ಜಾತ್ರಾ ಮಹೋತ್ಸವದ ಕುರಿತು ಆದಿಹಳ್ಳಿ ಶಾಖಾಮಠದಲ್ಲಿ ಮಾಹಿತಿ ನೀಡಿದ ಅವರು, ಆದಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಏಳು ಹಳ್ಳಿಗಳ ಗ್ರಾಮಸ್ಥರು ಪೀಳಿಗೆಗಳಿಂದ ಭಕ್ತಿ, ಶ್ರದ್ಧೆ ಮತ್ತು ನಂಬಿಕೆಯಿಂದ ಈ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ ಗಂಡಸಿ, ಬಾಗೇಶಪುರ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಹ ಈ ಜಾತ್ರೆಗೆ ಅಪಾರ ಭಕ್ತಿಭಾವದಿಂದ ಭಾಗವಹಿಸುತ್ತಾರೆ. ಈ ಕ್ಷೇತ್ರದ ಜಾತ್ರೆ ಮುಗಿದ ಬಳಿಕವೇ ಅನೇಕ ಗ್ರಾಮಗಳಲ್ಲಿ ಇತರ ಜಾತ್ರೆಗಳು ಆರಂಭವಾಗುವ ಪರಂಪರೆ ಇಂದಿಗೂ ಮುಂದುವರಿಯುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸಾವಿರಾರು ವರ್ಷಗಳ ಇತಿಹಾಸ, ಆಳವಾದ ಭಕ್ತಿಪರಂಪರೆ ಮತ್ತು ಗ್ರಾಮೀಣ ಸಂಸ್ಕೃತಿಯ ವೈಭವವನ್ನು ಹೊತ್ತ ಶ್ರೀ ಆದಿಲಕ್ಷ್ಮೀ ಅಮ್ಮನವರ ಬೃಹತ್ ಜಾತ್ರಾ ಮಹೋತ್ಸವ ಇದೇ ಏಪ್ರಿಲ್ 3ರಿಂದ 5ರವರೆಗೆ ತಾಲೂಕಿನ ಗಂಡಸಿ ಹೋಬಳಿಯ ಆದಿಹಳ್ಳಿಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದಲ್ಲಿ ವಿಜೃಂಭಣೆಯಿಂದ ನಡೆಯಲಿದ್ದು, ಈ ಬಾರಿಯ ಉತ್ಸವವು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಸಂಪ್ರದಾಯಬದ್ಧ ಆಚರಣೆಗಳು ಹಾಗೂ ಭಕ್ತ ಸಮಾಗಮದಿಂದ ಇನ್ನಷ್ಟು ಭವ್ಯವಾಗಿ ರೂಪುಗೊಳ್ಳಲಿದೆ ಎಂದು ಹಾಸನ ಆದಿಚುಂಚನಗಿರಿ ಮಠದ ಶಂಭುನಾಥ ಸ್ವಾಮೀಜಿ ತಿಳಿಸಿದ್ದಾರೆ.ಜಾತ್ರಾ ಮಹೋತ್ಸವದ ಕುರಿತು ಆದಿಹಳ್ಳಿ ಶಾಖಾಮಠದಲ್ಲಿ ಮಾಹಿತಿ ನೀಡಿದ ಅವರು, ಆದಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಏಳು ಹಳ್ಳಿಗಳ ಗ್ರಾಮಸ್ಥರು ಪೀಳಿಗೆಗಳಿಂದ ಭಕ್ತಿ, ಶ್ರದ್ಧೆ ಮತ್ತು ನಂಬಿಕೆಯಿಂದ ಈ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ ಗಂಡಸಿ, ಬಾಗೇಶಪುರ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಹ ಈ ಜಾತ್ರೆಗೆ ಅಪಾರ ಭಕ್ತಿಭಾವದಿಂದ ಭಾಗವಹಿಸುತ್ತಾರೆ. ಈ ಕ್ಷೇತ್ರದ ಜಾತ್ರೆ ಮುಗಿದ ಬಳಿಕವೇ ಅನೇಕ ಗ್ರಾಮಗಳಲ್ಲಿ ಇತರ ಜಾತ್ರೆಗಳು ಆರಂಭವಾಗುವ ಪರಂಪರೆ ಇಂದಿಗೂ ಮುಂದುವರಿಯುತ್ತಿದೆ ಎಂದರು.ಈ ಭೈರವೈಕ್ಯ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಸಂಕಲ್ಪದಂತೆ ಹಾಗೂ ಪ್ರಸ್ತುತು ಚುಂಚನಗಿರಿ ಪೀಠಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆಯಲಿದ್ದು, ಏ.3ರಂದು ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಪ್ರಾತಃಕಾಲದಲ್ಲಿ ಪುಣ್ಯಾಹ, ರುದ್ರಾಭಿಷೇಕ, ವಿಶೇಷ ಷೋಡಶೋಪಚಾರ ಪೂಜೆ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗುವುದು. ಇದೇ ದಿನ ಸಂಜೆ ಗ್ರಾಮಸ್ಥರು ಸಂಪ್ರದಾಯದಂತೆ ಬಾಯಿಗೆ ಬೀಗ ಹಾಕಿಸಿಕೊಂಡು ಹರಕೆ ಸಲ್ಲಿಸುವ ವಿಶೇಷ ಆಚರಣೆ ನಡೆಯಲಿದ್ದು, ಇದು ಜಾತ್ರೆಯ ವಿಶಿಷ್ಟ ಆಕರ್ಷಣೆಯಾಗಿ ಗುರುತಿಸಿಕೊಂಡಿದೆ.