ ತತ್ವ ಅನುಯಾಯಿಗಳು ಹಾಗೂ ತಾಲೂಕಿನ ಜನತೆಯ ದೀರ್ಘಕಾಲದ ಬೇಡಿಕೆಯಾದ ಬಸವೇಶ್ವರರ ಬೃಹತ್ ಅಶ್ವಾರೂಢ ಪ್ರತಿಮೆ ಸ್ಥಾಪನೆಗೆ ಇದೀಗ ಕಾಲ ಕೂಡಿ ಬಂದಿದೆ ಎಂದು ತಿಳಿಸಿದರು.ಸ್ವತಃ ಶಾಸಕ ಕೆ.ಎಂ. ಶಿವಲಿಂಗೇಗೌಡ ಈ ಯೋಜನೆಗೆ ವಿಶೇಷ ಆಸಕ್ತಿ ವಹಿಸಿದ್ದು, ಸರ್ಕಾರದಿಂದ 40 ಲಕ್ಷ ರು. ಅನುದಾನ ತರಲಾಗಿದೆ. ಪ್ರತಿಮೆ ಸ್ಥಾಪನೆಗೆ ಸೂಕ್ತ ಸ್ಥಳವನ್ನೂ ಈಗಾಗಲೇ ಗುರುತಿಸಲಾಗಿದ್ದು, ನಗರಸಭೆಯು ಅಧಿಕೃತ ಅನುಮತಿಯನ್ನು ನೀಡಿದೆ. ಇಂತಹ ಸಂದರ್ಭದಲ್ಲಿ ಕೆಲವರು ದುರುದ್ದೇಶಪೂರಿತವಾಗಿ ಪ್ರತಿಮೆ ಸ್ಥಾಪನೆಗೆ ಅಡ್ಡಿಪಡಿಸುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪ್ರತಿಮೆ ಸ್ಥಾಪನೆಗೆ ಗುರುತಿಸಿದ ಜಾಗ ನಗರಸಭೆಗೆ ಸೇರಿದ್ದರೂ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಆ ಜಾಗ ಸಾರಿಗೆ ಸಂಸ್ಥೆಗೆ ಸೇರಿದೆ ಎಂದು ತಗಾದೆ ತೆಗೆದಿರುವುದರ ಹಿಂದೆ ಕಾಣದ ಕೈಗಳು ಕಾರ್ಯನಿರ್ವಹಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು. ನೂತನ ಬಸ್ ನಿಲ್ದಾಣಕ್ಕೆ ಬಸವೇಶ್ವರರ ಹೆಸರಿಡಲಾಗುವುದಾಗಿ ಈಗಾಗಲೇ ಘೋಷಣೆ ಆಗಿದ್ದರೂ, ಪ್ರತಿಮೆ ಸ್ಥಾಪನೆಗೆ ಅಡ್ಡಿ ಮಾಡುತ್ತಿರುವುದನ್ನು ಸಹಿಸುವುದಿಲ್ಲ ಎಂದರು.ಮಾಜಿ ಸಚಿವರ ಹೇಳಿಕೆಗೆ ವಿರೋಧ: