ಪುತ್ತೂರು: ರೈತ ಭದ್ರವಾದಾಗ ದೇಶ ಸುಭದ್ರ. ಈ ನಿಟ್ಟಿನಲ್ಲಿ ಗ್ರಾಮಜನ್ಯ ಸಂಸ್ಥೆಯಿಂದ ರೈತರಿಗೆ ಶಕ್ತಿ ನೀಡುವ ಕೆಲಸವಾಗಿದೆ. ರೈತರನ್ನು ಸದೃಢಗೊಳಿಸುವ ಸ್ವಾರ್ಥ ರಹಿತ ಸೇವೆಯ ಮೂಲಕ ಗ್ರಾಮಜನ್ಯ ಸಂಸ್ಥೆಯು ಆತ್ಮನಿರ್ಭರ ಭಾರತಕ್ಕೆ ದಿಟ್ಟ ಹೆಜ್ಜೆ ಇಟ್ಟಿರುವುದು ಅಭಿನಂದನೀಯ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಹೇಳಿದ್ದಾರೆ.
ಸಂಸ್ಥೆ ಆಧುನಿಕ ಶೈತ್ಯಾಗಾರ ಪ್ರಾರಂಭಿಸಿದ್ದು, ಇನ್ನು ರೈತ ಬೆಳೆದ ಹಣ್ಣ, ತರಕಾರಿಗಳು ಕೊಳೆತು ಬಿಸಾಡುವ ಪ್ರಮೇಯ ಇಲ್ಲ. ಮುಂದಿನ ಅಧಿವೇಶನದಲ್ಲಿ ಗ್ರಾಮಜನ್ಯದ ಸಾಧನೆಯನ್ನು ತಿಳಿಸುವ ಮೂಲಕ ರಾಜ್ಯದಾದ್ಯಂತ ಪಸರಿಸಲಾಗುವುದು ಎಂದರು.
ಮುಳಿಯ ಜ್ಯುವೆಲ್ಸ್‌ನ ಮುಖ್ಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ಗ್ರಾಮಜನ್ಯ ಸಂಸ್ಥೆಯು ಇಂದು ಅಗಾಧವಾಗಿ ಬೆಳೆದು ಇಂದು ಕೃಷಿಗೆ ಪೂರಕವಾಗಿ ಶಕ್ತಿ ನೀಡುವ ಕೆಲಸವಾಗುತ್ತಿದೆ. ಪುತ್ತೂರು ತಾಲೂಕಿಗೆ ೫೦೦-೧೦೦೦ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್‌ನ ಅವಶ್ಯಕತೆಯಿದೆ. ಇದರಲ್ಲಿ ಗ್ರಾಮಜನ್ಯ ಸಂಸ್ಥೆಯ ಪ್ರಥಮ ಹೆಜ್ಜೆಯಿಟ್ಟಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಮೂಲಚಂದ್ರ ಕುಕ್ಕಾಡಿ ಮಾತನಾಡಿ, ರೈತರ ಆದಾಯ ದ್ವಿಗುಣ ಮಾಡಬೇಕು ಎಂಬ ದೇಶದ ಪ್ರಧಾನಿ ಆಶಯವಿದೆ. ಅದೇ ಮೂಲ ಉದ್ದೇಶದಂದ ಹೊಸ ಸಾಹಸಕ್ಕೆ ಕೈ ಹಾಕಿದ್ದೇವೆ. ಶೈತ್ಯಾಗಾರದ ಮುಖಾಂತರ ರೈತರು ಬೆಳೆದ ತರಕಾರಿ, ಹಣ್ಣು, ಆಹಾರ ವಸ್ತುಗಳನ್ನು ದೀರ್ಘ ಕಾಲ ಸಂಗ್ರಹಿಸಿಡಲು ಅವಕಾಶವಿದೆ. ಜೊತೆಗೆ ಮೌಲ್ಯ ವರ್ಧನೆಗೂ ಸಹಕಾರಿಯಾಗಲಿದೆ ಎಂದರು.