ಏ.4ರಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಕೆಂಡೋತ್ಸವ ನಡೆಯಲಿದ್ದು, ಭಕ್ತರ ನಂಬಿಕೆ ಮತ್ತು ಹರಕೆಯ ಪ್ರತೀಕವಾಗಿರುವ ಈ ಆಚರಣೆ ವಿಶೇಷ ಭಕ್ತಿಭಾವದಿಂದ ನೆರವೇರಲಿದೆ. ಸಂಪ್ರದಾಯದಂತೆ ಯಡೆ ಸೇವೆ ಕೂಡ ನಡೆಯಲಿದೆ. ಸಂಪ್ರದಾಯದಂತೆ ಮುಂದುವರಿದಿರುವ ಆಚರಣೆಯಂತೆ, ದೇವಿಯ ಕಳಸವಣ್ಣ 8 ವರ್ಷದ ಒಳಗಿನ ಹೆಣ್ಣು ಮಗು ಒರುವ ಸಂಪ್ರದಾಯವಿದ್ದು ಕೆಂಡೋತ್ಸವದಲ್ಲಿ ಪಾಲ್ಗೊಳ್ಳುವುದು ದೇವಿಯ ಮಹಿಮೆಯಾಗಿದೆ. ಅದೇ ದಿನ ಸಂಜೆ 5 ಗಂಟೆಗೆ ಬ್ರಹ್ಮರಥೋತ್ಸವ ಜರುಗಲಿದ್ದು, ಭಕ್ತರು ದೇವಿಯ ದರ್ಶನಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಬಳಿಕ ಸಂಜೆ 6 ಗಂಟೆಗೆ ಧಾರ್ಮಿಕ ಸಮಾರಂಭ ಆಯೋಜಿಸಲ್ಪಟ್ಟಿದ್ದು, ಅದರಲ್ಲಿ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಭಾಗವಹಿಸಿ ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ 139ನೇ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಪವಿತ್ರ ಹುಣ್ಣಿಮೆ ಕಾರ್ಯಕ್ರಮ ಸಹ ಅದ್ದೂರಿಯಾಗಿ ನಡೆಯಲಿದ್ದು, ಈ ಕ್ಷೇತ್ರದಲ್ಲಿ ಪ್ರತಿಮಾಸವೂ ನಡೆಯುವ ಹುಣ್ಣಿಮೆ ಕಾರ್ಯಕ್ರಮಕ್ಕೆ ವಿಶೇಷ ಆಧ್ಯಾತ್ಮಿಕ ಮಹತ್ವವಿದೆ ಎಂದು ತಿಳಿಸಿದರು.ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರು, ಸ್ಥಳೀಯ ಮುಖಂಡರು, ಶ್ರೀಮಠದ ಭಕ್ತರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಏ. 5ರಂದು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ಸಿಡಿ ಉತ್ಸವ ಮತ್ತು ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ರಥೋತ್ಸವದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಭಕ್ತರ ಜಯಘೋಷದ ನಡುವೆ ರಥದಲ್ಲಿ ವೀಕ್ಷಣೆಗೆ ಕರೆತರಲಾಗುತ್ತದೆ. ದೇವಿಯ ಮಹಾರಥವನ್ನು ಎಳೆಯುವ ಈ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬಳಿಕ ಪ್ರಸಾದ ವಿನಿಯೋಗದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.ಈ ಬೃಹತ್ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಸ್ವಯಂಸೇವಕರು ಸಹ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದು, ಭಕ್ತರಿಗೆ ಮಾರ್ಗದರ್ಶನ, ವ್ಯವಸ್ಥೆ ಮತ್ತು ಶಿಸ್ತು ಪಾಲನೆಯಲ್ಲಿ ಸಹಕರಿಸಲಿದ್ದಾರೆ.ಜಾತ್ರಾ ಮಹೋತ್ಸವವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲದೆ, ಗ್ರಾಮೀಣ ಭಕ್ತಿ, ಸಂಸ್ಕೃತಿ, ಪರಂಪರೆ ಮತ್ತು ಜನಪರ ನಂಬಿಕೆಯ ಸಂಗಮವಾಗಿದೆ ಎಂದು ಹೇಳಿರುವ ಶ್ರೀ ಶಂಭುನಾಥ ಸ್ವಾಮೀಜಿ, ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.