ಪ್ರಾಸ್ತಾವಿಕ ಮಾತನಾಡಿದ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ರಾಮ್‌ಪ್ರತೀಕ್, ೨೦೨೩ರಲ್ಲಿ ವಿವೇಕಾನಂದ ನಡೆದ ಕೃಷಿ ಮೇಳದ ಪರಿಣಾಮವಾಗಿ ಗ್ರಾಮಜನ್ಯ ಸಂಸ್ಥೆಯ ಕಾರ್ಯವು ರಾಷ್ಟ್ರೀಯ ಮಾಧ್ಯಮದಲ್ಲಿ ಪ್ರಸಾರವಾಗಿರುವುದನ್ನು ಕಂಡ ದೆಹಲಿಯಿಂದ ಇಲಾಖೆಯ ಅಧಿಕಾರಿಯೊಬ್ಬರು ಕರೆ ಮಾಡಿದರು. ಸರ್ಕಾರದ ವಿವಿಧ ಯೋಜನೆಗಳಲ್ಲಿ ಅನುದಾನಗಳು ದೊರೆಯುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು ಎಂದರು.ನಮ್ಮ ಸಣ್ಣ ಯೋಜನೆಗೆ ಇಲಾಖೆಯವರು ೫ ಕೋಟಿ ರು. ಅನುದಾನದ ಸಲಹೆ ನೀಡಿದ್ದರು. ಕೇಂದ್ರ ಸರ್ಕಾರದ ೨ ಕೋಟಿ ಅನುದಾನ ಹಾಗೂ ೩ ಕೋಟಿ ರು. ಬ್ಯಾಂಕ್ ಸಾಲ ಸೇರಿದಂತೆ ಕಟ್ಟಡ ನಿರ್ಮಿಸಿ, ಯಂತ್ರೋಪಕರಣಗಳ ಖರೀದಿ ಮಾಡಿದೆ ಎಂದರು.ಜಿಲ್ಲೆಯಲ್ಲಿ ಉತ್ಕೃಷ್ಣ ಗುಣಮಟ್ಟದ ಖಾಸಗಿ ಲ್ಯಾಬೋರೇಟರಿ ಗ್ರಾಮ ಜನ್ಯದಲ್ಲಿ ಮಾತ್ರ ಇದ್ದು ೧೨ ರೀತಿಯಲ್ಲಿ ಜೇನಿನ ಗುಣಮಟ್ಟ ಪರೀಕ್ಷಿಸಬಹುದು. ಪ್ರತಿ ದಿನ ೧೫ ಟನ್ ಜೇನು ಸಂಸ್ಕರಿಸುವ ಸಾಮರ್ಥ್ಯ ಸಂಸ್ಥೆಯಲ್ಲಿದೆ. ಕೃಷಿಕರಿಗೆ, ಉದ್ಯಮಿಗಳು ಹಾಗೂ ಸಂಸ್ಥೆ ಒಂದಕ್ಕೊಂದು ಪೂರಕವಾಗಿ ಬೆಳೆಯಲು ಆಧುನಿಕ ಕೋಲ್ಡ್ ಸ್ಟೋರೇಜ್ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ, ಶೈತ್ಯಾಗಾರದ ಪ್ರಥಮ ಗ್ರಾಹಕ ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಮ್‌ಕಿಶೋರ್, ನಿತ್ಯ ಚಪಾತಿಯ ರಾಧಾಕೃಷ್ಣ ಇಟ್ಟಿಗುಂಡಿ ಅವರನ್ನು ಗೌರವಿಸಲಾಯಿತು.
ಸಂಸ್ಥೆಯಿಂದ ಜೇನಿನ ಗಿಫ್ಟ್ ಪ್ಯಾಕ್‌ಗಳನ್ನು ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್‌ಕಿ ಬಾತ್‌ನಲ್ಲಿ ಸಂಸ್ಥೆಯ ಜೇನು ಉತ್ಪನ್ನದ ಬಗ್ಗೆ ಉಲ್ಲೇಖಿಸಿದ್ದು ಶೀಘ್ರವೇ ಸಂಸ್ಥೆ ಜೇನಿನ ಉತ್ಪನ್ನ ಪ್ರಧಾನಿಗೆ ತಲುಪಿಸಿ ಸವಿಯುವಂತೆ ಮಾಡಲಾಗುವುದು. -ರಾಮ್‌ಪ್ರತೀಕ್, ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